ಎಲೆಕ್ಷನ್ ಅಂದರೆ ಕಲೆಕ್ಷನ್ ಎಂಬಂತಾಗಿದೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 31
ಆಸೆ, ಆಮಿಷಗಳನ್ನು ತೋರಿಸುವ ಮೂಲಕ ಚುನಾವಣೆ ಎಂದರೆ ಕೇವಲ ದುಡ್ಡು ಗಳಿಸುವ ದಂಧೆ ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ ಎಂದು ಸಿಪಿಐ ಹಿರಿಯ ಮುಖಂಡ ಅರವಿಂದ ಮಳೆಬೆನ್ನೂರ್ ರಾಜಕೀಯ ಮುಖಂಡರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಸಿಪಿಐ ