ಬಳ್ಳಾರಿ

ಶ್ರದ್ಧಾ ಭಕ್ತಿಯ ಶಿವನಾಮ ಸ್ಮರಣೆ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 10
ದಕ್ಷಿಣದ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ವಿಶ್ವವಿಖ್ಯಾತ ಹಂಪಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆದವು.
ಶಿವರಾತ್ರಿ ಮುನ್ನಾದಿನವೇ ಸ್ವಾಮಿಯ ದರ್ಶನಕ್ಕಾಗಿ ಹಂಪಿಗೆ ಜನಸಾಗರವೇ ಹರಿದು ಬಂದಿದ್ದು, ಭಾನುವಾರ ಬೆಳಗ್ಗೆ ಶಿವರಾತ್ರಿ ಅಂಗವಾಗಿ ಸಾವಿರಾರು ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಸ್ವಾಮಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತು ದರ್ಶನ ಪಡೆದರು. ವಿಶೇಷ ಪೂಜಾ ದಿನದಂದು ಸ್ವಾಮಿಗೆ ನವರತ್ನ ಖಚಿತ ಕಿರೀಟ ಧಾರಣೆ ಮಾಡಿ ವಿಶೇಷ ಅಲಂಕಾರ, ಪೂಜೆಗಳನ್ನು ನಡೆಸಲಾಯಿತು. ಬೆಳಗ್ಗೆ 10.30ಕ್ಕೆ ನಡೆದ ವಿಶೇಷ ಪೂಜೆಯಲ್ಲಿ ಹಂಪಿಯ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಭಾಗವಹಿಸಿ ಪೂಜೆ ಸಲ್ಲಿಸಿದರು. 1509ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕ ಸಂದರ್ಭದಲ್ಲಿ ನವರತ್ನ ಖಚಿತ ಕಿರೀಟವನ್ನು ಸ್ವಾಮಿಗೆ ಸಮರ್ಪಿಸಿದನೆಂದು ಇತಿಹಾಸ ಹೇಳುತ್ತದೆ. ಹಂಪಿ ಫಲಪೂಜೆ, ಜಾತ್ರೆ , ಉತ್ಸವ ಮತ್ತು ಶಿವರಾತ್ರಿ ಸಂದರ್ಭದಲ್ಲಿ ಸ್ವಾಮಿಗೆ ಧಾರಣೆ ಮಾಡಿ ವಿಶೇಷ ಪೂಜೆ ಮಾಡಲಾಗುತ್ತದೆ.
ಸಂಭ್ರಮದ ಜಾಗರಣೆ: ಶಿವರಾತ್ರಿ ದಿನ ಸಂಜೆ 6.30ರಿಂದ ಮಾರನೆ ದಿನ ಬೆಳಗಿನ ಜಾವ 4.30ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು ಗಂಟೆಗೊಮ್ಮೆ ವಿರೂಪಾಕ್ಷೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಸಲಾಗುತ್ತದೆ. ಭಕ್ತರು ಇಡೀ ರಾತ್ರಿ ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಜಾಗರಣೆ ಮಾಡುತ್ತಾರೆ. ಜಾಗರಣೆ ಅಂಗವಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಮತ್ತು ತಾಲೂಕಿನ ಕೆಲ ಗ್ರಾಮಗಳಿಂದ ಭಜನಾ ತಂಡಗಳು ತಮ್ಮೂರಿನಿಂದ ಪಾದಯಾತ್ರೆ ಮೂಲಕ ಹಂಪಿಗೆ ಬಂದು ದೇವಸ್ಥಾನದಲ್ಲಿ ಭಜನೆ,   ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಕೆಲ ಭಕ್ತರು ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಸಿಕೊಟ್ಟರೆ ಇನ್ನು ಕೆಲವರು ಹಣ್ಣು-ಹಂಪಲು ಸೇವೆ ನಡೆಸಿದರು. ದೂರದ ಊರುಗಳಿಂದ ಟ್ರ್ಯಾಕ್ಸ್, ಬಸ್, ಕಾರು ಹಾಗೂ ಮತ್ತಿತರ ವಾಹನಗಳಲ್ಲಿ ಭಕ್ತರು ಆಗಮಿಸಿ, ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಸಿ ಜಾಗರಣೆ ಆಚರಿಸಿದರು.
