ಮಸೀದಿ ನಿರ್ಮಾಣ ವಿವಾದ ಇತ್ಯರ್ಥ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಜೂ. 29
ವರ್ಷದಿಂದ ಪಟ್ಟಣದ ಮುಸ್ಲಿಂ ಸಮುದಾಯದ ಎರಡು ಪಂಗಡಗಳ ನಡುವೆ ಸಮಸ್ಯೆಯಾಗಿ ಪರಿಣಮಿಸಿದ್ದ ಹೊಸ ಮಸೀದಿ ನಿರ್ಮಾಣ ವಿವಾದವನ್ನು ಸ್ಥಳೀಯ ಪೊಲೀಸರು ಮತ್ತು ಕೂಡ್ಲಿಗಿ ತಾಲೂಕು ಆಡಳಿತ ಬಗೆಹರಿಸುವಲ್ಲಿ ಶನಿವಾರ ಯಶಸ್ವಿಯಾಯಿತು.
ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಮುಸ್ಲಿಂ ಬಾಂಧವರ ಸಭೆಯಲ್ಲಿ ತಹಸೀಲ್ದಾರ್ ಜವರೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ವಿ.ಎಚ್. ವಿಜಯಕುಮಾರ್ ಇವರಿಬ್ಬರು ರೂಪಿಸಿದ ಸೂತ್ರಗಳು ಉಭಯ ಪಂಗಡದಲ್ಲಿದ್ದ ಅಸಮಾಧಾನವನ್ನು ಸಂಪೂರ್ಣ ನಿವಾರಿಸಿ ಸೌಹಾರ್ದತೆಗೆ ದಾರಿ ಮಾಡಿಕೊಟ್ಟಿತು.
ಏನಿದು ವಿವಾದ?: ಕೊಟ್ಟೂರಿನ ಮುಸ್ಲಿಂ ಸಮುದಾಯದಲ್ಲಿ ಬಹುತೇಕರು ಸುನ್ನಿ ಪಂಗಡದವರು. ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿದ್ದ ಹೊಸ ಮಸೀದಿ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಹಾಲೇಅದೀಸ್ ಪಂಗಡ ತಮ್ಮ ಗುಂಪಿಗೆ ಪ್ರತ್ಯೇಕ ಮಸೀದಿ ನಿರ್ಮಿಸಲೇಬೇಕು. ಇದಕ್ಕಾಗಿ ತಮಗೆ ಒಪ್ಪಿಗೆ ನೀಡಬೇಕೆಂದು ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ಕೆಲ ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಉಭಯ ಗುಂಪಿನ ನಡುವೆ ಆಗಾಗ ರಾಜಿ ಪಂಚಾಯಿತಿ ನಡೆಯಿತಾದರೂ, ಉಭಯ ಗುಂಪಿನವರು ತಮ್ಮ ತಮ್ಮ ನಿಲವಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದರಿಂದ ಇದೊಂದು ಸಮಸ್ಯೆಯಾಗಿ ಪರಿಣಮಿಸಿತ್ತು. ಈ ಸಮಸ್ಯೆ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಗಮನವನ್ನೂ ಸೆಳೆದಿತ್ತು.
ತಹಸೀಲ್ದಾರ್ ಜವರೇಗೌಡ, ಇಸ್ಲಾಂ ಧರ್ಮದ ಸಮನ್ವಯ ಮತ್ತು ಭ್ರಾತೃತ್ವ ಗುಣಗಳ ಬಗ್ಗೆ ಖುರಾನಿನಲ್ಲಿ ಹೇಳಲಾಗಿರುವ ಆಚರಣೆಗಳನ್ನು ಸಭಿಕರಿಗೆ ವಿವರಿಸಿ ಧರ್ಮಗ್ರಂಥದ ಅನುಸಾರ ಪ್ರತಿಯೊಬ್ಬರೂ ನಡೆದುಕೊಂಡು ಹೋಗಬೇಕು. ಹೊಸ ಮಸೀದಿ ನಿರ್ಮಾಣಕ್ಕೆ ಅನುಮತಿ ನಿರಾಕರಿಸಲು ಸಾಧ್ಯವೇ ಇಲ್ಲ ಎಂದು ಹೇಳಿ ಪಟ್ಟಣ ಪಂಚಾಯಿತಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮಂಜೂರಾತಿ ನೀಡಿದೆ ಎಂದರು.
