ಬಳ್ಳಾರಿ

ತಾಪಂ ಚುನಾವಣೆ ಬಾಕಿ: ನಾಗೇಂದ್ರ ನಡೆ ನಿಗೂಢ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜೂ. 16
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದೆ ತಡ ಇತ್ತ ಕೂಡ್ಲಿಗಿ ತಾಲೂಕು ಪಂಚಾಯಿತಿಯಲ್ಲಿ ಒಂದಂಕಿ ಆಟ ಶುರುವಾಗಿದೆ. 6 ತಿಂಗಳಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಇದ್ದ ಮುಸುಕಿನ ಗುದ್ದಾಟ ಈಗ ಅವಿಶ್ವಾಸ ಗೊತ್ತುವಳಿ ಪಾಸ್ ಆಗುವ ಮೂಲಕ ಹೊರಬಿದ್ದಿದೆ.
10 ಕಾಂಗ್ರೆಸ್ ಸದಸ್ಯರ ಜತೆ ಓರ್ವ ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರನ್ನು ಸೇರಿಕೊಂಡು ಅಧಿಕಾರ ಪಡೆದೇ ತಿರಬೇಕೆಂದು ಕಾಂಗ್ರೆಸ್ ಹಠ ತೊಟ್ಟಿದ್ದರೆ. ಇತ್ತ ಶಾಸಕ ನಾಗೇಂದ್ರ ಕಾಂಗ್ರೆಸ್ ಸೇರುವ ವದಂತಿಗಳ ನಡುವೆ ತಟಸ್ಥ ಧೋರಣೆ ತಳೆದಿರುವುದರಿಂದ ಒಂದಂಕಿ ಆಟ ಮತ್ತಷ್ಟು ಕುತೂಹಲ ಮೂಡಿಸಿದೆ.
ಕಳೆದ ಬಾರಿ ಬಿಜೆಪಿಯಿಂದ ಶಾಸಕ ನಾಗೇಂದ್ರ ಆಯ್ಕೆಯಾಗಿದ್ದರಿಂದ ಕೂಡ್ಲಿಗಿ ತಾಪಂ ಸಹ ನಾಗೇಂದ್ರ ತನ್ನ ತೆಕ್ಕೆಯಲ್ಲಿರುವಂತೆ ನೋಡಿಕೊಂಡಿದ್ದರು. ಒಟ್ಟು 23 ಸದಸ್ಯರ ಬಲದಲ್ಲಿ 11ರಲ್ಲಿ ಬಿಜೆಪಿ, 10ರಲ್ಲಿ ಕಾಂಗ್ರೆಸ್ ಮತ್ತು ತಲಾ ಒಂದು ಕ್ಷೇತ್ರದಲ್ಲಿ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯೆ ಆಯ್ಕೆಯಾಗಿದ್ದರು. ಇದೇ ಸಂದರ್ಭದಲ್ಲೇ ನಾಗೇಂದ್ರ ಪಕ್ಷೇತರ ಅಭ್ಯರ್ಥಿ ಬೆಣ್ಣೆ ಕೊಟ್ರೇಶ್ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಮೂಲಕ ತಾಪಂ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಆಗ 10 ಕಾಂಗ್ರೆಸ್ ಸದಸ್ಯರ ಜತೆಗೆ ಜೆಡಿಎಸ್ ಸದಸ್ಯೆ ಕೈಜೋಡಿಸಿದರೂ 11 ಸದಸ್ಯರ ಬಲವಷ್ಟೇ ಆಗುತ್ತಿತ್ತು. ಒಂದಂಕಿ ಕಡಿಮೆ ಇದ್ದುದರಿಂದ ಕಾಂಗ್ರೆಸ್ ಸದಸ್ಯರು ತಣ್ಣಗಿದ್ದರು. ಆದರೆ 20 ತಿಂಗಳು ಅಧಿಕಾರ ಪೂರೈಸಿದ ನಂತರ ತಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಕಾಂತರಾಜ್, ಉಪಾಧ್ಯಕ್ಷ ಬೆಣ್ಣೆ ಕೊಟ್ರೇಶ್ ಶಾಸಕ ನಾಗೇಂದ್ರ ವಿರುದ್ಧ ಸೆಡ್ಡು ಹೊಡೆದು ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾದರು. ಇದರಿಂದ ಕೆರಳಿದ್ದ ನಾಗೇಂದ್ರ ತಮ್ಮ ಸದಸ್ಯರನ್ನು ಬಿಟ್ಟುಕೊಡದೆ ಬೆಣ್ಣೆ ಕೊಟ್ರೇಶ್‌ನನ್ನು ಕಾಂಗ್ರೆಸ್‌ಗೆ ಹೋಗದಂತೆ ತಡೆದರು. ಹೀಗಾಗಿ 2ನೇ ಅವಧಿಗೂ ಸಹ ಶಾಸಕ ನಾಗೇಂದ್ರ ತಾಪಂ ಅಧಿಕಾರ ಉಳಿಸಿಕೊಂಡಿದ್ದರು. ಅಲ್ಲಿಂದಲೇ ಶುರುವಾಗಿದ್ದು ಮುಸುಕಿನ ಗುದ್ದಾಟ, ಒಂದಂಕಿ ಆಟ.
ಸದಸ್ಯರ ಸ್ಥಾನ ಅದಲು, ಬದಲು: 2ನೇ ಅವಧಿಗೆ ಆಯ್ಕೆ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಮತ್ತು ಕಾಂಗ್ರೆಸ್‌ನ ಪರಾಜಿತ ಶಾಸಕ ಅಭ್ಯರ್ಥಿ ವೆಂಕಟೇಶ್ ನಡುವೆ ಮಾತಿನ ಚಕಮಕಿ, ವಾದ, ವಿವಾದಗಳು ನಡೆದವು. ಆಗ ಶಾಸಕ ನಾಗೇಂದ್ರ ಬೆಂಬಲಿಗರೆ ಆದ ಪ್ರಮೀಳಾ ಚಿದಾನಂದಗೌಡ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಎನ್.ಪಿ. ಮಂಜುನಾಥ ಆಯ್ಕೆಯಾದರು. ಆದರೆ ಕಾಂಗ್ರೆಸ್ ಸದಸ್ಯರು ಅಲ್ಲಿಗೂ ಸುಮ್ಮನೆ ಕೂರಲಿಲ್ಲ, ತಾಪಂನ 3 ಸಭೆಗಳಿಗೆ ಗೈರು ಹಾಜರಾಗುವ ಮೂಲಕ ಕೋರಂ ಕೊರತೆಯಿಂದ ಸಭೆಗಳು ನಡೆಯದಂತೆ ನೋಡಿಕೊಂಡರು.
ಆದರೆ ಶಾಸಕ ನಾಗೇಂದ್ರ ಗರಡಿ ಬಿಟ್ಟ ಬಿಜೆಪಿ ಸದಸ್ಯ ಕಾಂತರಾಜ್ ಹಾಗೂ ಪಕ್ಷೇತರ ಸದಸ್ಯ ಬೆಣ್ಣೆ ಕೊಟ್ರೇಶ್ ಕಾಂಗ್ರೆಸ್ ಸದಸ್ಯರ ಜತೆಗೆ ಕೈ ಜೋಡಿಸಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಒಳಗೊಳಗೆ ಪ್ರಯತ್ನಿಸಿದ್ದರು. ಅದಾಗಲೆ ಶಾಸಕ ನಾಗೇಂದ್ರ ಬಿಜೆಪಿಗೆ ಗುಡ್‌ಬೈ ಹೇಳಿ ಪಕ್ಷೇತರ ಶಾಸಕರಾಗಿ ಗೆದ್ದರು. ತಾಪಂ 2ನೇ ಅವಧಿಗೆ ಅಧ್ಯಕ್ಷರಾಗಿ 6 ತಿಂಗಳವರೆಗೂ ಅವಿಶ್ವಾಸ ಮಂಡನೆ ಮಾಡದೇ ಈಗ 12 ಸದಸ್ಯರು  ಅವಿಶ್ವಾಸಗೊತ್ತುವಳಿ ಮಂಡಿಸಿದ್ದಾರೆ. ಅದರ ಪ್ರತಿಫಲವೇ ಶನಿವಾರ ಕೂಡ್ಲಿಗಿ ತಾಪಂ ನಲ್ಲಿ ಕಾಂಗ್ರೆಸ್‌ನ ಅವಿಶ್ವಾಸ ಗೊತ್ತುವಳಿಗೆ ಗೆಲವು ದೊರೆತಿದೆ.
ಎಲ್ಲರ ಚಿತ್ತ ಶಾಸಕರತ್ತ: ಕಳೆದ ಶುಕ್ರವಾರ ಶಾಸಕ ನಾಗೇಂದ್ರ ಗಾಣಗಟ್ಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಸ್ಫೂರ್ತಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರುವ ಸುಳಿವು ಬಿಟ್ಟಿದ್ದಾರೆ. ಹೀಗಾಗಿ ತಾಪಂ ಅಧಿಕಾರ ಕಾಂಗ್ರೆಸ್ ಮಡಿಲಿಗೆ ಹೋಗುವುದನ್ನು ತಪ್ಪಿಸುತ್ತಾರೋ, ಇಲ್ಲವೋ ಎಂಬುದು ಕುತೂಲಹ ಮೂಡಿಸಿದೆ. ಒಂದಂಕಿ ಗೇಮ್ ಆಡುವ ಮೂಲಕ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಿ ತಮ್ಮ ಬೆಂಬಲಿಗ ಸದಸ್ಯರಿಗೆ ಅನುಕೂಲ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ ಬಿಜೆಪಿ ಚಿಹ್ನೆಯಡಿ ಬೆಂಬಲಿಗರು ಆಯ್ಕೆಯಾದ್ದರಿಂದ ಅಧಿಕಾರ ಬಿಜೆಪಿ ಮಡಿಲಿಗೆ ಹೋದಂತಾಗುತ್ತದೆ.
ಈ ನಡುವೆ ಶಾಸಕ ನಾಗೇಂದ್ರ ಈಗಾಗಲೇ ಬಿಜೆಪಿ ಬಿಟ್ಟಿದ್ದು, ಈಗ ಕಾಂಗ್ರೆಸ್ ಸೇರುವ ಬಯಕೆ ವ್ಯಕ್ತಪಡಿಸಿದ್ದರಿಂದ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬುದನ್ನೇ ಕಾಂಗ್ರೆಸ್ ಮುಖಂಡರು ಕಾದು ನೋಡುತ್ತಿದ್ದಾರೆ. ಸದ್ಯ ಶಾಸಕರ ಬೆಂಬಲಿಗ 11 ಸದಸ್ಯರಿದ್ದು, ಈಗ ಒಬ್ಬ ಸದಸ್ಯನ ಬಲ ಬೇಕಾಗಿದೆ. ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣ ಒಂದಂಕಿ ಆಟದಲ್ಲಿ ಯಾರು ಮೇಲು, ಕೆಳಗಾಗುತ್ತಾರೋ ಎಂಬುದು ಮಾತ್ರ ನಿಗೂಢ.
- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.