1.6 ಮಿ.ಮೀ. ಮಳೆ
ಬಳ್ಳಾರಿ: ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಜೂ. 18ರಂದು 1.6 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಜೂನ್ ಮಾಹೆಯ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 527.2 ಮಿ.ಮೀ. ಮಳೆಯಾಗಿದ್ದು, ಸರಾಸರಿ 75.3 ಮಿ.ಮೀ. ಮಳೆಯಾದಂತಾಗಿದೆ. ಜಿಲ್ಲೆಯಲ್ಲಿ ಜೂನ್ ಮಾಹೆಯಲ್ಲಿ ಸಾಮಾನ್ಯವಾಗಿ 535 ಮಿ.ಮೀ. ಸಾಧಾರಣ ಮಳೆಯಾಗಬೇಕಾಗಿದ್ದು, ಈ ಬಾರಿ ಉತ್ತಮ ಮಳೆಯಾಗಿದೆ. ತಾಲೂಕುವಾರು ಜೂನ್ ಮಾಹೆಯಲ್ಲಿ ಆಗಬೇಕಾದ ಸಾಧಾರಣ ಮಳೆ ಇಂತಿದ್ದು, ಆವರಣದಲ್ಲಿ ಈ ವರೆಗೆ ಬಿದ್ದ ಮಳೆಯ ವಿವರ ನೀಡಲಾಗಿದೆ. ಬಳ್ಳಾರಿ-55 ಮಿ.ಮೀ. (91.7), ಹಡಗಲಿ-72(84.8), ಹಗರಿಬೊಮ್ಮನಹಳ್ಳಿ-73 (80.8), ಹೊಸಪೇಟೆ-85 (79.2), ಕೂಡ್ಲಿಗಿ- 71 (36.5), ಸಂಡೂರು-100 (89.6), ಸಿರುಗುಪ್ಪ-79 (64.6) ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ
ಬಳ್ಳಾರಿ: ಜಿಲ್ಲೆಯಲ್ಲಿ ಬುಧವಾರ ನಡೆದ ಎಸ್ಎಸ್ಎಲ್ಸಿ ವಿಜ್ಞಾನ ವಿಷಯದ ಪೂರಕ ಪರೀಕ್ಷೆಗೆ 4,357 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, 3,939 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಬುಧವಾರ ನಡೆದ ಈ ಪರೀಕ್ಷೆಗೆ ಒಟ್ಟು 418 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ತಾಲೂಕುವಾರು ನೋಂದಣಿಯಾದ ವಿದ್ಯಾರ್ಥಿಗಳ ವಿವರ ಇಂತಿದ್ದು, ಆವರಣದಲ್ಲಿ ಪರೀಕ್ಷೆಗೆ ಹಾಜರಾದ ಮತ್ತು ಗೈರು ಹಾಜರಾದ ವಿದ್ಯಾರ್ಥಿಗಳ ವಿವರವನ್ನು ನೀಡಲಾಗಿದೆ. ಬಳ್ಳಾರಿ ಪೂರ್ವ-1,237 (1,120 ಹಾಗೂ 117), ಕುರುಗೋಡು-1,123 (979, 144), ಹಗರಿಬೊಮ್ಮನಹಳ್ಳಿ-147 (138, 9), ಹಡಗಲಿ-201 (189, 12), ಹೊಸಪೇಟೆ- 894 (831, 63), ಕೂಡ್ಲಿಗಿ- 288(244, 44), ಸಂಡೂರು-166 (157, 9), ಸಿರುಗುಪ್ಪ-301 ವಿದ್ಯಾರ್ಥಿಗಳಲ್ಲಿ 281 ಹಾಜರಾಗಿದ್ದು, 20 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಇಂದಿನಿಂದ ಪ್ರವಚನ
ಬಳ್ಳಾರಿ: ಜೂ. 20ರಿಂದ 24ರ ವರೆಗೆ ಪ್ರತಿದಿನ ಸಂಜೆ 5.30ಕ್ಕೆ ಅರಿವು ಆಚಾರ ಕುರಿತ ಆಧ್ಯಾತ್ಮಿಕ ಪ್ರವಚನ, ಗೋಷ್ಠಿಯನ್ನು ನಗರದ ಅನಂತಪುರ ರಸ್ತೆಯಲ್ಲಿರುವ ಶಿವಶರಣೆ ಗಂಗಮ್ಮ ತಾಯಿಯವರ ಮಠದಲ್ಲಿ ಏರ್ಪಡಿಸಲಾಗಿದೆ.
