ಬಳ್ಳಾರಿ

ಗಣಿ ಬಾಧಿತ ಪ್ರದೇಶಾಭಿವೃದ್ಧಿಗೆ ಒತ್ತಾಯ

Published On :

ಕನ್ನಡಪ್ರಭ ವಾರ್ತೆ, ಸಂಡೂರು, ಮಾ. 26
ತಾಲೂಕಿನ ಯಶವಂತನಗರ ಹಾಗೂ ಇಲ್ಲಿಂದ ಕೂಡ್ಲಿಗಿ, ಸಂಡೂರು ಹಾಗೂ ಹೊಸಪೇಟೆಗೆ ತೆರಳುವ ಹದಗೆಟ್ಟ ರಸ್ತೆಗಳ ದುರಸ್ತಿ, ಸೂಕ್ತ ವೈದ್ಯಕೀಯ ವ್ಯವಸ್ಥೆ, ನೈರ್ಮಲೀಕರಣ ಹಾಗೂ ಗಣಿಗಾರಿಕೆಯಿಂದ ಬಾಧಿತವಾಗಿರುವ ಪರಿಸರದ ಅಭಿವೃದ್ಧಿ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮದ ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರಮುಖ ಗಣಿ ಪ್ರದೇಶವಾದ ಯಶವಂತನಗರ ಗ್ರಾಮದ ಸುತ್ತಲಿನ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಈ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಈ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಯಮಯಾತನೆಯನ್ನು ಅನುಭವಿಸುವಂತಾಗಿದೆ. ಈ ಭಾಗದಲ್ಲಿ ನಿರಂತರ ಗಣಿ ಲಾರಿಗಳ ಓಡಾಟದಿಂದ ಉಂಟಾಗುವ ಧೂಳಿನಿಂದ ಸುತ್ತಲಿನ ಪರಿಸರವೆಲ್ಲ ಹಾಳಾಗಿದೆ. ಪರಿಸರದ ನಾಶದಿಂದಾಗಿ ಜನತೆ ರೋಗರುಜಿನಗಳಿಂದ ಬಳಲುವಂತಾಗಿದೆ. ಪಶುಪಕ್ಷಿಗಳು ಹಾಗೂ ಜೀವಜಂತುಗಳು ನಾಶವಾಗುವ ಹಂತ ತಲುಪಿವೆ. ಧೂಳಿನಿಂದಾಗಿ ರೈತರ ಬೆಳೆಗಳು ಸರಿಯಾಗಿ ಬರುತ್ತಿಲ್ಲ.
ಅಕ್ರಮ ಗಣಿಗಾರಿಕೆಯಿಂದ ವಸೂಲಾದ ದಂಡದ ಹಣವನ್ನೂ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದರೂ, ಇಲ್ಲಿಯವರೆಗೆ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದಕಾರಣ, ಸರ್ಕಾರ ಈ ಭಾಗದಲ್ಲಿನ ರಸ್ತೆಗಳ ದುರಸ್ತಿ ಮುಂತಾದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಯಶವಂತನಗರ ಗ್ರಾಮದ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಎಂ. ವೀರಣ್ಣ, ಉಪಾಧ್ಯಕ್ಷ ಐ. ಶಿವಕುಮಾರ, ಕಾರ್ಯದರ್ಶಿ ಸಿ.ಜೆ. ಕೆಂಚನಗೌಡ, ಖಜಾಂಚಿ ವಿ.ಪ್ರಭಾಕರ, ಕಾನೂನು ಸಲಹೆಗಾರ ಸಿ. ಮೃತ್ಯುಂಜಯಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.