ಪಪಂ ನೂತನ ಕಟ್ಟಡ: ಕೂಡಿಬಂತು ಭಾಗ್ಯ
ಕನ್ನಡ ಪ್ರಭವಾರ್ತೆ, ಕೊಟ್ಟೂರು, ಜೂ. 19
ಕೊಟ್ಟೂರು ಆಡಳಿತದ ಶಕ್ತಿಕೇಂದ್ರ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯ ಸ್ಥಳಾಂತರಕ್ಕೆ ಅಣಿಯಾಗುತ್ತಿದೆ. ಸುಮಾರು 50ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಸೇವೆ ನೀಡಿದ್ದ ಇಲ್ಲಿನ ಕೋಟೆ ಪ್ರದೇಶದಿಂದ ಕಚೇರಿ ಸ್ಥಳಾಂತರವಾಗುತ್ತಿದೆ.
ಪಟ್ಟಣದ 25 ಸಾವಿರಕ್ಕೂ ಅಧಿಕ ಜನರ ಕುಂದುಕೊರತೆಗಳನ್ನು ಪರಿಹರಿಸಲು ಪಟ್ಟಣದ ಹರಪ್ಪನಹಳ್ಳಿ ರಸ್ತೆ ಪಕ್ಕದ ಹಳೆ ನೀರಿನ ಟ್ಯಾಂಕ್ ಬಳಿಯ ವಿಶಾಲ ನಿವೇಶದತ್ತ ಕಚೇರಿ ಸ್ಥ್ಥಳಾಂತರವಾಗಲಿದೆ. ಕೊಟ್ಟೂರೇಶ್ವರ ಸ್ವಾಮಿಯ ಮೂರು ಪ್ರಮುಖ ಮಠಗಳ ತಾಣವಾಗಿರುವ ಕೋಟೆ ಪ್ರದೇಶ ಆಗಿನ ಕಾಲಘಟ್ಟದಲ್ಲಿ ಪಟ್ಟಣದ ಮಧ್ಯಕೇಂದ್ರ ಎಂಬ ಕಾರಣಕ್ಕೆ ಅಲ್ಲಿಯೇ ಪಪಂ ಕಚೇರಿ ಇರಬೇಕೆಂದು ಮನಗಂಡು ಪಂಚಾಯಿತಿ ಬೋರ್ಡ್ ಕಚೇರಿ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಪಂಚಾಯಿತಿ ಬೋರ್ಡ್ ಪುರಸಭೆಯಾಗಿ 1995ರ ವೇಳೆಗೆ ಪಟ್ಟಣ ಪಂಚಾಯಿತಿ ಕಚೇರಿಯಾಗಿ ಹಿಂಬಡ್ತಿ ಪಡೆದು ಈಗಲೂ ಕಾರ್ಯನಿರ್ವಹಿಸುತ್ತಿದೆ.
ಪಪಂಗೆ ಹೊಸ ಕಟ್ಟಡ: ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡ 2 ಅಂತಸ್ತಿನ ಭವ್ಯ ಭವನವಾಗಲಿದ್ದು, ನೆಲ ಮಾಳಿಗೆಯಲ್ಲಿ ಕಚೇರಿ, ವಿವಿಧ ವಿಭಾಗಗಳ ಕೊಠಡಿಗಳು ನಿರ್ಮಾಣಗೊಂಡರೆ, ಮೊದಲ ಅಂತಸ್ತಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರತ್ಯೇಕ ಕೊಠಡಿಗಳು ನಿರ್ಮಾಣವಾಗಲಿವೆ. ಮಹಿಳಾ ಸದಸ್ಯೆಯರ ವಿಶ್ರಾಂತಿಗೆ ಪ್ರತ್ಯೇಕ ಕೊಠಡಿ ಮತ್ತು ಸಭೆ ನಡೆಸಲು ಅತ್ಯಾಧುನಿಕ ಸಭಾ ಭವನ ನಿರ್ಮಿಸುವುದು ಕ್ರಿಯಾಯೋಜನೆಯಲ್ಲಿ ಸೇರಿದೆ.
