ಐವರಿಗೆ ವಿಎಸ್ಕೆ ವಿವಿ ಗೌರವ ಡಾಕ್ಟರೇಟ್
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 19
ಸಂಗೀತದಲ್ಲಿ ಸಾಧನೆಗೈದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಕೆಳದಿ ಗುಂಡಾ ಜೋಯಿಸ್ ಸೇರಿ ಐವರಿಗೆ ಮಾ. 20ರಂದು ನಡೆಯುವ ವಿವಿಯ ಮೊದಲನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಮಂಜಪ್ಪ ಹೊಸಮನೆ ಹೇಳಿದರು.
ವಿಶ್ವವಿದ್ಯಾಲಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣು ಭೌತಶಾಸ್ತ್ರಜ್ಞ ಡಾ ಇಬ್ರಾಹಿಂ ಬಿಜಲಿ ಸೈಯದ್, ರಂಗಭೂಮಿ ಕಲಾವಿದೆ ಮರಿಯಮ್ಮನಹಳ್ಳಿಯ ಕೆ. ನಾಗರತ್ನಮ್ಮ, ಭೂಗರ್ಭ ಶಾಸ್ತ್ರಜ್ಞ ಪ್ರೊ ಸಿ. ನಾಗಣ್ಣ ಅವರೂ ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ವಿವಿ ಮೊದಲ ಘಟಿಕೋತ್ಸವದಲ್ಲಿ ಕನ್ನಡ, ಇಂಗ್ಲಿಷ್ ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ, ಎಂಇಡಿ, ಬಿಇಡಿ ಪೂರ್ಣಗೊಳಿಸಿದ ವಿವಿಧ ವಿಭಾಗಗಳ 2,628 ವಿದ್ಯಾರ್ಥಿಗಳಿಗೆ ಪದವಿ, 16 ವಿದ್ಯಾರ್ಥಿಗಳಿಗೆ ರ್ಯಾಂಕ್ ನೀಡಲಾಗುತ್ತದೆ. ರಾಸಾಯನಿಕ ಶಾಸ್ತ್ರದಲ್ಲಿ ಪ್ರೌಢ ಪ್ರಬಂಧ ಮಂಡಿಸಿದ ಇಬ್ಬರಿಗೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ ಕೆ. ವಿಜಯಕುಮಾರ್, ಪರೀಕ್ಷಾಂಗ ಕುಲಸಚಿವ ಡಾ ರಂಗರಾಜ ವನದುರ್ಗ, ಡಾ ಬಸವರಾಜ್ ಬೆಣ್ಣಿ ಇದ್ದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಸಚ್ಚಿದಾನಂದ ಸ್ವಾಮೀಜಿ ಸಂಗೀತ ಕ್ಷೇತ್ರದ ಸಾಧಕರು. ಮೈಸೂರಿನ ಅವಧೂತ ದತ್ತ ಪೀಠದ ಪೀಠಾಪತಿಗಳು. ಕನಕಾಪುರ ಜಿಲ್ಲೆಯ ಮೆಕೆದಾಟುವಿನಲ್ಲಿ 1942ರಲ್ಲಿ ಜನಸಿದರು. ಧರ್ಮ, ಜಾತಿ, ಪಂಥಗಳಲ್ಲಿ ಭಿನ್ನತೆ ಸಲ್ಲದು ಎಂದು, ರಾಗರಾಗಿಣಿ ವಿದ್ಯೆಯನ್ನು ಅನ್ವೇಷಿಸಿ ಜನಪ್ರಿಯಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಜಗತ್ತಿನಾದ್ಯಂತ ಸಂಚರಿಸಿ ಆಧ್ಯಾತ್ಮಿಕ ಕಚೇರಿಗಳನ್ನು ನಡೆಸಿದ್ದಾರೆ. 7000 ಭಜನ್ಗಳನ್ನು ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ.
