ಬಳ್ಳಾರಿ

ಸುಂಕ್ಲಮ್ಮ ದೇವಿಗಾಗಿ ಒಂದಿನ ಊರು ಖಾಲಿ...

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 26
ಈ ಊರಿನಲ್ಲಿ ಇಡೀ ಊರಿನ ಸುತ್ತ ಮುಳ್ಳಿನ ಬೇಲಿ ಹಾಕುತ್ತಾರೆ. ಮನೆಗಳ ಬಾಗಿಲಿಗೆ ಎಲ್ಲರೂ ಬೀಗ ಹಾಕಿ ಮಕ್ಕಳು, ಮರಿ ಸೇರಿದಂತೆ ತಮ್ಮ ಜಾನುವಾರು ಸಮೇತ ಒಂದು ದಿನ ಊರು ಖಾಲಿ ಮಾಡುತ್ತಾರೆ ಇಲ್ಲಿನ ಗ್ರಾಮಸ್ಥರು.
ಹೌದು.. ಇದು ತಾಲೂಕಿನ ಗಡಿಗ್ರಾಮ ತಮ್ಮಯ್ಯನಗುಡ್ಡ ಗ್ರಾಮದಲ್ಲಿ ಮಂಗಳವಾರ ನಡೆದ ಸುಂಕ್ಲಮ್ಮ ದೇವಿಯ ವಿಶಿಷ್ಟ ಆಚರಣೆ. ಈ ಊರಲ್ಲಿ ಒಂದು ದಿನದ ಮಟ್ಟಿಗೆ ಗುಳೇದ ಲಕ್ಕಮ್ಮನ ಜಾತ್ರೆಯಂದು ಊರಿನ ಜನರೆಲ್ಲರೂ ಗ್ರಾಮ ತೊರೆಯುತ್ತಾರೆ.
ದನ, ಕರು, ಹಸುಗೂಸು, ಬಾಣಂತಿಯರು, ವೃದ್ಧರ ಸಮೇತ ಊರ ಹೊರಗಿನ ಉಪ್ಪಾರ ದಿಬ್ಬ (ಮಾಳೆ)ದಲ್ಲಿ ಸುಂಕ್ಲಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಗಿಡ, ಮರಗಳ ಕೆಳಗೆ ದೇವಿಗೆ ಹರಕೆ ಸಲ್ಲಿಸುತ್ತಾರೆ. ಜತೆಗೆ ಸಹಭೋಜನ ಮಾಡಿ ಸಮಾನತೆ ಸಾರುತ್ತಾರೆ.
ಆಚರಣೆ ಹಿನ್ನೆಲೆ: ಈ ಹಿಂದೆ ಪ್ಲೇಗ್‌ನಂತಹ ಮಹಾಮಾರಿ ಕಾಯಿಲೆಗಳು ಬಂದಾಗ ಇಡೀ ಗ್ರಾಮಸ್ಥರು ಊರು ತೊರೆಯುತ್ತಿದ್ದರು. ಊರಲ್ಲಿ ಎಲ್ಲ ಜೀವರಾಶಿಗಳು ಖಾಲಿಯಾದಾಗ ಗ್ರಾಮಕ್ಕೆ ಅಂಟಿಕೊಂಡ ಭಯಾನಕ ವೈರಸ್‌ನಂತಹ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಹೀಗಾಗಿ ಜನತೆ ಆರೋಗ್ಯ ಕಾಪಾಡಿಕೊಳ್ಳಲು ಈ ರೀತಿಯ ಉಪಾಯಗಳನ್ನು ಕಂಡುಕೊಂಡಿದ್ದರು.
ಅಲ್ಲದೇ ಉಳ್ಳವರು ಮತ್ತು ಇಲ್ಲದವರು ಸಮಾನವಾಗಿ ಊರ ಹೊರಗಿನ ಮರಗಳ ಕೆಳಗೆ ಜೀವನ ಮಾಡುವುದರಿಂದ ಸಮಾನತೆಯ ಪ್ರತೀಕವೂ ಹೌದು. ಇಂತಹ ಆಚರಣೆಗಳಿಗೆ ವೈಜ್ಞಾನಿಕ ಹಿನ್ನೆಲೆ ಇರುವುದರಿಂದ ಈ ಸಂಪ್ರದಾಯಗಳನ್ನು ಆಚರಿಸುತ್ತಾ ಬಂದಿದ್ದಾರೆ ಇಲ್ಲಿನ ಜನತೆ.