ಜಿಲ್ಲಾಧಿಕಾರಿ ಪ್ರತಿಪಾದನೆ: ಕೊಟ್ಟೂರು ಪಪಂ ಕಟ್ಟಡ ಸುಮಾರು ವರ್ಷಗಳ ಹಳೆಯದಾಗಿದ್ದು, ಪಪಂ ಸದಸ್ಯರ ಪ್ರಸ್ತಾವನೆಗೆ ದನಿಗೂಡಿಸಿದ ಡಿಸಿ ಬಿಸ್ವಾಸ್ ಅವರು, ಕಚೇರಿ ಕಟ್ಟಡ ಹೊಸದಾಗಿ ನಿರ್ಮಿಸುವುದೇ ಆದಲ್ಲಿ ಪಟ್ಟಣದ ಬೇರೊಂದು ಸ್ಥಳದಲ್ಲಿ ನಿರ್ಮಿಸಬೇಕು. ಇದೇ ಸ್ಥಳದಲ್ಲಿ ನಿರ್ಮಿಸುವುದಾದರೆ ಕ್ರಿಯಾಯೋಜನೆಗೆ ತಾವು ಖಂಡಿತಾ ಒಪ್ಪುವುದಿಲ್ಲ ಎಂದು ಷರಾ ಹಾಕಿದರು. ಪಟ್ಟಣದ ಭವಿಷ್ಯದ ದೃಷ್ಟಿಯಿಂದ ಕಾರ್ಯಾಲಯ ಈಗಿರುವ ಸ್ಥಳದಿಂದ ಬೇರೆಡೆ ನಿರ್ಮಿಸುವುದು ಅತಿ ಅವಶ್ಯ ಎಂದು ಪ್ರತಿಪಾದಿಸಿದ್ದರು.
ಜಿಲ್ಲಾಧಿಕಾರಿಗಳ ಅಭಿಪ್ರಾಯಕ್ಕೆ ಪಟ್ಟಣ ಪಂಚಾಯಿತಿಯ ಆಗಿನ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿ ಹರಪ್ಪನಹಳ್ಳಿ ರಸ್ತೆಯ ಬಲಭಾಗದಲ್ಲಿರುವ ಪಪಂಗೆ ಸೇರಿದ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಮುಂದಾದರೂ ಪ್ರಕ್ರಿಯೆ ಮಾತ್ರ ಜಾರಿಗೊಳ್ಳಲೇ ಇಲ್ಲ. ನಂತರ ಹಾಗೂ ಹೀಗೂ ಕಾಲ ಕಳೆಯುತ್ತಿದ್ದಂತೆ ಚುನಾವಣೆ ಬಂದು ಹೊಸ ಸದಸ್ಯರು ಚುನಾಯಿತಗೊಳ್ಳುವಂತಾಯಿತು. ಆದರೂ ನೂತನ ಕಟ್ಟಡ ನಿರ್ಮಿಸುವ ಯೋಜನೆ ನೆನೆಗುದಿಗೆ ಬಿದ್ದಿತು.
ಮತ್ತೆ ಚಾಲನೆ: ಹರಪ್ಪನಹಳ್ಳಿ ರಸ್ತೆಯಲ್ಲಿರುವ ಹಳೇ ನೀರಿನ ಟ್ಯಾಂಕ್ ಬಳಿಯ 2.30 ಎಕರೆ ಜಾಗದಲ್ಲಿ ನಿರ್ಮಿಸಲು ಬಹುತೇಕ ಜನಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ. ಶಾಸಕ ಎಸ್. ಭೀಮಾನಾಯ್ಕ ಭಾನುವಾರ ಪಟ್ಟಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಈ ಸ್ಥಳದಲ್ಲೇ ನೂತನ ಕಚೇರಿ ನಿರ್ಮಾಣಗೊಳ್ಳಬೇಕೆಂದು ಸೂಚಿಸಿದ್ದಾರೆ. ಈ ನಿವೇಶನದಲ್ಲಿ ಕಟ್ಟಡ ನಿರ್ಮಿಸುವ ಕಾರ್ಯವನ್ನು ಇನ್ನು 3-4 ತಿಂಗಳಲ್ಲಿ ಆರಂಭಗೊಳಿಸುತ್ತೇವೆ ಎಂದು ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಕಿರಿಯ ಅಭಿಯಂತರ ಅರುಣ್ ಪಟೇಲ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಇಷ್ಟೆಲ್ಲ ಪ್ರಕ್ರಿಯೆಗಳು ನಡೆದಿದ್ದು, ನೂತನ ಕಟ್ಟಡ ನಿರ್ಮಾಣವಾಗಿ ಕಚೇರಿ ಕೆಲಸ, ಕಾರ್ಯಗಳು ಎಂದು ಆರಂಭವಾಗುತ್ತವೆ ಎಂಬುದನ್ನು ಕಾದುನೋಡಬೇಕು. ಈಗಲಾದರೂ ಅಧಿಕಾರ ವರ್ಗ ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗುತ್ತದೆ ಎಂಬುದನ್ನು ಪಟ್ಟಣದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.
-ಜಿ. ಸೋಮಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