ಸ್ಥಳೀಯ ಭಕ್ತರೊಂದಿಗೆ ವಿದೇಶಿ ಪ್ರವಾಸಿಗರು ಸಹ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನಕ್ಕೆಂದು ಸರತಿಯಲ್ಲಿ ನಿಂತು ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿತ್ತು.

ತಾಲೂಕಾದ್ಯಂತ ಶಿವರಾತ್ರಿ ಆಚರಣೆ
ಹೂವಿನಹಡಗಲಿ: ತಾಲೂಕಿನಾದಂತ್ಯ ಮಹಾ ಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸುತ್ತಾ ಜನರು ಶಿವ ದೇಗುಲಕ್ಕೆ ತೆರಳಿ ಪೂಜೆ, ಅಭಿಷೇಕ, ಅರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ತಾಲೂಕಿನ ಮಾಗಳ, ರಂಗಾಪುರ, ಹೊಳಲು, ಹೂವಿನಹಡಗಲಿ, ಕೋಟ್ನಿಕಲ್, ಕಾಗನೂರು, ಕುರುವತ್ತಿ, ಮೈಲಾರ ಸೇರಿದಂತೆ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶಿವ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಮಾಗಳ-ರಂಗಾಪುರದ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯೊಳಗಿರುವ ಜಡಿ ಶಂಕರ ಲಿಂಗು, ರಾಮೇಶ್ವರ, ಧರ್ಮಶ್ವರ, ಸೂರ್ಯ ನಾರಾಯಣ ದೇಗುಲದಲ್ಲಿರುವ ಮಹಾಲಿಂಗೇಶ್ವರ ಶಿವರಾತ್ರಿಯಂದು ನರಸಿಂಹ ತೀರ್ಥ, ಶಂಕರಲಿಂಗ ತೀರ್ಥ, ಪ್ರಯಾಗ ತೀರ್ಥ, ಅಶ್ವತ ನಾರಾಯಣ ತೀರ್ಥ, ಶಿವ ತೀರ್ಥ, ಮಲ್ಲಿಕಾರ್ಜುನ ತೀರ್ಥ, ಪ್ರೇತ ಪರ್ವತ ತೀರ್ಥ, ಗಯಾ ತೀರ್ಥ, ವಿಠ್ಠಲತೀರ್ಥ ಸೇರಿದಂತೆ ತುಂಗಭದ್ರೆಯಲ್ಲಿರುವ ಈ 9 ತೀರ್ಥಗಳಲ್ಲಿ ಭಕ್ತರು ಬೆಳಗ್ಗೆ ಪುಣ್ಯಸ್ನಾನ ಮಾಡಿ ನದಿಯಲ್ಲಿರುವ ಲಿಂಗುವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಪಟ್ಟಣದಲ್ಲಿ ಬೆಳಗ್ಗೆ ಶಿವಲಿಂಗ ಮೂರ್ತಿಯ ಮೆರವಣಿಗೆ ಮಾಡುತ್ತಾ ಮಹಾ ಶಿವರಾತ್ರಿಯ ವಿಶೇಷ ಸಂದೇಶವನ್ನು ಸಾರುವ ಮೂಲಕ ಶಿವನಾಮ ಸ್ಮರಣೆ ಮಾಡಿದರು. ಕುರುವತ್ತಿಯ ತುಂಗಭದ್ರಾ ನದಿ ಮಧ್ಯೆದ ಈಶ್ವರ ಲಿಂಗುವಿಗೆ ಪೂಜೆ ಮಾಡಲು ಹಾಗೂ ಮಹಾ ಶಿವರಾತ್ರಿಯನ್ನು ಸುಕ್ಷೇತ್ರ ಕುರುವತ್ತಿಯಲ್ಲೇ ಆಚರಿಸಲು ಅನೇಕ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಮಹಾ ಶಿವರಾತ್ರಿ ಆಚರಣೆ
