ಬಳ್ಳಾರಿ

ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವಕ್ಕೆ ಚಾಲನೆ

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 3
ಲಕ್ಷಾಂತರ ಭಕ್ತರ ಆರಾಧ್ಯದೈವ, ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನಾಗರವಾಹನದ ಬೆಳ್ಳಿ ರಥೋತ್ಸವ ನಡೆಸುವ ಮೂಲಕ ಮಾ. 6ರಂದು ನಡೆಯುವ ಶ್ರೀ ಸ್ವಾಮಿಯ ಮಹಾರಥೋತ್ಸವದ ಧಾರ್ಮಿಕ ಕೈಂಕರ್ಯಕ್ಕೆ ಶನಿವಾರ ರಾತ್ರಿ ಚಾಲನೆ ನೀಡಲಾಯಿತು.
ಶನಿವಾರ ರಾತ್ರಿ 10.30ಕ್ಕೆ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಬಂಗಾರ ಖಚಿತ ಮೂರ್ತಿಯನ್ನು ನಾಗರವಾಹನದ ಮೇಲೆ ಕುಳ್ಳಿರಿಸಲಾಯಿತು. ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿ ಬೆಳ್ಳಿರಥ ಪ್ರವೇಶಿಸುತ್ತಿದ್ದಂತೆ ಉತ್ಸವ ಆರಂಭಗೊಂಡಿತು. ಅನಂತರ ತೊಟ್ಟಿಲು ಮಠ, ಗಚ್ಚಿನ ಮಠದ ವರೆಗೆ ಬೆಳ್ಳಿರಥ ಸಾಗಿ, ಪುನಃ ಹಿರೇಮಠಕ್ಕೆ ರಾತ್ರಿ 12ರ ಸುಮಾರಿಗೆ ಬಂದು ತಲುಪಿತು.
ಮಹಾರಥೋತ್ಸವಕ್ಕೂ ಮೊದಲ ನಾಲ್ಕು ದಿನ ಬೆಳ್ಳಿ ರಥೋತ್ಸವ ನಡೆಯುತ್ತದೆ. ಅದರಂತೆ ಭಾನುವಾರ ನವಿಲು ವಾಹನೋತ್ಸವ, ಸೋಮವಾರ ಗಜವಾಹನೋತ್ಸವ, ಮಂಗಳವಾರ ವೃಷಭವಾಹನದ ಮೇಲೆ ಸ್ವಾಮಿಯನ್ನು ಕುಳ್ಳಿರಿಸಿ, ಬೆಳ್ಳಿ ರಥೋತ್ಸವ ನಡೆಯುತ್ತದೆ.
ದಾಸೋಹ ಸೇವೆ: ಮಾ. 6ರಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸುವ ಸಹಸ್ರಾರು ಸಂಖ್ಯೆಯ ಪಾದಯಾತ್ರಿಗಳು, ಅಸಂಖ್ಯಾತ ಭಕ್ತರಿಗೆ ಇಲ್ಲಿನ ಅಮರನಾಥ ಯಾತ್ರಾ ಸೇವಾ ಸಮಿತಿ ಬಳಗದವರು ವೈವಿಧ್ಯಮಯ ತಿಂಡಿ, ಊಟ ಬಡಿಸುವ ಸೇವೆ ಹಮ್ಮಿಕೊಂಡಿದ್ದಾರೆ. ಸೇವಾ ಬಳಗದ ಸತೀಶ್‌ಕುಮಾರ್, ಕೆ.ಎಂ. ಗುರುಬಸವರಾಜ (ಬಾಬು), ಎಚ್. ಗುರುಬಸವರಾಜ್, ಕೆಂಗನವರ ರವಿಕುಮಾರ್, ಅಟವಾಳಿಗಿ ಮಹಾಂತೇಶ, ದೇವರಮನಿ ಶಶಿಮೌಳಿ, ಶಾಂತಮೂರ್ತಿ, ಹಡದೋಲಿ ಕೊಟ್ರೇಶ್ ಮತ್ತಿತರರು ಇದಕ್ಕೆಂದೇ ಟೊಂಕಕಟ್ಟಿ ನಿಂತಿದ್ದಾರೆ. ವಿವಿಧೆಡೆಗಳಿಂದ ಆಗಮಿಸುವ ಭಕ್ತರಿಗೆ ತಂಗಲು ಉಚಿತ ವ್ಯವಸ್ಥೆ ಸಹ ಕಲ್ಪಿಸಿದ್ದಾರೆ.
