ಬಳ್ಳಾರಿ

ಮುಗಿಲು ಮುಟ್ಟಿದ ಟಿಕೆಟ್ ಆಕಾಂಕ್ಷಿಗಳ ಕಸರತ್ತು

Published On :

ಹಗರಿಬೊಮ್ಮನಹಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಕಸರತ್ತು ಜೋರಾಗಿದೆ.
ಕಾಂಗ್ರೆಸ್ನ ಟಿಕೆಟ್ ಆಕಾಂಕ್ಷಿಗಳು ದೆಹಲಿಗೆ ತೆರಳಿ ತಮ್ಮ ನಾಯಕರಲ್ಲಿ ಮನವಿ ಸಲ್ಲಿಸುವ ಮೂಲಕ ಒತ್ತಡ ತರುತ್ತಿದ್ದಾರೆ. ಇನ್ನೂ ಕೆಲವರು ಬೆಂಗಳೂರಿನಲ್ಲೆ ಠಿಕಾಣಿ ಹೂಡಿ ಕೈಗೆ ಸಿಗುವ ಕೈ ನಾಯಕರ ಮನೆ ಮುಂದೆ ಪರೇಡ್ ಆರಂಭಿಸಿದ್ದಾರೆ.
2008ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ರೂಪಗೊಂಡ ಮೇಲೆ ಈ ಕ್ಷೇತ್ರಕ್ಕೆ ಇದು ಎರಡನೇ ಚುನಾವಣೆಯಾಗಿದೆ. ಕ್ಷೇತ್ರದ ಪ್ರಥಮ ಶಾಸಕ ಬಿಜೆಪಿಯ ಕೆ. ನೇಮಿರಾಜ ನಾಯ್ಕ ಸದ್ಯ ಬಿಜೆಪಿಯಲ್ಲಿಯೇ ಗುರುತಿಸಿಕೊಂಡಿದ್ದು, ಈ ಸಲವೂ ಕಮಲದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುವುದಾಗಿ ಖಚಿತಪಡಿಸಿದ್ದಲ್ಲದೆ, ಈಗಾಗಲೇ ಕ್ಷೇತ್ರಾದ್ಯಂತ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಜೆಡಿಎಸ್ನಿಂದ ಎರ್ರಿಸ್ವಾಮಿ?: ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಲು ಮಾತಾಗ್ಯಾಸ್ ಎರ್ರಿಸ್ವಾಮಿ ಹಾಗೂ ಭಾಗ್ಯಮ್ಮ ಏಕಾಂಬ್ರೇಶ್ ನಾಯ್ಕ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತಮ್ಮ ಬಗ್ಗೆ ಪಕ್ಷದ ಮುಖಂಡರಲ್ಲಿ ಒಮ್ಮತ ಇದೆ ಎಂದು ಹೇಳಿಕೊಂಡು ಎರ್ರಿಸ್ವಾಮಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರವನ್ನು ಸದ್ದಿಲ್ಲದೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಯಶವಂತನಗರ ಜಿಪಂ ಕ್ಷೇತ್ರದ ಸದಸ್ಯ ಎಸ್. ಭೀಮಾನಾಯ್ಕ ಸದ್ಯ ಬಿಎಸ್ಸಾರ್ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದು, ಬಿಎಸ್ಸಾರ್ ಟಿಕೆಟ್ ಇವರಿಗೆ ಖಚಿತವಾಗಿದೆ. ಹೀಗಾಗಿ ಭೀಮಾನಾಯ್ಕ ಸಹ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಜತೆಗೂಡಿ ಪ್ರಚಾರ ಆರಂಭಿಸಿದ್ದಾರೆ.
ಕೈಗೆ ಆಕಾಂಕ್ಷಿಗಳು ಹೆಚ್ಚು: ಕಳೆದ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಗ್ಡಾಳ ರಾಮಣ್ಣ ಸೇರಿದಂತೆ ಒಟ್ಟು ಇಪ್ಪತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಇವರ ಪೈಕಿ ಕಳೆದ ಸಲ ಸೋತಿರುವ ಹೆಗ್ಡಾಳ ರಾಮಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಕೆಪಿಸಿಸಿ ಸದಸ್ಯ ಮರಿಯಮ್ಮನಹಳ್ಳಿಯ ಕೃಷ್ಣನಾಯ್ಕ ಈ ಮೂವರ ಹೆಸರು ಸದ್ಯ ಬಲವಾಗಿ ಕೇಳಿಬರುತ್ತಿವೆ.
ಈ ನಡುವೆ ಬಳ್ಳಾರಿಯ ಎ. ಮಾನಯ್ಯ ಅವರ ಹೆಸರು ರೇಸ್ನಲ್ಲಿದೆ. ಯಾರಿಗೆ ಟಿಕೆಟ್ ನೀಡಿದರೂ ಸ್ಥಳೀಯರಿಗೆ ನೀಡಬೇಕೆಂದು ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮೇಲೆ ತೀವ್ರ ಒತ್ತಡ ಹಾಕುತ್ತಿದ್ದಾರೆ. ಮಾನಯ್ಯ ಪರ ಪಕ್ಷದ ಮುಖಂಡ ಕೆ.ಸಿ. ಕೊಂಡಯ್ಯ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೆಗ್ಡಾಳ ರಾಮಣ್ಣ ಪರ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಅತ್ತ ಕೆಪಿಸಿಸಿ ಸದಸ್ಯ ಮರಿಯಮ್ಮನಹಳ್ಳಿ ಕೃಷ್ಣನಾಯ್ಕ ಪರ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇತ್ತ ಜಿಪಂ ಸದಸ್ಯೆ ಹೇಮ್ಲವ್ವಗೆ ಮಹಿಳಾ ಕೋಟಾದಡಿ ಟಿಕೆಟ್ ನೀಡುವಂತೆ ಅವರ ಪತಿ, ತಾಪಂ ಮಾಜಿ ಸದಸ್ಯ ರಾಯರಾಳುತಾಂಡ ಕೃಷ್ಣನಾಯ್ಕ ಕೈ ಮುಖಂಡರಿಗೆ ಮನವಿಪತ್ರ ಸಲ್ಲಿಸಿದ್ದಾರೆ.
ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ಕೆಜೆಪಿಯಿಂದ ಇಲ್ಲಿತನಕ ಅಭ್ಯರ್ಥಿ ಯಾರೆಂದು ಬಹಿರಂಗವಾಗಿಲ್ಲ. ಕಾಂಗ್ರೆಸ್ ಟೆಕೆಟ್ ಸಿಗದಿರುವವರನ್ನೇ ಸೆಳೆದು ಅಭ್ಯರ್ಥಿಯನ್ನಾಗಿಸಲು ಕೆಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ 1,80,436 ಮತದಾರರಿರುವ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಸಿಲಿನ ಪ್ರಖರತೆಯನ್ನು ಮೀರುವಂತೆ ಟಿಕೆಟ್ಗಾಗಿ ಲಾಬಿ ಶುರುವಾಗಿದೆ. ಈಗ ಆರಂಭವಾಗಿರುವ ಈ ಪೈಪೋಟಿ ನೋಡಿದರೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಊಹಿಸಲು ಅಸಾಧ್ಯ.

- ಹುಳ್ಳಿ ಪ್ರಕಾಶ
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.