ಬಳ್ಳಾರಿ: ಮಹಾ ಶಿವರಾತ್ರಿಯನ್ನು ನಗರದಲ್ಲಿ ಭಕ್ತರು ಸಂಭ್ರಮ ಸಡಗರಿಂದ ಆಚರಿಸಿದರು. ಶಿವರಾತ್ರಿ ನಿಮಿತ್ತ ಭಕ್ತರು ಉಪವಾಸ ಆಚರಿಸುವ ಮೂಲಕ ಜಾಗರಣೆ ಮಾಡಿದರು. ನಗರದ ಪ್ರಮುಖ ಶಿವ ದೇವಾಲಯ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಬಳ್ಳಾರಿ ನಗರದ ಪ್ರಮುಖ ಶಿವದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ನಾರಾಯಣರಾವ್ ಉದ್ಯಾನವನದಲ್ಲಿರುವ ಶಿವನ ಮೂರ್ತಿಗೆ ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಕ್ಷೀರ, ಕುಂಕುಮ, ಅರಿಷಿಣ ಅಭಿಷೇಕ ಮಾಡಿಸಿದರು. ಶಿವರಾತ್ರಿ ಅಂಗವಾಗಿ ಶಿವ ಭಕ್ತರು ಉಪವಾಸ ಮಾಡಿದ್ದರಿಂದ ಸಹಜವಾಗಿಯೇ ನಗರ ಸೇರಿದಂತೆ ಜಿಲ್ಲೆಯಲ್ಲಿ ಹಣ್ಣುಗಳ ಬೆಲೆ ಗಗನಕ್ಕೇರಿತ್ತು.
ನಾರಾಯಣರಾವ್ ಉದ್ಯಾನವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶಂಕರನ ಬೃಹತ್ ವಿಗ್ರಹಕ್ಕೆ ಬಣ್ಣದ ಲೇಪನ ಮಾಡಿದ್ದು, ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರ ಸಂಜೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ವಿಪ್ರ ಮಹೋದಯರ ವೇದ ಮಂತ್ರ ಘೋಷಗಳೊಡನೆ ಪೂಜೆಯನ್ನು ಸಾಂಗವಾಗಿ ನೆರವೇರಿಸಿದ ಶಾಸಕರು ಲೋಕ ಕಲ್ಯಾಣಾರ್ಥ ಪ್ರಾರ್ಥಿಸಿದರು. ಬಿಎಸ್ಸಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗುರುಲಿಂಗನಗೌಡ, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಎಂ. ಗೋವಿಂದರಾಜುಲು, ಚೌಧರಿ ಇತರರು ಇದ್ದರು.

ಬಲವಂತಪ್ಪನಿಗೆ ಭಕ್ತರ ದಂಡು
ಹಗರಿಬೊಮ್ಮನಹಳ್ಳಿ: ತಾಲೂಕಿನ ಅನೆಕಲ್ಲು ಕುರುಚಲು ಅಡವಿಯಲ್ಲಿ ನೆಲೆಸಿರುವ ಬಲವಂತಪ್ಪ ದೇವರ ಬಳಿಗೆ ಮಹಾ ಶಿವರಾತ್ರಿಯ ಭಾನುವಾರ ಬೆಳಗಿನ ಜಾವದಿಂದ ಸಂಜೆವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಿಸಿದರು.
