ಎಲ್ಲರೂ ಮಾಡುತ್ತಿರುವುದು ಟಿಕೆಟ್ಗಾಗಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 27
ರಾಜಕೀಯವನ್ನು ನಿರ್ಧರಿಸುವ ಬುದ್ಧಿವಂತ ಮತದಾರರನ್ನು ಹೊಂದಿರುವ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲೀಗ ವಿವಿಧ ಪಕ್ಷಗಳ ಟಿಕೆಟ್ ಗಿಟ್ಟಿಸಿಕೊಳ್ಳಲು ನಿವೃತ್ತ ನೌಕರರು ಸೇರಿದಂತೆ ದೊಡ್ಡ ಹಿಂಡೇ ಲಗ್ಗೆ ಇಟ್ಟಿದೆ. ಈ ಬಾರಿ ಪ್ರಾದೇಶಿಕ ಪಕ್ಷಗಳ ಭರಾಟೆಯಿಂದ ಕ್ಷೇತ್ರದಲ್ಲಿ ಪಂಚ ಪಕ್ಷಗಳ ಸ್ಪರ್ಧೆ ಏರ್ಪಡಲಿದ್ದು, ಯಾವುದಾರೊಂದು ಪಕ್ಷದ ಟಿಕೆಟ್ ಗಿಟ್ಟಿಸಿಕೊಳ್ಳಲೇಬೇಕೆಂಬ ಛಲ ಹೊಂದಿರುವವರು, ಏನೆಲ್ಲಾ ಲಾಬಿ ನಡೆಸಿದ್ದಾರೆ. ಇದಕ್ಕೆ ಉತ್ತರ ನೀಡಲು ಆಯಾ ಪಕ್ಷದ ಕಾರ್ಯಕರ್ತರು ಯಾವ ರೀತಿ ಸ್ಪಂದಿಸಿತ್ತಾರೆಂಬುದು ಮಾತ್ರ ಇನ್ನು ನಿಗೂಢ.
ಬಿಜೆಪಿ ಟಿಕೆಟ್ ಶಾಸಕ ಚಂದ್ರನಾಯ್ಕಗೆ ಖಚಿತವಾಗಿದ್ದು, ಕಾಂಗ್ರೆಸ್ಸಿನಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇರುವುದರಿಂದ, ಈ ವರೆಗೂ ಕೆಲ ಪ್ರಭಾವಿ ವ್ಯಕ್ತಿಗಳಿಂದ ಟಿಕೆಟ್ ಪಡೆಯಲು ಸಾಕಷ್ಟು ಲಾಬಿ ನಡೆದಿದೆ. ಕಾಂಗ್ರೆಸ್ನಲ್ಲಿ ಸ್ಥಳೀಯ ವಲಸಿಗರೆಂಬ ಭೇದ ಹೆಚ್ಚಾಗಿ ಚರ್ಚೆಯಾಗುತ್ತಿರುವ ಗಂಭೀರ ಸಮಸ್ಯೆಯನ್ನು ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಅರಗಿಸಿಕೊಂಡು ನ್ಯಾಯ ಒದಗಿಸುತ್ತದೆ ಎಂಬುದು ಕುತೂಹಲ. ಉಳಿದಂತೆ ಜೆಡಿಎಸ್, ಬಿಎಸ್ಸಾರ್, ಕೆಜೆಪಿ ಪಕ್ಷಗಳ ಟಿಕೆಟ್ಗಾಗಿ ಇಲ್ಲಿಯೂ ಲಾಬಿ ನಡೆಯುತ್ತಿದೆ. ಈ ಪಕ್ಷಗಳಿಗೆ ಹೊಸಬರು ಲಗ್ಗೆ ಇಟ್ಟಿದ್ದಾರೆ, ಯಾವ ಪಕ್ಷ ಯಾವ ಜಾತಿಯವರಿಗೆ ಟಿಕೆಟ್ ನೀಡುತ್ತದೆ ಎಂದು ಕಾದು ನೋಡುವ ತಂತ್ರ ಅನುಸರಿಸುತ್ತಿದೆ.
