ಎಚ್ಐವಿ ಸೋಂಕಿತರು ಧೈರ್ಯದಿಂದ ಜೀವಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 16
ಎಚ್ಐವಿ ಸೋಂಕಿತರು ಆತ್ಮಸ್ಥೈರ್ಯದಿಂದ ಸಾಮಾನ್ಯರಂತೆ ಜೀವನ ನಡೆಸಬೇಕೆಂದು ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ. ಪಾಟೀಲ್ ಕರೆ ನೀಡಿದರು.
ನಗರದ ಐಎಂಎ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಬ್ಲಡ್ ಬ್ಯಾಂಕ್ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಎಚ್ಐವಿಯೊಂದಿಗೆ ಜೀವನ ನಡೆಸುತ್ತಿರುವ ಕುಟುಂಬದವರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಾಥ ಮತ್ತು ಅಪಾಯದ ಅಂಚಿನಲ್ಲಿರುವ ಮಕ್ಕಳಿಗೆ ಸಮಾಜದಲ್ಲಿ ಸಮಾನ ಸ್ಥಾನ ಮಾನ ನೀಡಬೇಕು. ಅವರನ್ನು ಕಳಂಕ, ತಾರತಮ್ಯದಿಂದ ನೋಡಬಾರದು. ಜಿಲ್ಲೆಯಲ್ಲಿ ಸುಮಾರು 430 ಎಚ್ಐವಿಯೊಂದಿಗೆ ಜೀವನ ನಡೆಸುತ್ತಿರುವ ಕುಟುಂಬದವರ ಮಕ್ಕಳಿದ್ದಾರೆ. ಇಂತಹ ಅನಾಥ ಮಕ್ಕಳನ್ನು ಪ್ರೀತಿಯಿಂದ ಬೆಳಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಕಲಿಯಲು ಸಹಕಾರ ನೀಡಿ: ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಮೂರ್ತಿ ಮಾತನಾಡಿ, ಓದುವ ಹಂಬಲ ಸಾಮಾನ್ಯ ಮಕ್ಕಳಲ್ಲಿರುವ ಹಾಗೆಯೇ ಎಚ್ಐವಿ ಸೋಂಕಿತ ಮಕ್ಕಳಲ್ಲಿಯೂ ಇರುತ್ತದೆ. ಆದರೆ ಅವರಿಗೆ ಸರಿಯಾದ ಸಹಕಾರ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಅವರು ಸಾಮಾನ್ಯರಂತೆ ಬದುಕಲು ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.
ನಿತ್ಯಜೀವನ ಸಂಸ್ಥೆ ಕಾರ್ಯದರ್ಶಿ ಹೇಮಲತಾ ಮಾತನಾಡಿ, ಎಚ್ಐವಿಯೊಂದಿಗೆ ಜೀವನ ನಡೆಸುವವರ ಹಕ್ಕುಗಳು ರಕ್ಷಣೆಯಾದಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ. ಸಮಾಜದಲ್ಲಿ ಅವರನ್ನು ತಾರತಮ್ಯದಿಂದ ನೋಡುವುದರಿಂದಲೇ ಸಾಯುತ್ತಾರೆ ಹೊರತು ಏಡ್ಸ್ನಿಂದಲ್ಲ. ಈ ನಿಟ್ಟಿನಲ್ಲಿ ಎಚ್ಐವಿಯೊಂದಿಗೆ ಜೀವನ ನಡೆಸುವವರನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಸಮಿತಿ ಕಾರ್ಯಕ್ರಮಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಸ್. ಕಲಾದಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಂಪಾಪತಿ, ಆರ್ಸಿಎಚ್ ಅಧಿಕಾರಿ ಡಾ. ಗುಂಡಪ್ಪ, ಸ್ವಾಮಿ ವಿವೇಕಾನಂದ ಚಾರಿಟೆಬಲ್ ಬ್ಲಡ್ ಬ್ಯಾಂಕ್ ವ್ಯವಸ್ಥಾಪಕ ಗೋಪಾಲ್ ರೆಡ್ಡಿ, ನಿತ್ಯಜೀವನ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು. ಎಚ್ಐವಿಯೊಂದಿಗೆ ಜೀವನ ನಡೆಸುತ್ತಿರುವ ಕುಟುಂಬದವರ ಮಕ್ಕಳಿಗೆ ರು. 1.25 ಲಕ್ಷ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕಗಳನ್ನು ದಾನ ಮಾಡಿದ ಗೋಪಾಲ್ ರೆಡ್ಡಿ ಅವರನ್ನು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಸಮಿತಿಯಿಂದ ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

