ತಾಲೂಕು ರಚನೆ: ಮತ್ತೆ ಚಿಗುರಿತು ಆಶಾಭಾವ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 13
ಬಿಜೆಪಿ ಘೋಷಿಸಿದ ಹೊಸ ತಾಲೂಕುಗಳ ರಚನೆಯನ್ನು ತಿರಸ್ಕರಿಸಿದ್ದ ಕಾಂಗ್ರೆಸ್ ಸರ್ಕಾರ, ಘೋಷಣೆಯಾಗಿದ್ದ 43 ತಾಲೂಕುಗಳ ಪೈಕಿ ನಾಲ್ಕೈದು ಪಟ್ಟಣಗಳನ್ನು ಹೊರತುಪಡಿಸಿ ನೂತನ ತಾಲೂಕಗಳ ರಚನೆಯನ್ನು ಮಾಡಲಾಗುವುದು ಎಂದು ಹೇಳಿದೆ. ಜುಲೈನಲ್ಲಿ ಮಂಡಿಸುವ ಹೊಸ ಸರ್ಕಾರದ ಬಜೆಟ್ನಲ್ಲಿ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಕೊಟ್ಟೂರು ಸೇರಿದಂತೆ ತಾಲೂಕುಗಳ ಪಟ್ಟಿಯಲ್ಲಿರುವ ಪಟ್ಟಣಿಗರ ಆಶಯ ಮತ್ತಷ್ಟು ಗಟ್ಟಿಯಾಗಿದೆ.
ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಹೊಸ ತಾಲೂಕುಗಳ ಘೋಷಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಈ ಮಾತು ತಾಲೂಕಾಗುವ ನಿರೀಕ್ಷೆಯಲ್ಲಿರುವ ಜನರ ಕದಡಿದ ಮನಕ್ಕೆ ಸಮಾಧಾನ ತರಿಸಿದೆ.
ಅಂತೂ ಇಂತೂ ತಮ್ಮ ಪಟ್ಟಣ ತಾಲೂಕು ಆಗುವುದು ಖಂಡಿತ ಎಂಬ ಆಶಾಭಾವನೆ ಪ್ರತಿಯೊಬ್ಬರಲ್ಲೂ ಉಂಟಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಆಡಳಿತಾವಧಿಯ ಕೊನೆ ಗಳಿಗೆಯಲ್ಲಿ ಮಂಡಿಸಿದ ಬಜೆಟ್ನಲ್ಲಿ 43 ಹೊಸ ತಾಲೂಕಗಳ ರಚನೆಯನ್ನು ಪ್ರಕಟಿಸಿದ್ದರು.
ಕೈ ಸರ್ಕಾರ ತಿರಸ್ಕರಿಸಿತ್ತು: ಅನಂತರ ಅಸ್ತಿತ್ವಕ್ಕೆ ಬಂದ ನೂತನ ಕಾಂಗ್ರೆಸ್ ಸರ್ಕಾರದ ಕಂದಾಯ ಸಚಿವ ವಿ. ಶ್ರೀನಿವಾಸ್ಪ್ರಸಾದ್ ಬಿಜೆಪಿ ಸರ್ಕಾರ ಪ್ರಕಟಿಸಿದ ತಾಲೂಕುಗಳ ರಚನೆ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಮೈಸೂರಿನಲ್ಲಿ ಹೇಳಿದ್ದರು. ಇದಾದ ಅನಂತರ ಅಲ್ಲಲ್ಲಿ ಕೆಲ ವಿರೋಧಾಭಿಪ್ರಾಯಗಳು ವ್ಯಕ್ತಗೊಂಡಿದ್ದವು. ಕಂದಾಯ ಸಚಿವರು ಜೂನ್ 10ರಂದು ಹೊಸ ತಾಲೂಕುಗಳ ರಚನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿಕೆ ನೀಡಿದ ಬೆನ್ನ ಹಿಂದೆಯೇ ಇದಾದ ಮೂರು ದಿನಗಳಲ್ಲೇ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಅಧಿಕೃತವಾಗಿ ಸರ್ಕಾರ ತಾಲೂಕು ರಚನೆಗೆ ಬದ್ಧ ಎನ್ನುವುದನ್ನು ಘೋಷಿಸಿದ್ದಾರೆ. ತಾಲೂಕು ರಚನೆಗಾಗಿಯೇ ಎರಡು ದಶಕಕ್ಕೂ ಅಧಿಕ ಕಾಲದಿಂದ ನಡೆಸುತ್ತಿದ್ದ ಜನರ ಹೋರಾಟಕ್ಕೆ ಸಂದ ಜಯ ಎಂಬಂತೆ ಆಗಿದೆ.