ಅಭ್ಯಂತರವಿಲ್ಲ: ಸಭೆಯಲ್ಲಿದ್ದ ಸುನ್ನಿ ಬಳಗದ ಹೆಗಡೆಮಾಬು ಮಾತನಾಡಿ, ಹೊಸ ಮಸೀದಿ ನಿರ್ಮಾಣಕ್ಕೆ ಯಾವುದೇ ಅಭ್ಯಂತರವಿಲ್ಲ. ಅವರು ಉಳಿದ ಮಸೀದಿಯವರಂತೆ ಮೂಲ ಜಾಮಿಯಾ ಮಸೀದಿಯ ಧಾರ್ಮಿಕ ಕಟ್ಟುಪಾಡುಗಳಿಗೆ ಹೊಂದಿಕೊಂಡು ಹೋಗಬೇಕು ಎಂದರು. ಆಗ ಹಾಲೇ ಅದೀಸ್ ಪಂಗಡದ ಅಬ್ದುಲ್ ರಸೀದ್ ಮಾತನಾಡಿ, ಪ್ರತ್ಯೇಕ ಮಸೀದಿ ನಿರ್ಮಿಸಲೆಂದೇ ಈಗಾಗಲೇ ಸ್ಥಳ ನಿಗದಿಗೊಂಡಿದೆ. ಪುರುಷರಂತೆ ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ನಮಾಜ್ ಮಾಡುವ ಕಾರಣಕ್ಕಾಗಿಯೇ ಪ್ರತ್ಯೇಕ ಮಸೀದಿ ನಿರ್ಮಿಸಲು ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ತಹಸೀಲ್ದಾರ್ ಜವರೇಗೌಡ, ಸಿಪಿಐ ವಿ.ಎಚ್. ವಿಜಯಕುಮಾರ್ ಮಾತನಾಡಿ, ಉಭಯ ಗುಂಪಿನವರು ತಮ್ಮ ವಾದಗಳಿಗೆ ಅಂಟಿಕೊಳ್ಳಬಾರದು ಎಂದರು.
ಮುಬಾರಕ್ ಸಮಿತಿ ಅಧ್ಯಕ್ಷ ಸಲಾಂ ಸಾಬ್, ಅಬ್ದುಲ್ ಸಲಾಂ, ಅಬ್ದುಲ್ ಮಜೀದ್, ರಸೀದ್, ಹುಸೇನ್, ಪಿಎಸ್ಐ ಗುರುರಾಜ್ ಮೈಲಾರ, ಅಪರಾಧ ವಿಭಾಗದ ಪಿಎಸ್ಐ ದಶರಥ, ಪಪಂ ಮುಖ್ಯಾಧಿಕಾರಿ ಹನುಮಂತಮ್ಮ, ಉಪತಹಸೀಲ್ದಾರ್ ಮಂಜುನಾಥ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಾಮಿಯಾ ಮಸೀದಿಯವರು ಸೂಚಿಸಿರುವ ಅಭಿಪ್ರಾಯದಂತೆ ಉಳಿದವರು ನಡೆದುಕೊಳ್ಳಬೇಕು. ಸಮಸ್ಯೆಯನ್ನು ಇದೇ ತೆರನಾಗಿ ಮುಂದುವರಿಸಿದರೆ ಬಹಳಷ್ಟು ತೊಂದರೆಗಳು ಉಂಟಾಗುತ್ತವೆ. ಉಭಯ ಗುಂಪಿನವರು ಸೌಹಾರ್ದತೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೆ ಗುಂಪು ಗಲಾಟೆಗಳಿಗೆ ಮುಂದಾದರೆ ಕಾನೂನಿನ ಕ್ರಮ ಕೈಗೊಳ್ಳುವುದು ಅನಿವಾರ್ಯ.
ಜವರೇಗೌಡ, ತಹಸೀಲ್ದಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

