ಬಳ್ಳಾರಿ

ಮತದಾರರ ಪಟ್ಟಿ ಸೃಷ್ಟಿಸಿತು ಅವಾಂತರ

Published On :

 ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 2
ಚುನಾವಣೆಗಳು ಬಂದರೆ ಪಕ್ಷ, ಪಕ್ಷದಲ್ಲಿನ ಮುಖಂಡರು, ಕಾರ್ಯಕರ್ತರು, ಗ್ರಾಮ, ನಗರ ಪ್ರದೇಶಗಳಲ್ಲಿ ಅನೇಕರನ್ನು ಬೇರೆ ಬೇರೆಯನ್ನಾಗಿಸುತ್ತವೆ. ಆದರೆ ಈ ಮತದಾರರ ಪಟ್ಟಿ ತಂದೆ, ತಾಯಿ, ಮಕ್ಕಳನ್ನು ಬೇರೆಯಾಗಿಸಿದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ.
ಹೌದು... ಸದ್ಯ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಆಯೋಗ ಮಾಡಿದ ದೋಷಪೂರಿತ ಪಟ್ಟಿಯಿಂದಾಗಿ ಈ ಅವಾಂತರ ನಡೆದಿರುವುದು ಬೆಳಕಿಗೆ ಬಂದಿದೆ.
ಮತದಾರರ ಪಟ್ಟಿ ಗಂಡ ಹೆಂಡಿರನ್ನು ಹೇಗೆ ಅಗಲಿಸುತ್ತದೆ ಎಂದು ಆಶ್ಚರ್ಯ ಪಡಬೇಡಿ. ಗಂಡನ ಮತ ಒಂದು ವಾರ್ಡಿನಲ್ಲಿ, ಹೆಂಡತಿ ಹೆಸರು ಮತ್ತೊಂದು ವಾರ್ಡ್‌ನ ಪಟ್ಟಿಯಲ್ಲಿ ಸೇರಿದರೆ ಮಕ್ಕಳ ಹೆಸರುಗಳು ಮತ್ತೊಂದು ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ಮನೆಯಲ್ಲಿನ ಮತಗಳು ವಾರ್ಡ್ ಲೆಕ್ಕದಲ್ಲಿ ಬದಲಾವಣೆಯಾಗಿರುವುದು ಆಶ್ಚರ್ಯ ಮೂಡಿಸಿದೆ. ಇದರಿಂದಾಗಿ ಮತದಾರರಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಗೊಂದಲ ಕಾಡುತ್ತಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ತರಾತುರಿಯಲ್ಲಿ ಮತದಾರರ ಪಟ್ಟಿ ಸಾಕಷ್ಟು ಏರುಪೇರಿಗೆ ಕಾರಣವಾಗಿದೆ. ಎಲ್ಲೋ ಇರುವ ಮತದಾರನ ಹೆಸರು ಬೇರೊಂದು ವಾರ್ಡ್ ಮತದಾರರ ಪಟ್ಟಿಯಲ್ಲಿ ಬಂದಿರುವುದು, ಒಂದು ಮನೆಯಲ್ಲಿನ ಮತದಾರರು ಮೂರು ವಾರ್ಡ್‌ಗಳಿಗೆ ಹಂಚಿ ಹೋಗಿರುವದರಿಂದ ಮತದಾರರು ತಮ್ಮ ಹೆಸರು ನೋಡುವುದಕ್ಕೆ ಹರಸಾಹಪಡುತ್ತಿರುವ ಸಂಗತಿಗಳು ಹೆಚ್ಚಾಗಿವೆ. ಇದರಿಂದಾಗಿ ಸಾಕಷ್ಟು ತೊಂದರೆಯನ್ನು ಮತದಾರರೊಂದಿಗೆ ಅಭ್ಯರ್ಥಿಗಳೂ ಎದುರಿಸುವಂತಾಗಿದೆ.
ಒಂದನೇ ನಿದರ್ಶನ- ತಂದೆ ಮಕ್ಕಳ ಅಗಲಿಕೆ: ಬಳ್ಳಾರಿಯ ವೀರಶೈವ ಕಾಲೇಜು ಕ್ವಾರ್ಟಸ್‌ನಲ್ಲಿರುವ ಬಸಪ್ಪ (ಪತಿ), ಬಸಮ್ಮ (ಪತ್ನಿ), ಮಲ್ಲಿಕಾರ್ಜುನ, ವೀರೇಶ್ (ಮಕ್ಕಳು) ಒಂದೇ ಕುಟುಂಬದವರು 31ನೇ ವಾರ್ಡಿನ ಮತದಾರರು. ಆದರೆ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿಸಿರುವ ಮತದಾರರ ಪಟ್ಟಿಯಲ್ಲಿ ಬಸಪ್ಪ ಮತ್ತು ಬಸಮ್ಮ 31ನೇ ವಾರ್ಡಿನಲ್ಲಿದ್ದರೆ, ಮಕ್ಕಳಾದ ಮಲ್ಲಿಕಾರ್ಜುನ, ವೀರೇಶ್ 30ನೇ ವಾರ್ಡಿನ ಮತಾದರರ ಪಟ್ಟಿಯಲ್ಲಿ ಸೇರಿದ್ದಾರೆ. ಒಂದೇ ಮನೆಯಲ್ಲಿನ ಮಕ್ಕಳು, ತಂದೆ-ತಾಯಿಗಳು ಬೇರೆ ಬೇರೆ ಮತದಾರರ ಪಟ್ಟಿಯಲ್ಲಿ ಬಂದಿದ್ದಾರೆ.
