ಬಳ್ಳಾರಿ

ಬಿಎಸ್ಸಾರ್‌ಗೆ ಸೆಡ್ಡು ಹೊಡೆದಿಲ್ಲ: ನಾಗೇಂದ್ರ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 2
ಜನಾರ್ದನ ರೆಡ್ಡಿ, ಶ್ರೀರಾಮುಲು ಎಂದೆಂದಿಗೂ ನನ್ನ ಸಹೋದರರೇ ಆಗಿದ್ದು, ನನ್ನ ಮತ್ತು ಅವರ ಮಧ್ಯೆ ಯಾವ ಭಿನ್ನಾಭಿಪ್ರಾಯವಿಲ್ಲ. ಕೂಡ್ಲಿಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ವಿಶಾಲ ದೃಷ್ಟಿಕೋನ ಇಟ್ಟುಕೊಂಡು ಈ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ನನ್ನ ಬೆಂಬಲಿತ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದೇನೆ ಹೊರತೂ ಬೇರೆ ಯಾವುದೇ ಉದ್ದೇಶವಿಲ್ಲ.
ಹೀಗೆಂದು ಸ್ಪಷ್ಟಪಡಿಸಿದವರು ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ. ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡುತ್ತಾ, ಬಿಎಸ್ಸಾರ್ ಪಕ್ಷದ ವಿರುದ್ಧ ರೆಡ್ಡಿ, ಶ್ರೀರಾಮುಲುಗೆ ಸೆಡ್ಡು ಹೊಡೆದು ಈ ಬಾರಿಯ ಪಪಂ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರರಾಗಿ ಕಣಕ್ಕಿಳಿಸಿ ನೇರವಾಗಿಯೇ ಸಮರ ಸಾರಿದ್ದಾರೆ ಎಂದು ಕ್ಷೇತ್ರದ ಜನತೆಯಲ್ಲಿ ಊಹಾಪೋಹ ಬೇಡ. ನಾನು ಹಾಗೂ ಜನಾರ್ದನ ರೆಡ್ಡಿ, ಶ್ರೀ ರಾಮುಲು ಅಣ್ಣ-ತಮ್ಮಂದಿರಂತಿದ್ದೇವೆ, ನಮ್ಮ ಮಧ್ಯೆ ಸಣ್ಣ ಜಗಳವೂ, ವ್ಯತ್ಯಾಸವೂ ಇಲ್ಲ. ಕೂಡ್ಲಿಗಿ ಕ್ಷೇತ್ರಕ್ಕೂ ನನಗೂ ಯಾವ ಜನ್ಮದ ನಂಟೋ ಗೊತ್ತಿಲ್ಲ, ಹೀಗಾಗಿ ಅಮೂಲಾಗ್ರ ಬದಲಾವಣೆ ಮೂಲಕ ಹಿಂದುಳಿದ ಹಣೆಪಟ್ಟಿ ಹೊಂದಿರುವ ಕೂಡ್ಲಿಗಿ ಕ್ಷೇತ್ರಕ್ಕೆ ಹೊಸ ಮುನ್ನುಡಿ ಬರೆಯಲು ಈ ನಿರ್ಧಾರ ಕೈಗೊಂಡಿದ್ದೇನೆ. ಬಿಎಸ್ಸಾರ್ ವಿರುದ್ಧ ನಾನು ಚುನಾವಣೆ ನಡೆಸಲು ಮುಂದಾಗಿಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಅನಿವಾರ್ಯ: ಯಾರನ್ನೂ ಕೆಳಗಿಳಿಸುವ, ಯಾರನ್ನೂ ಮೇಲಕ್ಕೇರಿಸುವ ಮಾತುಗಳನ್ನಾಡುವ ಜಾಯಮಾನ ನನ್ನದಲ್ಲ. ಏನಿದ್ದರೂ ನೇರವಾಗಿ ಕಷ್ಟ, ಸುಖಗಳನ್ನು ಜನರ ಬಳಿ, ನನ್ನ ಬೆಂಬಲಿಗರ ಬಳಿ ಹೇಳಿಕೊಳ್ಳುತ್ತೇನೆ. ನನ್ನನ್ನು ಶಾಸಕನನ್ನಾಗಿ ಮಾಡಿದ ಕೂಡ್ಲಿಗಿ ಕ್ಷೇತ್ರದ ಜನತೆಯ, ಮುಖಂಡರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಆಡಳಿತ ನಡೆಸುತ್ತೇನೆ. ಇದೇ ಕಾರಣದಿಂದ ಈ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಗೆ ತಮ್ಮ ಬೆಂಬಲಿಗರನ್ನು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದೇನೆ ಹೊರತು ರೆಡ್ಡಿ, ರಾಮುಲು ವಿರುದ್ಧ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದರು.
ಕ್ಷೇತ್ರ ಹಸಿರಾಗಿಸುವುದೇ ನನ್ನ ಕನಸು: ನಿರಂತರ ಬರಗಾಲದ ಸೀಮೆ ಎಂದು ಹೆಸರಾಗಿರುವ ಕೂಡ್ಲಿಗಿ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಳೆಗಾಲದಲ್ಲಿ ಅನಾವಶ್ಯಕವಾಗಿ ಹರಿದು ಹೋಗುವ ನೀರನ್ನು ಕೂಡ್ಲಿಗಿಯಂತಹ ಬರಡು ಪ್ರದೇಶದ ನೂರಕ್ಕೂ ಹೆಚ್ಚು ಕೆರೆಗಳಿಗಳಿಗೆ ತುಂಬಿಸಿ ಈ ಮೂಲಕ ತಾಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ರೈತರ ಜಮೀನುಗಳು ಸದಾ ಹಸಿರಾಗಿ ಕಾಣುವಂತಹ ವಾತಾವರಣ ಸೃಷ್ಟಿ ಮಾಡಬೇಕೆಂಬುದೇ ನನ್ನ ಗುರಿ. ವಿನಾ ಕಾರಣ ಆರೋಪ, ಪ್ರತ್ಯಾರೋಪಗಳನ್ನು ಮಾಡುವುದು ನನ್ನ ಗುರಿಯಲ್ಲ ಎಂದು ಶಾಸಕ ನಾಗೇಂದ್ರ ತಮ್ಮ ರಾಜಕೀಯ ಉದ್ದೇಶ, ಗುರಿಗಳ ಬಗ್ಗೆ  ಹೇಳಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.