ಭಕ್ತರ ಬೇಡಿಕೆ, ಇಷ್ಟಾರ್ಥಗಳನ್ನು ನೇರವೇರಿಸುವ ದೈವ ಎಂದೇ ಈ ಭಾಗದಲ್ಲಿ ಮನೆ ಮಾತಾಗಿರುವ ಬಲವಂತಪ್ಪನನ್ನು ಹುಡುಕಿಕೊಂಡು ತಾಲೂಕು ಸೇರಿದಂತೆ ಪಕ್ಕದ ತಾಲೂಕುಗಳಿಗೆ ಸೇರಿದ ನೂರಾರು ಭಕ್ತರ ತಂಡಗಳು ಭಾನುವಾರ ಬೆಳಗ್ಗಿನಿಂದಲೇ ಅನೆಕಲ್ಲು ಅಡವಿಯತ್ತ ಹೆಜ್ಜೆಹಾಕಿದರು. ಅಜ್ಞಾತ ಸ್ಥಳದಲ್ಲಿರುವ ಬಲವಂತಪ್ಪನ ಬಗ್ಗೆ ಮಾ. 9ರಂದು 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಗಮನಿಸಿದ ಭಕ್ತರು ಕಳೆದ ವರ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದು ದಾಖಲೆಯೇ ಸರಿ ಎನ್ನುತ್ತಾರೆ ಬಲವಂತಪ್ಪನ ಭಕ್ತರು. ನಿಜಕ್ಕೂ ತಾವು 'ಕನ್ನಡಪ್ರಭ'ಕ್ಕೆ ಆಭಾರಿಯಾಗಿದ್ದೇವೆ. ಕುರುಚಲು ಅಡವಿಯಲ್ಲಿರುವ ಬಲವಂತಪ್ಪನ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿದ್ದರಿಂದ ನಾವು ಈ ಸಲದ ಮಹಾ ಶಿವರಾತ್ರಿಯಂದು ಬಲವಂತಪ್ಪನ ತಾಣದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಹೊಸ ಭಕ್ತರನ್ನು ಕಾಣುವಂತಾಯಿತು ಎಂದು ಬಲವಂತಪ್ಪನ ಭಕ್ತರೊಬ್ಬರು ಹರ್ಷವ್ಯಕ್ತಪಡಿಸಿದರು. ಅನೆಕಲ್ಲು ಅಡವಿಯ ಬಲವಂತಪ್ಪನ ಬಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಆನೆಕಲ್ಲು ಹಾಗೂ ದಶಮಾಪುರದಿಂದ ಉತ್ತಮ ರಸ್ತೆ ಸಂಪರ್ಕದಂತಹ ಮೂಲಭೂತ ಸೌಲಭ್ಯ ಕಲ್ಪಿಸುವುದು ಅಗತ್ಯವಿದೆ ಎನ್ನುತ್ತಾರೆ ಭಕ್ತರು. ಬಲವಂತಪ್ಪ ಭಕ್ತ ಮಂಡಳಿಯ ಜಿ. ಅಜ್ಜಯ್ಯ, ಡಿಶ್ ವೆಂಕಟೇಶ, ಸೆರೆಗಾರ ಹುಚ್ಚಪ್ಪ ಸೇರಿದಂತೆ ಹಲವರು ಇದ್ದರು.

ಶಿವರಾತ್ರಿ ನಿಮಿತ್ತ ಪೂಜೆ
ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಶಿವರಾತ್ರಿಯನ್ನು ಭಕ್ತರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು. ರಾಮನಗರದ ರೇಲ್ವೆಗೇಟ್ ಬಳಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ಸರದಿಯಲ್ಲಿ ನಿಂತು ಜನತೆ ಶಿವಪೂಜೆ ಸಲ್ಲಿಸಿದರು. ಕೆವಿಓಆರ್ ಕಾಲೋನಿಯ ಶ್ರೀ ಪತ್ರಿಬಸವೇಶ್ವರ, ಹಳೇಹಗರಿಬೊಮ್ಮನಹಳ್ಳಿ ಶ್ರೀ ಕಲ್ಲೇಶ್ವರ ಸ್ವಾಮಿ, ಬ್ಯಾಲಾಳು ಗ್ರಾಮದ ಬಳಿಯ ಜೆಸ್ಕಾಂ ವಿದ್ಯುತ್ ಸ್ಥಾವರ ಆವರಣದ ಶ್ರೀ ಈಶ್ವರ ದೇವಸ್ಥಾನ, ಪಟ್ಟಣದ ಕೆಚ್ಚಿನಬಂಡಿ ರಸ್ತೆಯ ಪಂಚಮಸಾಲಿ ಸಮಾಜದ ಶ್ರೀ ಹರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ತಾಲೂಕಿನ ಬೆಣಕಲ್ಲು, ಅಂಬಳಿ, ತಂಬ್ರಹಳ್ಳಿ, ಪುಣ್ಯಕ್ಷೇತ್ರ ನಂದಿಪುರ, ಹಂಪಾಸಾಗರ, ಏಣಿಗೆ, ಮಾಲ್ವಿ, ಅಂಕಸಮುದ್ರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಶಿವನಿಗೆ ಪೂಜಿಸಿದರು.