ನೀರು ಸೇವನೆಯೂ ಇಲ್ಲ: ಎಲ್ಲರ ತಲೆ ಮೇಲೆ ಒಂದು ಗಂಟು, ಬಗಲಲ್ಲಿ ದವಸ, ಧಾನ್ಯ, ಬಟ್ಟೆ, ಹಾಸಿಗೆಗಳ  ಗಂಟು ಹೊತ್ತು ಊರು ತೊರೆಯುವ ದೃಶ್ಯ ಸಂಭ್ರಮ ಹುಟ್ಟಿಸುತ್ತದೆ. ಸೋಮವಾರ ರಾತ್ರಿಯೇ ಮನೆಗಳಲ್ಲಿನ ನೀರು ಖಾಲಿ ಮಾಡುತ್ತಾರೆ. ಅಡುಗೆಯನ್ನೂ ತಯಾರಿಸಿಟ್ಟುಕೊಳ್ಳುತ್ತಾರೆ. ಬೆಳಗಾದರೆ ನೀರು ಸೇವನೆ ಸಹ ಮಾಡದೆ ಗ್ರಾಮ ತೊರೆಯಲು ಸಿದ್ಧತೆ ಮಾಡಿಕೊಳ್ಳುತ್ತಾರೆ.
ಸುಂಕ್ಲಮ್ಮ ದೇವಿಯನ್ನು ರಥದಲ್ಲಿರಿಸಿ ಪೂಜೆ ನೆರವೇರಿಸುವ ಹೊತ್ತಿಗೆ ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಬೀಗ ಹಾಕಿ ಸರಂಜಾಮುಗಳ ಸಮೇತ ಅಲ್ಲಿ ಹಾಜರಿರುತ್ತಾರೆ.
ಅಲ್ಲಿಂದ ದೇವಿಯನ್ನು ಹೊತ್ತು ಸಕಲ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಗ್ರಾಮ ತೊರೆಯುತ್ತಾರೆ. ಗ್ರಾಮ ತೊರೆದಾಗ ಊರ ಸುತ್ತಲೂ ಕಾವಲಿಗಾಗಿ ನಾಲ್ಕಾರು ಜನರು ಬೇಲಿ ಹೊರಗೆ ಇರುತ್ತಾರೆ. ಊರಲ್ಲಿ ಇದುವರೆಗೂ ಕಳ್ಳತನ ಆದ ಉದಾಹರಣೆಗಳೇ ಇಲ್ಲ ಎನ್ನುತ್ತಾರೆ ಗ್ರಾಮದ ಓಬಯ್ಯ.
ಮಂಗಳವಾರ ಸಂಜೆ 4ಕ್ಕೆ ಅಗ್ನಿಕೆಂಡ ಮಾಡಿ ಸಂಜೆ 6ಕ್ಕೆ ಗ್ರಾಮಕ್ಕೆ ತೆರಳುತ್ತಾರೆ. ಅಷ್ಟೊತ್ತಿಗಾಗಲೇ ಊರ ಅಂಚಿನಲ್ಲಿ ಹಾಕಿದ್ದ ಬೆಂಕಿಯಿಂದ ಕೆಂಡ ತೆಗೆದುಕೊಂಡು ಹೋಗಿ ಸಂಜೆ ದೀಪ ಹಚ್ಚಿ ಹೊಸ ಬದುಕಿಗೆ ಅಣಿಯಾಗುತ್ತಾರೆ. ಇಂತಹ ಸಂಪ್ರದಾಯ ತಲತಲಾಂತರದಿಂದ ಈಗಲೂ ಮುಂದುವರೆದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯ ನಾಗರಾಜಪ್ಪ.

-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.