ಇಲ್ಲಿನ ಶ್ರೀರಾಮ ಕನ್ನಿಕಾಪರಮೇಶ್ವರಿ ಮತ್ತು ಬನಶಂಕರಿ ದೇವಸ್ಥಾನದಲ್ಲಿ ಮಾ. 5ರ ಮಧ್ಯಾಹ್ನ 11 ಗಂಟೆಯಿಂದ ಊಟೋಪಚಾರದ ಸೇವೆ ಆರಂಭಗೊಳ್ಳಲಿದೆ. ಆ ದಿನ ಶ್ಯಾವಿಗೆ ಪಾಯಸ, ಅನ್ನ ಸಾಂಬಾರು, ಚಿತ್ರಾನ್ನ, ಹಪ್ಪಳ, ಸಂಡಿಗೆ ಸೇವೆ ನಡೆಯಲಿದೆ ಎಂದು ಬಳಗದ ಸತೀಶ್‌ಕುಮಾರ್ 'ಕನ್ನಡಪ್ರಭ'ಕ್ಕೆ ಭಾನುವಾರ ತಿಳಿಸಿದರು.
ಮಹಾರಥೋತ್ಸವದ ದಿನವಾದ ಮಾ. 6ರಂದು ಬೆಳಗ್ಗೆ 7ರಿಂದ ಇಡ್ಲಿ, ವಡಾ, ಉಪ್ಪಿಟ್ಟು ಸೇವೆ ಕಲ್ಪಿಸಲಾಗುವುದು. ಮಧ್ಯಾಹ್ನ ಹೆಸರು ಬೇಳೆ ಪಾಯಸ, ಅನ್ನ, ಸಾಂಬಾರು, ವಡಾ ಮತ್ತಿತರ ಊಟದ ಮೆನು ರೆಡಿಯಾಗಿದೆ. ನಾಲ್ಕು ವರ್ಷಗಳಿಂದ ಶ್ರೀ ಅಮರನಾಥ ಯಾತ್ರಾ ಸಮಿತಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ನಿರಂತರ ಸೇವೆ ಒದಗಿಸುತ್ತಿದೆ. ಇಂತಹ ಸೇವೆಯನ್ನು ಕಾಶ್ಮೀರದಲ್ಲಿ ಅಮರನಾಥ ಯಾತ್ರಾರ್ಥಿಗಳಿಗೂ ನೀಡುತ್ತಾ ಬಂದಿದ್ದೇವೆ ಎಂದು ಸತೀಶ್ ತಿಳಿಸಿದ್ದಾರೆ.
ದಾಸೋಹ:  ಇಲ್ಲಿನ ಶ್ರೀ ಗುರು ಕೊಟ್ಟೂರೇಶ್ವರ ಜೀವಂತ ಯೋಗ ಸಮಾಧಿ ಗಚ್ಚಿನಮಠದ ಪ್ರಸಾದ ಸಮಿತಿಯವರೂ ಮಾ. 5ರ ಬೆಳಗ್ಗೆ 11 ಗಂಟೆಯಿಂದಲೇ ಹಿರೇಮಠದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ದಾಸೋಹ ಸೇವೆ ಆರಂಭಿಸಲಿದೆ. ರಾಣಿಬೆನ್ನೂರು ಪಾದಯಾತ್ರಾ ಸಮಿತಿ ಮತ್ತು ದಾವಣಗೆರೆ ಪಾದಯಾತ್ರೆ ಸಮಿತಿಯವರೂ ಹಿರೇಮಠ, ಗಚ್ಚಿನ ಮಠಗಳಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಾರೆಯಾಗಿ ಮಹಾರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಹಲವು ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.