ನೂರು ಹಾಸಿಗೆ ಆಸ್ಪತ್ರೆಗೆ ನೂರಾರು ಸಮಸ್ಯೆ!
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 7
ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ನೂರಾರು ಸಮಸ್ಯೆಗಳು ತಾಂಡವಾಡುತ್ತಿವೆ. ಈ ಆಸ್ಪತ್ರೆ ಸಾಕಷ್ಟು ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದು, ಔಷಧೋಪಚಾರ ಸರಬರಾಜು ಆಗುತ್ತಿಲ್ಲ.
ನಗರದ ನೂರು ಹಾಸಿಗೆ ಆಸ್ಪತ್ರೆಯನ್ನು 250 ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಈ ಹಿಂದಿನ ಅನೇಕ ಜನಪ್ರತಿನಿಧಿಗಳು ಭರವಸೆ ನೀಡಿ ಹೋಗಿದ್ದಾರೆ. ಇಲ್ಲಿವರೆಗೂ ನೂರು ಹಾಸಿಗೆ ಆಸ್ಪತ್ರೆ 250 ಹಾಸಿಗೆ ಆಸ್ಪತ್ರೆಯನ್ನಾಗಿ ಮಾಡುವ ಯಾವುದೇ ಕಾರ್ಯ ಇದುವರೆಗೂ ಮಾಡಿಲ್ಲ. ಕನಿಷ್ಠ ನೂರು ಹಾಸಿಗೆ ಆಸ್ಪತ್ರೆಯನ್ನು 150 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕಾಗಿತ್ತು. ಆ ಕಾರ್ಯಕ್ಕೂ ಮುಂದಾಗಿಲ್ಲ.
ವೈದ್ಯರ ಕೊರತೆ: ಈಗಿರುವ ನೂರು ಹಾಸಿಗೆ ಅಸ್ಪತ್ರೆಗೆ ಮಂಜೂರಾದ ಹುದ್ದೆಗಳು 100. ಆದರೆ ಕಾರ್ಯನಿರ್ವಹಿಸುತ್ತಿರುವುದು 58 ಮಾತ್ರ. ಉಳಿದ 42 ಹುದ್ದೆಗಳು ಖಾಲಿ ಇವೆ. 16ರಿಂದ 18 ವೈದ್ಯರು ಬೇಕಿರುವ ಜಾಗಕ್ಕೆ 11 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 4 ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. 6 ವೈದ್ಯರ ಹುದ್ದೆಗಳು ಖಾಲಿ ಇವೆ. ಇವರಲ್ಲಿ ಮುಖ್ಯವಾಗಿ ಶಸ್ತ್ರಚಿಕಿತ್ಸಕರ ಹುದ್ದೆ ಖಾಲಿ ಇದೆ. ಚರ್ಮ ತಜ್ಞರು, ಮಕ್ಕಳ ತಜ್ಞರು, ಮೂತ್ರರೋಗ ತಜ್ಞರು, ಕ್ಷ-ಕಿರಣ ತಜ್ಞರು, ವೈದ್ಯಕೀಯ ತಜ್ಞರು, ಹೆರಿಗೆ ತಜ್ಞರು ಸೇರಿದಂತೆ ಇತರೆ ವೈದ್ಯರ ಕೊರತೆ ಇದೆ. ಆಸ್ಪತ್ರೆಗೆ ಬಂದು ಹೋಗುವ ರೋಗಿಗಳನ್ನು ನೋಡುವ ಜನರಲ್ ಸೇವೆ ಮಾಡುವ ವೈದ್ಯರ ಕೊರತೆಯನ್ನು ಆಸ್ಪತ್ರೆ ಅನುಭವಿಸುತ್ತಿದೆ. ವೈದ್ಯರ ಕೊರತೆಯನ್ನು ಇದುವರೆಗೂ ತುಂಬಿಲ್ಲ. ಶುಶ್ರೂಷಕರ 3 ಹುದ್ದೆಗಳು, ಹಿರಿಯ ವೈದ್ಯೇತರ ಮೇಲ್ವಿಚಾರಕರು 2 ಹುದ್ದೆ, ಕ್ಷೇತ್ರ ಆರೋಗ್ಯ ಶಿಕ್ಷಕರು, ಹಿರಿಯ ಫಾರ್ಮಸಿಸ್ಟ್, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರು, ಫಿಜಿಯೋಥೆರಪಿಸ್ಟ್, ಪ್ರಥಮ ದರ್ಜೆ ಸಹಾಯಕರ 2 ಹುದ್ದೆ, ನೇತ್ರ ಸಹಾಯಕರು, ಡಯಾಲಿಸಿಸ್ ಟೆಕ್ನಿಷನ್ 2 ಹುದ್ದೆ, ಇಸಿಜಿ ಟೆಕ್ನಿಷಿಯನ್, ಕಿರಿಯ ಆರೋಗ್ಯ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ 2 ಹುದ್ದೆ, ಬೆರಳಚ್ಚು ಹಾಗೂ ಸಹಾಯಕರು, ಗ್ರೂಪ್ ಡಿ ನೌಕರರ 16 ಹುದ್ದೆಗಳು ಖಾಲಿ ಇವೆ.
ಸ್ವಚ್ಛತೆ ಇಲ್ಲ: ಕಟ್ಟಡ ಎಲ್ಲೆಂದರಲ್ಲಿ ಸೋರುತ್ತದೆ. ಕಿಟಿಕಿಗಳಿಗೆ ಗಾಜುಗಳಿಲ್ಲ. ಶೌಚಾಲಯಗಳು ಸ್ವಚ್ಛವಿಲ್ಲದೇ ರೋಗಿಗಳು ಮೂಗು ಮುಚ್ಚಿಕೊಂಡು ಅವುಗಳನ್ನು ಬಳಸಬೇಕು. ಆಸ್ಪತ್ರೆ ಬಹುತೇಕ ವಾರ್ಡ್ಗಳು ದುರ್ನಾತ ಬೀರುತ್ತಿವೆ. ಆಸ್ಪತ್ರೆ ಹಂದಿಗಳ, ಬೀಡಾಡಿ ದನಗಳು, ಬೀದಿ ನಾಯಿಗಳ ತಾಣವಾಗಿ ಬಿಟ್ಟಿದೆ. ವೈದ್ಯರ ಕೊರತೆಯಿಂದಾಗಿ ಇದ್ದ ವೈದ್ಯರ ಮೇಲೆ ಒತ್ತಡ ಹೆಚ್ಚಾಗಿ ಕೆಲವರು ಸ್ವಯಂ ನಿವೃತ್ತಿ ಪಡೆದುಕೊಂಡು ತಮ್ಮ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಈ ಆಸ್ಪತ್ರೆಗೆ ಸ್ಥಳೀಯರಲ್ಲದೇ ಹೊರ ರಾಜ್ಯಗಳಿಂದಲೂ ನಿತ್ಯ ರೋಗಿಗಳು ಬರುತ್ತಿದ್ದು, ರೋಗಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಿದೆ.
ಸಿ.ಕೆ. ನಾಗರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