2ನೇ ನಿದರ್ಶನ: ಗಂಡ-ಹೆಂಡತಿ ಅಗಲಿಕೆ: ಈ ಕುಟುಂಬದ ಕಥೆ ಮತ್ತೊಂದು ರೀತಿಯಲ್ಲಿದೆ. ಹನುಮಂತಪ್ಪ ಮತ್ತು ಜಯಮ್ಮ ಕುಟುಂಬ 31ನೇ ವಾರ್ಡಿನಲ್ಲಿ ವಾಸವಿದೆ. ಇವರ ಮನೆಯಲ್ಲಿ 7 ಮತಗಳು ಇವೆ. ಈ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ  ಗಂಡ, ಹೆಂಡತಿ, ಮಕ್ಕಳನ್ನು ಬೇರೆ ಬೇರೆ ವಾರ್ಡಿನಲ್ಲಿ ಗುರುತಿಸಲಾಗಿದೆ. ಹನುಮಂತಪ್ಪ, ಅವರ ಮಕ್ಕಳಾದ  ಆಂಜನೇಯ, ಕಾಮಾಕ್ಷಮ್ಮ ಅವರು 31ನೇ ವಾರ್ಡಿನ ಮತದಾರರಾಗಿದ್ದರೆ, ಹನುಮಂತಪ್ಪ ಅವರ ಪತ್ನಿ ಜಯಮ್ಮ, ಮಕ್ಕಳಾದ ಹೇಮ, ರಾಧಾ, ಭಾಗ್ಯಮ್ಮ ಅವರು 30ನೇ ವಾರ್ಡಿನ ಮತದಾರರಾಗಿದ್ದಾರೆ. 31ನೇ ವಾರ್ಡಿನಲ್ಲಿ ಹುಡುಕಿದರೂ ಮತದಾರರ ಪಟ್ಟಿಯಲ್ಲಿ ಹೆಸರು ಸಿಗದಿದ್ದಾಗ, 30ನೇ ವಾರ್ಡಿಗೆ ಸೇರಿಸಿರುವುದು ಪತ್ತೆಯಾಗಿದೆ.
ಮೂರನೆಯದು- ಗೊಂದಲಗೊಂಡ ಕುಟುಂಬ: ಮತದಾರರ ಪಟ್ಟಿಯಲ್ಲಿ ತಂದೆ, ಮಗನ ಹೆಸರಿದೆ, ಆದರೆ ತಾಯಿ ಮತ್ತು ಇನ್ನೋರ್ವ ಮಗನ ಹೆಸರಿಲ್ಲ. ಇದರಿಂದಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಳಿಸಿರಬಹುದು ಎಂದುಕೊಂಡಿತ್ತು ಬಳ್ಳಾರಿಯ 31ನೇ ವಾರ್ಡ್‌ನ ಮಲ್ಲಿಕಾರ್ಜುನ ಕುಟುಂಬ. ಚುನಾವಣೆ ಪ್ರಚಾರದ ವೇಳೆ ತಂದಿರುವ ಮತದಾರರ ಪಟ್ಟಿಯಲ್ಲಿ ನೋಡಿದಾಗ ಮಲ್ಲಿಕಾರ್ಜುನ ಹಾಗೂ ಅವರ ಮಗನ ಮತ 31ನೇ ವಾರ್ಡಿನಲ್ಲಿದ್ದರೆ, ಅವರ ಪತ್ನಿ ದ್ರಾಕ್ಷಾಯಿಣಿ ಹಾಗೂ ಮಗ ಜಯಂತ್‌ಕುಮಾರ್ ಮತ 30ನೇ ವಾರ್ಡಿನಲ್ಲಿರುವುದು ಪತ್ತೆಯಾಗಿದೆ. ಇದೀಗ ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ವಾರ್ಡ್ ಪ್ರತಿನಿಧಿಗೆ ಮತ ಹಾಕುವ ಪರಿಸ್ಥಿತಿ ಎದುರಾಗಿದೆ.
ಮತದಾರರ ಪಟ್ಟಿಯ ಅವಾಂತರ ಇಷ್ಟಕ್ಕೆ ನಿಲ್ಲಲಿಲ್ಲ. ಆದರ್ಶ ಕಾಲೋನಿ, ಕೋಟೆ ಮುಖ್ಯರಸ್ತೆ, ಎಚ್‌ಬಿ ಕಾಲೋನಿ, ಬೆಳಗಲ್ ರಸ್ತೆ, ಕಸಾಯಿ ಬೀದಿ, ಅಬ್ದುಲ್‌ಕಲಾಂ ಬೀದಿ ಸೇರಿದಂತೆ ಇತರ ಪ್ರದೇಶದ ಕೆಲ ಮತಗಳು 31ನೇ ವಾರ್ಡಿನಲ್ಲಿ ಸೇರಿಕೊಂಡಿವೆ. ಇದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಚುನಾವಣೆ ಪ್ರಚಾರ ನಡೆಸುತ್ತಿರುವವರು ಮತದಾರರ ಪಟ್ಟಿ ಹಿಡಿದು ಮತದಾರರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮತದಾರರು ಕೂಡ ತಾವು ಯಾವ ವಾರ್ಡ್‌ನಲ್ಲಿದ್ದೇವೆ ಎಂದು ತಮ್ಮ ಮತಗಳನ್ನು ಹುಡುಕಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.