ಕಮಲ ಫಿಕ್ಸ್, ಬಾಕಿ ಗೊಂದಲ: ಬಿಜೆಪಿ ಟಿಕೆಟ್ ಚಂದ್ರನಾಯ್ಕಗೆ ಫಿಕ್ಸ್ ಆದ ಕಾರಣ ಈ ಪಕ್ಷದಲ್ಲಿ ಯಾರು ಪೈಪೋಟಿಗೆ ಇಳಿದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ವಲಸಿಗರೆಂಬ ಭೇದ ಹಿನ್ನೆಲೆಯಲ್ಲಿ ಎರಡು ಗುಂಪುಗಳಾಗಿ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಹರಪನಹಳ್ಳಿಯ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಜಿ. ಬುಳ್ಳಪ್ಪ, ಎಲ್. ಕೋಮ್ಯಾ ನಾಯ್ಕ, ಎಸ್. ದೂದಾನಾಯ್ಕ, ಹಂಪಸಾಗರ ರಾಮಾನಾಯ್ಕ, ಶಿವಪುರ ಸುರೇಶ, ಅಂಬುಜಾ, ಕಾಶಿನಾಥ ನಾಯ್ಕ ಅರ್ಜಿ ಸಲ್ಲಿಸಿ ಟಿಕೆಟ್ಗಾಗಿ ಕಾಯುತ್ತಿದ್ದಾರೆ. ಜೆಡಿಎಸ್ನಿಂದ ಡಾ.ಎಲ್.ಪಿ. ನಾಯ್ಕ ಕಠಾರಿ, ಮೀನಾಕ್ಷಿಬಾಯಿ, ಪುತ್ರೇಶ ಟಿಕೆಟ್ ಆಕಾಂಕ್ಷಿಗಳು.
ಬಿಎಸ್ಸಾರ್ ಕಾಂಗ್ರೆಸ್ಗೆ ಕೃಷಿ ಮಾರುಕಟ್ಟೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಹೇಮಂತ್ಕುಮಾರ ಭಾರತಿ, ನಿವೃತ್ತ ತಹಸೀಲ್ದಾರ್ಗಳಾದ ಶಿವಪ್ಪ, ನೀಲಪ್ಪ, ಖಾಸಗಿ ಕಾಲೇಜು ಉಪನ್ಯಾಸಕ ಶಿವಪ್ಪನಾಯ್ಕ, ಯು. ಕೊಟ್ರೇಶನಾಯ್ಕ, ಮೀರಾಬಾಯಿ, ಕುಬೇಂದ್ರನಾಯ್ಕ, ಕೆ. ಉಚ್ಚೆಂಗೆಪ್ಪ, ಮಾರೆಪ್ಪ ಆಕಾಂಕ್ಷಿಗಳಾಗಿದ್ದಾರೆ. ನೂತನ ಪ್ರಾದೇಶಿಕ ಪಕ್ಷ ಕೆಜೆಪಿ ಟಿಕೆಟ್ಗಾಗಿ ಎಲ್. ಕೃಷ್ಣನಾಯ್ಕ, ರಾಮಾಂಜನಿ ಎಂಜಿನಿಯರ್, ತಿರುಮಲೇಶ ಗುತ್ತಿಗೆದಾರ, ಹರೀಶ ಆಕಾಂಕ್ಷಿಗಳಾಗಿದ್ದಾರೆ.
ರಾಜಕೀಯ ಮೀಸಲಾತಿ ಲಾಭ ಪಡೆಯಲು ಹೊಸ ಮುಖಗಳು ಮತದಾರರಿಗೆ ದರ್ಶನವಾಗುತ್ತಿವೆ. ಇದನ್ನು ಕಂಡು ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದೆಪ್ಪ? ಎಂಬ ಮಾತು ನೆನಪಾಗುತ್ತಿದೆ. ಈವರೆಗೂ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿಲ್ಲ, ಜನಪರ ಕಾಳಜಿ ತೋರಿಲ್ಲ, ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟವಿಲ್ಲ ಇಂತಹ ವ್ಯಕ್ತಿಗಳು ಈಗ ಬಂದು ತಾವು ಅಭ್ಯರ್ಥಿ ಎಂದು ಗುರುತಿಸಿಕೊಳ್ಳುವ ಪರಿಪಾಠ ಶುರುವಾಗಿದೆ.
- ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