ಆಡಳಿತಾತ್ಮಕ ಅನುಕೂಲಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕೊಟ್ಟೂರು, ಕಂಪ್ಲಿ, ಮತ್ತು ಕುರುಗೋಡುಗಳನ್ನು ನೂತನ ತಾಲೂಕು ಎಂದು ಘೋಷಿತವಾಗಿದ್ದವು. ಈ ಪ್ರದೇಶಗಳಲ್ಲಿ ಅನೇಕ ಬಗೆಯ ಚಳವಳಿಗಳು ಸಾಗಿದ್ದಂತೆಯೇ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿಯೂ ಇದೇ ತೆರನಾದ ಹೋರಾಟಗಳು ನಡೆದಿದ್ದವು. ಒಂದು ಹಂತದಲ್ಲಿ ತಾಲೂಕುಗಳ ರಚನೆ ಬಗ್ಗೆ ಪ್ರತಿಯೊಬ್ಬರಲ್ಲಿ ಆತಂಕ ಉಂಟಾಗಿತ್ತು. ಆದರೆ ಎಲ್ಲ ಆತಂಕ ವಿವಾದಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆ ಎಳೆದು, ಜುಲೈನಲ್ಲಿ ಮಂಡನೆಯಾಗುವ ಬಜೆಟ್ನ್ನು ಜನತೆ ಮತ್ತೆ ಆಶಾಭಾವದಿಂದ ಎದುರು ನೋಡುವ ಸೂಚನೆ ನೀಡಿದ್ದಾರೆ.
ತಾಲೂಕು ನಿಶ್ಚಿತ
ಕೊಟ್ಟೂರು ತಾಲೂಕು ಆಗುವುದು ನಿಶ್ಚಿತ. ಯಾವುದೇ ಕಾರಣಕ್ಕೂ ಕೊಟ್ಟೂರು ತಾಲೂಕು ರಚನೆಯ ಪ್ರಕ್ರಿಯೆಯಿಂದ ನುಣುಚಿಕೊಳ್ಳದಂತೆ ಸದಾ ಎಚ್ಚರವಹಿಸಲಾಗುವುದು. ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ. ಬುಧವಾರ ಅಧಿವೇಶನದಲ್ಲಿ ಕಾವೇರಿ ನದಿ ನೀರಿನ ವಿಷಯ ಸಂಬಂಧ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಾವೆಲ್ಲರೂ ಸಭಾತ್ಯಾಗ ಮಾಡಿದ್ದೆವು. ಬಿಜೆಪಿಯವರೂ ಸಭಾತ್ಯಾಗ ಮಾಡುವಾಗ ಸಿಎಂ ಸಿದ್ದರಾಮಯ್ಮ ತಾಲೂಕು ರಚನೆಯನ್ನು ಮಂಬರುವ ಬಜೆಟ್ನಲ್ಲಿ ಪ್ರಕಟಿಸುತ್ತೇವೆ ಎಂದು ಹೇಳಿರುವುದು ತಮ್ಮ ಗಮನಕ್ಕೆ ಬಂದಿದೆ.
- ಎಸ್. ಭೀಮಾನಾಯ್ಕ್, ಶಾಸಕ
ಶಾರ್ಟ್ ಸರ್ಕ್ಯೂಟ್: ಗ್ರಾಪಂ ಸದಸ್ಯ ಸಾವು
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಗ್ರಾಮದಲ್ಲಿ ವಿದ್ಯುತ್ ಶಾಟ್ಸಕ್ಯೂಟ್ನಿಂದ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ದಂಡೆಪ್ಪ (38) ಎಂಬುವವರು ಸಾನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ತಮ್ಮ ಜಮೀನಿನಲ್ಲಿ ಪಂಪ್ಸೆಟ್ ಮೋಟಾರ್ ಚಾಲು ಮಾಡುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪರಿಚಿತ ಶವ ಪತ್ತೆ
ಬಳ್ಳಾರಿ: ನಗರದ ಬ್ರೂಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಮೃತನ ವಯಸ್ಸು ಅಂದಾಜು 30 ವರ್ಷವಿದ್ದು, ಸುಮಾರು 5.6 ಅಡಿ ಎತ್ತರ, ಚಪ್ಪಟೆ ಮುಖ, ಕಂದು ಮೈಬಣ್ಣ, ದಪ್ಪನೆ ಮೂಗು, ದೃಢವಾದ ಮೈಕಟ್ಟು, ತಲೆಯಲ್ಲಿ ಬಿಳಿ ಮತ್ತು ಕಪ್ಪು ಕೂದಲು ಹೊಂದಿದ್ದು, ಬ್ರೌನ್ ಕಲರ್ ಕಟ್ ಬನಿಯನ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮೋತಿ ಸರ್ಕಲ್ ಬಳಿಯ ದಿವಾಕರ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಈತ ಮೃತಪಟ್ಟಿದ್ದು, ಈತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಿಲ್ಲ. ಮೃತ ವ್ಯಕ್ತಿಯ ಶವವನ್ನು ನಗರದ ವಿಮ್ಸ್ನ ಶೀತಲ ಶವಾಗಾರದಲ್ಲಿಡಲಾಗಿದೆ. ವಾರಸುದಾರರ ಬಗ್ಗೆ ಮಾಹಿತಿ ತಿಳಿದವರು ಠಾಣೆಯನ್ನು ಸಂಪರ್ಕಿಸುವಂತೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೋರಿದ್ದಾರೆ.
- ಜಿ. ಸೋಮಶೇಖರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