ಕೆಳದಿ ಗುಂಡಾ ಜೋಯಿಸ
ಇತಿಹಾಸ ಸಂಶೋಧಕ ಗುಂಡಾ ಜೋಯಿಸ ತಿಗಳಾರಿ ಲಿಪಿ ತಜ್ಞರು. ಮೋಡಿಲಿಪಿ ಹಾಗೂ ತಿಗಳಾರಿ ಲಿಪಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಶ್ರಮಿಸಿದ್ದಾರೆ. ದೆಹಲಿಯ ಇಂದಿರಾಗಾಂಧಿ ಸಂಶೋಧನಾ ಕೇಂದ್ರ ಹಾಗೂ ಲಕ್ನೋ ಕೇಂದ್ರಗಳಲ್ಲಿ ಮೈಕ್ರೋಫಿಲ್ಮ್ ತಯಾರಿಸಿದ ಹೆಗ್ಗಳಿಕೆ ಇದೆ. ಧರ್ಮಸ್ಥಳದ ಡಾ ವೀರೇಂದ್ರ ಹೆಗ್ಗಡೆಯವರ ಆಹ್ವಾನದ ಮೇರೆಗೆ 6000 ಚಾರಿತ್ರಿಕ ದಾಖಲೆಗಳ ಸೂಚಿಗಳನ್ನು, ಸರ್ಕಾರದ ಪತ್ರಗಾರ ಇಲಾಖೆಗಳಲ್ಲಿ, ಮೈಸೂರಿನ ಅರಮನೆ ಕೇಂದ್ರಗಳಲ್ಲಿ ಕೃತಿ ಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಅಮೆರಿಕಾ, ಸ್ವೀಡನ್, ಲಂಡನ್ನ ಪುರಾತತ್ವ ಸಂಸ್ಥೆಗಳಲ್ಲಿ ಪಾಂಡಿತ್ಯಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇತಿಹಾಸ ಸಂಶೋಧನೆ ಜತೆಗೆ ಬುದ್ಧಿ ಮಾಂದ್ಯರಿಗೆ, ಅಂಗವಿಕಲರಿಗೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡುವ ಸೇವಾ ಕೈಂಕರ್ಯವನ್ನು ಕೈಗೊಂಡಿದ್ದಾರೆ.
ಡಾ. ಇಬ್ರಾಹಿಂ ಬಿಜಲಿ ಸೈಯದ್
ಮೂಲತಃ ಬಳ್ಳಾರಿಯವರು. ಆರೋಗ್ಯ ವಿಜ್ಞಾನದಲ್ಲಿ ನ್ಯಾನೋ ಟೆಕ್ನಾಲಜಿಯನ್ನು ಬಳಸುವ ಮೂಲಕ ಹೆಸರು ಪಡೆದಿದ್ದಾರೆ. ಮೆರಿಲೆಂಡ್ನ ಬಲ್ಟಿಮೋರ್ನಲ್ಲಿರುವ ಜಾನ್ ಹಾಫಕಿನ್ಸ್ ವಿವಿಯಿಂದ ನ್ಯೂಕ್ಲಿಯರ್ ಆರೋಗ್ಯ ವಿಜ್ಞಾನ ವಿಷಯದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದರು. ಕೆಂಟುಕಿಯ ಲೂಯಿಸಿವೆಲ್ಲೆ ವಿವಿಯ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಕ್ಲಿನಿಕಲ್ ಪ್ರೊಫೆಸರ್ ಆಫ್ ಮೆಡಿಸಿನ್ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕಾದ ರೇಡಿಯಾಲಜಿ ಕಾಲೇಜಿನಲ್ಲಿ ಹಾಗೂ ಬ್ರಿಟನ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ನಲ್ಲಿ ಸಂದರ್ಶಕ ಪ್ರಾಧ್ಯಾಪಕರು. ಅಮೆರಿಕಾದ ಇನ್ಸ್ಟಿಟ್ಯೂಟ್ ಆಫ್ ಕೆಮಿಸ್ಟ್ ಮತ್ತು ರಾಯಲ್ ಸೊಸೈಟಿ ಆಫ್ ಹೆಲ್ತ್ಗೂ ಸದಸ್ಯರಾಗಿದ್ದಾರೆ.