ಕೊಟ್ಟೂರು: ಕೊಚ್ಚೆ ತುಂಬಿದ ರಸ್ತೆಗಿಲ್ಲ ಮುಕ್ತಿ
ಕೊಟ್ಟೂರು: ಧಾರ್ಮಿಕ ಪಟ್ಟಣ ಕೊಟ್ಟೂರು ಕೊಚ್ಚೆ ಪಟ್ಟಣವಾಗ ತೊಡಗಿರುವುದು ನಾಗರಿಕರಿಗೆ ಬೇಸರ ತಂದಿದೆ. ಇಲ್ಲಿನ ಗಾಂಧಿ ವೃತ್ತದ ಬಳಿ ಸದಾ ಕೊಚ್ಚೆ ನೀರು ರಸ್ತೆಯ ಮಧ್ಯದಲ್ಲೇ ನಿಲ್ಲುತ್ತಿದೆ. ನೀರು ಕಾಲುವೆಗೆ ಸಾಗಲು ಸಂಪರ್ಕ ಇಲ್ಲದಿರುವುದರಿಂದ ಕೊಚ್ಚೆ ನೀರು ರಸ್ತೆಗೆ ಹರಿದು, ಅದರಲ್ಲೇ ಜನತೆ ಓಡಾಡ ತೊಡಗಿದ್ದಾರೆ.
ಈ ರಸ್ತೆ ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠಕ್ಕೆ ತೆರಳುವ ದಾರಿಯಾಗಿದ್ದು, ಬಹುದಿನಗಳಿಂದಲೂ ರಸ್ತೆ ಕೊಚ್ಚೆ ನೀರಿನಿಂದ ತುಂಬಿದೆ. ಇಷ್ಟಾದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಇತ್ತ ಗಮನಹರಿಸದಿರುವುದು ಅಚ್ಚರಿಯ ಸಂಗತಿ. ಕೊಚ್ಚೆ ರಸ್ತೆಯ ಆಜು ಬಾಜು ನಿವಾಸಿಗಳು ಈ ಕುರಿತು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸಾಕಷ್ಟು ದೂರು ಸಲ್ಲಿಸಿದರೂ ಇದನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಆಡಳಿತ ಇನ್ನೂ ತೊಡಗಿಸಿಕೊಳ್ಳದೆ ತನ್ನ ಬೇಜವಾಬ್ದಾರಿತನ ಪ್ರದರ್ಶಿಸುತ್ತಲೆ ಇದೆ.
ದಾರಿಹೋಕರು ಮತ್ತು ವಾಹನ ಸವಾರರು ಈ ದಾರಿಯಲ್ಲಿ ಸಂಚರಿಸುವಾಗ ಬಹು ಎಚ್ಚರಿಕೆಯಿಂದಲೆ ಸಾಗಬೇಕು. ತಪ್ಪಿದರೆ ಸಣ್ಣಪುಟ್ಟ ಅಪಾಯ ಗ್ಯಾರಂಟಿ ಎನ್ನುತ್ತಾರೆ ಕೊಟ್ಟೂರಿನ ಹಿರಿಯ ನಾಗರಿಕ ಮಲ್ಲಿಕಾರ್ಜುನ. ಈಗಲಾದರೂ ಪಟ್ಟಣ ಪಂಚಾಯಿತಿ ಆಡಳಿತ ಕಣ್ತೆರೆದು ಈ ಬಗೆಯ ವಾತಾವರಣವನ್ನು ಹೋಗಲಾಡಿಸಿ ದೇವಸ್ಥಾನಕ್ಕೆ ತೆರಳುವ ಭಕ್ತರು ಇತರ ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಅವರ ಕೋರಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

