ಬಳ್ಳಾರಿ

ಮಕ್ಕಳಲ್ಲಿ ಭ್ರಷ್ಟಾಚಾರ ವಿರೋಧಿತನ ಬೆಳೆಸಿ

Published On :

ಹಗರಿಬೊಮ್ಮನಹಳ್ಳಿ: ನಮ್ಮ ಮಕ್ಕಳು ಕಲಿಯುತ್ತಿರುವ ಪಠ್ಯಕ್ರಮ ಅತ್ಯಂತ ದುರ್ಬಲವಾಗಿದೆ. ಮಕ್ಕಳಲ್ಲಿ ಭ್ರಷ್ಟಾಚಾರ ವಿರೋಧಿ ಭಾವನೆ ಬೆಳೆಸುವ ಮತ್ತು ಅವರಲ್ಲಿ ಭ್ರಷ್ಟಾಚಾರದ ವಿರುದ್ಧ ಬಡಿದೇಳಿಸುವ ಪಠ್ಯಕ್ರಮ ಇಂದು ತೀರಾ ಅಗತ್ಯವಿದ್ದು, ಇದು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ಆರಂಭವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಕುಂ. ವೀರಭದ್ರಪ್ಪ ಅಭಿಪ್ರಾಯಿಸಿದ್ದಾರೆ.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಸಾಲ್ಮನಿ ಪ್ರಕಾಶನ ಸೋಮವಾರ ಆಯೋಜಿಸಿದ್ದ ಸಾಹಿತಿ ಡಿ. ರಾಮನಮಲಿ ತಂಬ್ರಹಳ್ಳಿ ವಿರಚಿತ ಹಳ್ಳಿದೀಪ ಬಿಷ್ಟಪ್ಪ ಸಾಲ್ಮನಿ ಜೀವನ ಮತ್ತು ಸಾಧನೆ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕ ಸೇರಿದಂತೆ ದೇಶವ್ಯಾಪ್ತಿ ಭ್ರಷ್ಟಾಚಾರ ವಿಷಮ ಪರಿಸ್ಥಿತಿಯಂತೆ ಅವರಿಸಿದೆ. ಇಲ್ಲಿವರೆಗೂ ರಾಜಕೀಯ ಕ್ಷೇತ್ರದಲ್ಲಷ್ಟೆ ಕೇಳಿಬರುತ್ತಿದ್ದ ಭ್ರಷ್ಟಾಚಾರ ಈಗ ಕ್ರೀಡೆಯಿಂದ ಹಿಡಿದು ಎಲ್ಲ ಕ್ಷೇತ್ರ, ವಲಯಗಳಿಗೂ ಕಾಲಿಟ್ಟಿದೆ. ರಾಕೆಟ್‌ಗಿಂತಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸದಿದ್ದರೆ ರಾಷ್ಟ್ರಕ್ಕೆ ದೊಡ್ಡ ಅಪಾಯಕಾರಿಯಾಗಿ ಪರಿಣಮಿಸಲಿದೆ. ಹೀಗಾಗಿ ಪಠ್ಯಕ್ರಮದಲ್ಲೇ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ವಿಷಯಗಳನ್ನು ಅಳವಡಿಸುವ ಮೂಲಕ ಭವಿಷ್ಯತ್ತಿನಲ್ಲಿ ಭಾರತವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದರು.
ಬೇರೆ ಸಂದೇಶ: ದೇಶದಲ್ಲಿರುವ ನೋಂದಾಯಿತ ಎಲ್ಲ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಬರುವುದಕ್ಕೆ ಹಲವು ರಾಜಕೀಯ ಪಕ್ಷಗಳು ಆಕ್ಷೇಪವೆತ್ತಿರುವುದು ನಮ್ಮ ದುರ್ದೈವ. ಜನಸೇವೆ ಮಾಡುವ ಸಲುವಾಗಿ ಹುಟ್ಟಿಕೊಂಡಿರುವ ಪಕ್ಷಗಳ ವ್ಯವಹಾರ ಕೂಡ ಪಾರದರ್ಶಕವಾಗಿರಬೇಕು. ಮಾಹಿತಿ ಹಕ್ಕಿನಡಿ ಬರಲು ಇವರ್ಯಾಕೆ ವಿರೋಧ ವ್ಯಕ್ತಪಡಿಸುತ್ತಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಬೇರೆ ಸಂದೇಶ ಹೋಗುತ್ತದೆ ಎಂದರು.
ನಂದಿಪುರದ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುರುಕಡ್ಲಿ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದ ಉಪನಿರ್ದೇಶಕ ಈರಪ್ಪ ಕಂಬಳಿ ಪುಸ್ತಕ ಪರಿಚಯಿಸಿದರು. ಅಕ್ಕಿ ಕೊಟ್ರಪ್ಪ, ಎಚ್.ಬಿ. ನಾಗನಗೌಡ, ಲೇಖಕ ಡಿ. ರಾಮನಮಲಿ ತಂಬ್ರಹಳ್ಳಿ, ಸಾಲ್ಮನಿ ದೇವಿಪ್ರಸಾದ್, ಹರಪ್ಪನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ರಾಮಪ್ರಸಾದ್ ಗಾಂಧಿ, ಕಿನ್ನಾಳ ಶಿವಾನಂದ, ಗ್ರಾಪಂ ಅಧ್ಯಕ್ಷೆ ಗೌರಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಚ್.ಬಿ. ಗಂಗಾಧರಗೌಡ ಸ್ವಾಗತಿಸಿ, ಶೈಲಜಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.