ಬಳ್ಳಾರಿ

ವಾಂತಿ ಭೇದಿ: 60ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

Published On :

ಹೂವಿನಹಡಗಲಿ/ಚನ್ನರಾಯಪಟ್ಟಣ: ರಾಜ್ಯದಲ್ಲಿ ವಿವಿಧೆಡೆ ಕಲುಷಿತ ನೀರು ಸೇವಿಸಿ ವಾಂತಿ ಭೇದಿಗೆ ತುತ್ತಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಹೂವಿನ ಹಡಗಲಿ ತಾಲೂಕಿನ ವ್ಯಾಸಮಲ್ಲಾಪುರ ತಾಂಡಾದಲ್ಲಿ ಇದುವರೆಗೂ 34 ಜನರು ವಾಂತಿ ಭೇದಿಯಿಂದ ಬಳಲುತ್ತಿದ್ದರೆ, ಗುರುವಾರ ಒಂದೇ ದಿನ 19 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ, ಚನ್ನರಾಯಪಟ್ಟಣ ತಾಲೂಕಿನ ಗುಲಸಿಂದ ಗ್ರಾಮದಲ್ಲೂ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.
ತಾಂಡಾದಲ್ಲಿ ತಾಂಡವ: ಎರಡು ದಿನಗಳ ಹಿಂದೆ ವ್ಯಾಸಮಲ್ಲಾಪುರ ತಾಂಡಾದಲ್ಲಿ ವಾಂತಿ- ಭೇದಿಯಿಂದ ವಯೋವೃದ್ಧ ಸೇರಿದಂತೆ ಬಾಲಕಿಯೊಬ್ಬಳು ಬಲಿಯಾಗಿದ್ದು, ಇದರಿಂದ ಎಚ್ಚೆತ್ತ ಅಧಿಕಾರಿಗಳ ತಂಡ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ತಾಂಡಾದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರ ತಂಡ ಬೀಡು ಬಿಟ್ಟಿದೆ. ತಾತ್ಕಾಲಿಕ ಆಸ್ಪತ್ರೆ ತೆರೆದು ಇಬ್ಬರು ವೈದ್ಯರು ಸೇರಿ ಒಟ್ಟು 6 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗುಲಸಿಂದದಲ್ಲಿ ಉಲ್ಬಣ: ಚನ್ನರಾಯಪಟ್ಟಣ ತಾಲೂಕಿನ ಗುಲಸಿಂದ ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಇವರಲ್ಲಿ 15 ಮಕ್ಕಳೂ ಸೇರಿದ್ದಾರೆ. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ನಾಗೇಶ್ ಆರಾಧ್ಯ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಡೆಂಘೀಗೆ ಮಹಿಳೆ ಬಲಿ
ನಿಪ್ಪಾಣಿ: ಡೆಂಘೀ ಜ್ವರದಿಂದ ಇಲ್ಲಿಯ ಹಣಬರ ಗಲ್ಲಿಯ ನಿವಾಸಿ ಭಾರತಿ ಅಮರ ಬೆಳಗಲಿ(38)ಎಂಬ ಮಹಿಳೆ  ಗುರುವಾರ ಮೃತಪಟ್ಟಿದ್ದಾಳೆ. ಎಂಟು ದಿನಗಳ ಹಿಂದೆ ತೀವ್ರಜ್ವರ, ಮೈಕೈ ಮತ್ತು ತಲೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಉಪಚಾರದಿಂದ ಜ್ವರ ಕಡಿಮೆಯಾದರೂ ಸಹ ಮೈಕೈ ಮತ್ತು ತಲೆನೋವು ಮಾತ್ರ ಅವರನ್ನು ಬಾಧಿಸುತ್ತಲೇ ಇತ್ತು.  ಆಗ ವೈದ್ಯರು ಅವರ ರಕ್ತದ ನಮೂನೆಯನ್ನು ತಪಾಸಣೆಗಾಗಿ ಬೆಳಗಾವಿಗೆ ಕಳುಹಿಸಿದ್ದರು. ಬುಧವಾರ ತೀವ್ರ ಅಸ್ವಸ್ಥರಾದ ಭಾರತಿ ಅವರನ್ನು ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ. ನಿಪ್ಪಾಣಿ ಪರಿಸರದಲ್ಲಿ ಇಂತಹ ಪ್ರಕರಣಗಳು ದಾಖಲಾಗಿದ್ದರೂ ಆರೋಗ್ಯ ಇಲಾಖೆಯಾಗಲಿ ಅಥವಾ ನಗರಸಭೆಯಾಗಲಿ ಮುಂಜಾಗ್ರತಾ ಕ್ರಮಕ್ಕೆ ಮುಂದಾಗದೇ ಇರುವುದು ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.