ಶಿವಲಿಂಗೇಶ್ವರ ರಥೋತ್ಸವ
ಹೂವಿನಹಡಗಲಿ: ತಾಲೂಕಿನ ಕಾಗನೂರು ಶಿವಲಿಂಗೇಶ್ವರ ರಥೋತ್ಸವವು ಸಡಗರ ಸಂಭ್ರಮದಿಂದ ಶಿವರಾತ್ರಿ ದಿನ ಜರುಗಿತು. ರಥೋತ್ಸವಕ್ಕೆ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ತೇರನ್ನು ಎಳೆದು ಭಕ್ತಿ ಮೆರೆದರು. ಶಿವಲಿಂಗೇಶ್ವರನಿಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಎತ್ತಿನ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಕಮೀಟಿಯವರು ಹಮ್ಮಿಕೊಂಡಿದ್ದರು.
ಕಳೆದ 10-20 ವರ್ಷಗಳಿಂದ ಹಿಂದೆ ನಡೆದಿದ್ದ ಶಿವಲಿಂಗೇಶ್ವರ ಜಾತ್ರೆಯು ಕಳೆದ ಮೂರು ವರ್ಷಗಳಿಂದ ಹಿರೇಕಲ್ಮಠ ಹೊನ್ನಾಳಿ-ಪುರ ವರ್ಗ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜಾತ್ರೆಗೆ ಮತ್ತೆ ಚಾಲನೆ ನೀಡಲಾಗಿದೆ.
ಶಿವಲಿಂಗೇಶ್ವರ ಜಾತ್ರೆ ಮಾಡುವುದಾದರೆ ಗ್ರಾಮದಲ್ಲಿ ಜೂಜಾಟಗಳಾದ ಇಸ್ಪೀಟ್, ಮಟ್ಕಾ, ಮದ್ಯ ಮಾರಾಟ, ತತ್ತಿ, ಮಾಂಸ ಮಾರಾಟವನ್ನು ಯಾವ ಜನಾಂಗದ ಜನರು ಮಾಡಬಾರದು, ಒಂದು ವೇಳೆ ಗ್ರಾಮಸ್ಥರಿಗೆ ಗೊತ್ತಿಲ್ಲದಂತೆ ಮಾಡಿದರೆ ರು. 10 ಸಾವಿರ ದಂಡ ವಿಧಿಸಲಾಗುವುದು, ಹೀಗಾದರೆ ಮಾತ್ರ ಜಾತ್ರೆ ಮಾಡಬೇಕೆಂದು ಗ್ರಾಮಸ್ಥರು ಕಠಿಣ ನಿರ್ಧಾರ ತೆಗೆದುಕೊಂಡ ಪರಿಣಾಮ ಈಗ್ಗೆ ಮೂರು ವರ್ಷಗಳಿಂದ ಕಾಗನೂರು ಗ್ರಾಮದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸಿ ಎಲ್ಲ ಸಮುದಾಯದ ಜನರು ಸಡಗರ ಸಂಭ್ರಮ, ಸಂತೋಷದಿಂದ ಜಾತ್ರೆ ಮಾಡುತ್ತಿದ್ದಾರೆಂದು ಗುರುಪಾದ ಸ್ವಾಮಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.