ರಂಗ ಕಲಾವಿದೆ ಕೆ. ನಾಗರತ್ನಮ್ಮ
ಕೆ. ನಾಗರತ್ನಮ್ಮ ಗ್ರಾಮೀಣ ಪ್ರತಿಭೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ 1952ರಲ್ಲಿ ಜನಿಸಿದರು. 40 ವರ್ಷಗಳಿಂದ 10 ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮಹಿಳಾ ವೃತ್ತಿ ಕಲಾವಿದೆಯರ ಸಂಘ ಸ್ಥಾಪಿಸಿದ್ದಾರೆ. 15ನೇ ವಯಸ್ಸಿನಿಂದಲೇ ರಂಗದ ನಂಟು. ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ನಾಡಚೇತನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುರುಕ್ಷೇತ್ರ, ರಕ್ತರಾತ್ರಿ, ಚಿತ್ರಾಂಗದಾ, ಅಗ್ನಿಕಮಲ, ವಿಜಯನಗರ ಸಾಮ್ರಾಜ್ಯ, ಆದರ್ಶ ಪ್ರೇಮ ಮುಂತಾದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ತಮ್ಮ ವಿಶಿಷ್ಟ ಅಭಿನಯ ಸಾದರಪಡಿಸಿದ್ದಾರೆ.
ಪ್ರೊ. ಸಿ. ನಾಗಣ್ಣ
ಬಳ್ಳಾರಿ ಜಿಲ್ಲೆ ಸಂಡೂರು ಪ್ರದೇಶದ ಮ್ಯಾಂಗನೀಸ್ ಮತ್ತು ಸಹ ಖನಿಜಗಳ ನಿಕ್ಷೇಪ ಕುರಿತಾಗಿ ಸಂಶೋಧನೆ ಮಾಡಿದ್ದಾರೆ. ಚಾರ್ಲ್ಸ್ ವಿವಿ ಪ್ರಕಟಿಸಿದ ಅವರ ಪ್ರಬಂಧ ಈ ಭಾಗದ ನಿಕ್ಷೇಪ ಕಂಡುಹಿಡಿಯಲು ಮತ್ತು ಭೂಶಾಸ್ತ್ರವನ್ನು ಅರ್ಥೈಸಿಕೊಳ್ಳಲು ಸಹಾಯ ನೀಡಿದೆ. 1930ರಲ್ಲಿ ಚಾಮರಾಜನಗರ ಜಿಲ್ಲೆಯ ಕುದೆರು ಗ್ರಾಮದಲ್ಲಿ ಜನಿಸಿದರು. ಸಂಶೋಧನೆಗಾಗಿ ಚಕೊಸ್ಲೋವಾಕಿಯ ಸರ್ಕಾರದ ಅನುದಾನದ ಮೇರೆಗೆ ಪೆರಗ್ವೆಯ ಚಾರ್ಲ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆಗೆ ಸೇರಿಕೊಂಡರು. ಚಕೊಸ್ಲೋವಾಕಿಯ ಸರ್ಕಾರದ ವಿಜ್ಞಾನ ಅಕಾಡೆಮಿ ಗೌರವ ಫೆಲೋಷಿಪ್ ನೀಡಿ, ಸನ್ಮಾನಿಸಿದೆ. ಹಟ್ಟಿ ಪ್ರದೇಶದ ಚಿನ್ನದ ಖನಿಜ ಕುರಿತ ಅಧ್ಯಯನ, ಸೇಂಟ್ ಮೇರಿ ದ್ವೀಪದ ಬಂಡೆಗಲ್ಲು ಅಧ್ಯಯನ ಮತ್ತು ಅಂತರ್ಜಲದ ಅಧ್ಯಯನ ಭೂವಿಜ್ಞಾನದಲ್ಲಿ ಮಹತ್ವದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

