ಬಳ್ಳಾರಿ

ಸಂಡೂರು ಕ್ಷೇತ್ರದಲ್ಲಿ ಅಂತೆ ಕಂತೆಗಳ ಕಾರುಬಾರು

Published On :

ಕನ್ನಡಪ್ರಭ ವಾರ್ತೆ, ಸಂಡೂರು, ಮಾ. 29
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿದ್ದರೂ, ಸಂಡೂರು ಕ್ಷೇತ್ರದಲ್ಲಿ ಇದುವರೆಗೂ ಕೆಜೆಪಿ ಹೊರತುಪಡಿಸಿ, ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿ, ಪ್ರಕಟಿಸದ ಕಾರಣ  ಕ್ಷೇತ್ರದಲ್ಲಿ ಬರೀ ಅಂತೆ ಕಂತೆಗಳ ಕಾರುಬಾರು ಹೆಚ್ಚಾಗಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಟಿಕೆಟ್ ಬಯಸಿ ಹಾಲಿ ಶಾಸಕ ಈ. ತುಕಾರಾಂ, ಪರಿಶಿಷ್ಟ ಪಂಗಡ ವಿಭಾಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ. ಕೃಷ್ಣಪ್ಪ, ತಾಲೂಕು ಪಂಚಾಯಿತಿ ಸದಸ್ಯ ಪಾಂಡುರಂಗಯ್ಯ ಹಾಗೂ ಆರ್. ಶಿವರಾಂ ಅರ್ಜಿ ಸಲ್ಲಿಸಿದ್ದಾರೆ. ಕೆಜೆಪಿ ಈಗಾಗಲೇ ತನ್ನ ಪಕ್ಷದಿಂದ ರವಿಪ್ರಕಾಶ್ ಎಂಬವರಿಗೆ ಟಿಕೆಟ್ ಘೋಷಿಸಿದೆ.
ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಜಿಪಂ ಸದಸ್ಯ ಈ. ಮಾರೆಣ್ಣ ಹಾಗೂ ಪಕ್ಷದ ಮುಖಂಡ ದೇವೇಂದ್ರಪ್ಪ ಅವರ ಹೆಸರುಗಳು ಕೇಳಿಬಂದಿವೆ.
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಪಕ್ಷದ ತಾಲೂಕು ಅಧ್ಯಕ್ಷ ಅಡಿವೆಪ್ಪ ಹಾಗೂ ಜಯಣ್ಣನವರು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅತ್ತ ಬಿಎಸ್ಸಾರ್ ಕಾಂಗ್ರೆಸ್,ನಿಂದ ಜಿ. ಚಿನ್ನಬಸಪ್ಪ ಸ್ಪರ್ಧಿಸಲಿದ್ದಾರೆಂದು ತಿಳಿಸಲಾಗಿದೆಯಾದರೂ, ಪಕ್ಷದಿಂದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಸಿಪಿಐ ಈ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದು, ಅಭ್ಯರ್ಥಿ ಯಾರೆಂಬುದನ್ನು ಪ್ರಕಟಿಸಿಲ್ಲ.
ಕೈಗೆ ಸ್ಪರ್ಧೆ ನೀಡಲು ಸಜ್ಜಾದ ಪಕ್ಷಗಳು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ 8 ಸ್ಥಾನಗಳು ಬಿಜೆಪಿ ಪಾಲಾಗಿದ್ದರೆ, ಒಂದು ಸ್ಥಾನ ಮಾತ್ರ ಕಾಂಗ್ರೆಸ್ ವಶವಾಗಿತ್ತು. ಅದು ಸಂಡೂರು ಕ್ಷೇತ್ರ ಮಾತ್ರ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಈ. ತುಕಾರಾಂ ಅವರು ಕ್ಷೇತ್ರದಲ್ಲಿ ವಿಜಯಿಯಾಗಿದ್ದರು.
ಇದು ಒಂದು ರೀತಿಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವನ್ನು ಎತ್ತಿತೋರಿಸಿತ್ತು. ನಂತರದಲ್ಲಿ ಈ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯವನ್ನು ಮೆರೆದಿತ್ತು.
