ವ್ಯಾಸಮಲ್ಲಾಪುರ ತಾಂಡಾ: 34 ಜನರಿಗೆ ವಾಂತಿ-ಭೇದಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜೂ. 20
ಮೂರು ದಿನಗಳಿಂದ ತಾಲೂಕಿನ ವ್ಯಾಸಮಲ್ಲಾಪುರ ತಾಂಡಾದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ, ಭೇದಿ ಉಲ್ಬಣಿಸಿದೆ. ಈಗಾಗಲೇ 34 ಜನ ವಾಂತಿ, ಭೇದಿಯಿಂದ ಬಳಲುತ್ತಿದ್ದು, ಗುರುವಾರ ಒಂದೇ ದಿನದಲ್ಲಿ 19 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ತಾಂಡಾದಲ್ಲಿ ವಾಂತಿ, ಭೇದಿಯಿಂದ ವಯೋವೃದ್ಧ, ಬಾಲಕಿಯೋರ್ವಳು ಬಲಿಯಾಗಿದ್ದು, ಇದರಿಂದ ಎಚ್ಚೆತ್ತ ಅಧಿಕಾರಿಗಳ ತಂಡ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ತಾಂಡಾಕ್ಕೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಪೂರೈಕೆ ಇಲ್ಲ, ಕೊಳವೆ ಬಾವಿ ನೀರನ್ನು ಸಂಗ್ರಹಿಸಲು ಯಾವುದೇ ಟ್ಯಾಂಕರ್ ವ್ಯವಸ್ಥೆ ಇಲ್ಲ. ಪೈಪ್‌ಲೈನ್ ಮೂಲಕ ನೇರವಾಗಿ ನಳ ಸಂಪರ್ಕ ಹೊಂದಿದ್ದು, ಅನೇಕ ಕಡೆಗಳಲ್ಲಿ ಪೈಪ್‌ಲೈನ್ ಸೋರಿಕೆಯಿಂದ ಮಳೆ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಂಡ ಪರಿಣಾಮ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ.
ಪೈಪ್‌ಲೈನ್ ಸೋರಿಯಾಗುತ್ತಿದ್ದರೂ ಗಮನ ಹರಿಸದ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗಾಗಲೇ ಎರಡು ಜೀವ ಬಲಿ ತೆಗೆದುಕೊಂಡಿದೆ. ಅಷ್ಟಾದರೂ ಈ ವರೆಗೂ ಗ್ರಾಪಂ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಸ್ವಚ್ಛತೆ, ಪೈಪ್‌ಲೈನ್ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ ಎನ್ನುತ್ತರೆ ತಾಂಡಾದ ಜನತೆ.
ಭೇಟಿ ನೀಡದ ಸಚಿವರು: ವ್ಯಾಸಮಲ್ಲಾಪುರ ತಾಂಡಾದಲ್ಲಿ ವಾಂತಿ, ಭೇದಿಯಿಂದ ಬಳಲಿ ಇಬ್ಬರು ಸಾವನ್ನಪ್ಪಿದ್ದರೂ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಾಂಡಾಕ್ಕೆ ಭೇಟಿ ನೀಡಿಲ್ಲ.
ಈ ಕುರಿತು ದೂರವಾಣಿ ಮೂಲಕ ಸಂಪರ್ಕಿಸಿದರೆ, ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರನ್ನು ನಿಯೋಜಿಸಿ ಸಮಸ್ಯೆ ನಿಯಂತ್ರಣಕ್ಕೆ ತರಲಾಗಿದೆ. ಸಚಿವ ಸಂಪುಟದ ಕೆಲ ಸಭೆಗಳಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿಲ್ಲ. ಕ್ಷೇತ್ರಕ್ಕೆ ಬಂದ ಕೂಡಲೇ ತಾವು ಭೇಟಿ ನೀಡುವುದಾಗಿ ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ: ವ್ಯಾಮಲ್ಲಾಪುರ ತಾಂಡಾದಲ್ಲಿ ವಾಂತಿ, ಭೇದಿ ಪ್ರಕರಣ ಕಂಡು ಬಂದಿದ್ದು, ಇಬ್ಬರು ಸಾವಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರ ತಂಡ ತಾಂಡಾದಲ್ಲಿ ಬೀಡು ಬಿಟ್ಟಿದೆ. ತಾತ್ಕಾಲಿಕ ಆಸ್ಪತ್ರೆ ತೆರೆದು ಇಬ್ಬರು ವೈದ್ಯರು ಸೇರಿ ಒಟ್ಟು 6 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರೋಗಿಗಳ ಮನೆ ಮನೆಗೆ ತೆರಳಿ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ. ಗ್ರಾಪಂನಿಂದ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗಿತ್ತು. ಈ ಹಿಂದೆ ಪೂರೈಕೆಯಾಗುತ್ತಿದ್ದ ಕಲುಷಿತ ನೀರನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಪೈಪ್‌ಲೈನ್ ರಿಪೇರಿಗೆ ಆದೇಶಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಧವರಾವ್ ಪಾಟೀಲ್.
ಈಗಾಗಲೇ ತಾಪಂ ಇಓ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಪಂ ಪಿಡಿಓ, ಕಾರ್ಯದರ್ಶಿಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನೋಟಿಸ್ ನೀಡಲಾಗಿದೆ. ಆದರೆ ಮಾನ್ಯರ ಮಸಲವಾಡ ಗ್ರಾಪಂ ಕಾರ್ಯದರ್ಶಿ ತಮಗೆ ಇನ್ನು ನೋಟಿಸ್ ತಲುಪಿಲ್ಲ ಎಂದು ಹೇಳಿದ್ದಾರೆ. ಹೀಗಾದರೆ ಇಂತಹ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕೆಲಸ ಯಾರು ಮಾಡಬೇಕು? ಇಂಥವುಗಳನ್ನು ವಿವಿಧ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಡಿಎಚ್‌ಓ.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ನಿಜಾಮುದ್ದೀನ್, ತಾಲೂಕು ಆರೋಗ್ಯಾಧಿಕಾರಿ ಪಿ.ಬಿ. ನಾಯ್ಕ ಸೇರಿದಂತೆ ಇತರರು ಭೇಟಿ ಪರಿಶೀಲನೆ ನಡೆಸಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