ಆದರೆ ಇತ್ತೀಚೆಗೆ ನಡೆದ ಗ್ರಾಪಂಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗಳಲ್ಲಿ ಕೆಲ ಗ್ರಾಪಂಗಳನ್ನು ಬಿಎಸ್ಸಾರ್ ಬೆಂಬಲಿತ ಅಭ್ಯರ್ಥಿಗಳು ತಮ್ಮದನ್ನಾಗಿಸಿಕೊಂಡಿದ್ದಾರೆ. ಸಂಡೂರು ಪುರಸಭೆಯ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಗಳು ಪಡೆದಿದ್ದರು.
ಇದನ್ನು ಗಮನಿಸಿದರೆ ಬಿಎಸ್ಸಾರ್ ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲವೆಂಬುದು ಹಾಗೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇತರೆ ಪಕ್ಷಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಲು ಪ್ರಯತ್ನ ನಡೆಸಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಸಮಿತಿಗಳ ರಚನೆ: ಬಿಜೆಪಿ, ಜೆಡಿಎಸ್, ಕೆಜೆಪಿ ಹಾಗೂ ಸಿಪಿಐ ವಿವಿಧ ದೃಷ್ಟಿಕೋನಗಳನ್ನಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಗೆಲುವಿಗಾಗಿ ಶ್ರಮಿಸಲು ಈಗಾಗಲೇ ಸೂಕ್ತ ತಯಾರಿಯಲ್ಲಿ ತೊಡಗಿವೆ.
ವಿವಿಧ ಪಕ್ಷಗಳು ಈಗಾಗಲೇ ಬೂತ್ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿಕೊಂಡು ಅಭ್ಯರ್ಥಿ ಘೋಷಣೆಯಾದ ಕೂಡಲೇ ಪ್ರಚಾರ ಪ್ರಾರಂಭಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಪ್ರಾದೇಶಿಕ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದೆಂಬ ಮಾತುಗಳೂ ಈಗ ಕ್ಷೇತ್ರಾದ್ಯಂತ ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ತೀವ್ರ ಸ್ಪರ್ಧೆಯಿಂದ ಕೂಡಿರಲಿದ್ದು, ಬಹುತೇಕ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾಗದಿರುವುದರಿಂದ ಸ್ವಲ್ಪ ಥಂಡಾ ಆಗಿರುವ ಚುನಾವಣೆಯ ಕಾವು, ಅಭ್ಯರ್ಥಿಗಳ ಘೋಷಣೆಯಾದ ಕೂಡಲೇ ಬೇಸಿಗೆಯ ಬಿಸಿಲಿನಂತೆ ಏರಲಿದೆ. ಕೆಜೆಪಿ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಉಳಿದ ರಾಜಕೀಯ ಪಕ್ಷಗಳು ಯಾರನ್ನು ಕಣಕ್ಕಿಳಿಸಲಿವೆ ಎಂಬುದನ್ನು ಕ್ಷೇತ್ರದ ಜನತೆ ಚಾತಕ ಪಕ್ಷಿಯಂತೆ ಕಾದು ನೋಡುತ್ತಿದ್ದಾರೆ.
ಅಭ್ಯರ್ಥಿಗಳು ತಿಳಿಯುತ್ತಿದ್ದಂತೆ ಇತ್ತ ಕ್ಷೇತ್ರದ ಆಯಾ ಪಕ್ಷಗಳ ಕಾರ್ಯಕರ್ತರು, ಅಭಿಮಾನಿಗಳು ಗಣಿ ಧೂಳಿನಂತೆಯೇ ಪ್ರಚಾರದ ಧೂಳನ್ನು ಎಬ್ಬಿಸಲಿದ್ದಾರೆ.

-ವಿ.ಎಂ. ನಾಗಭೂಷಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.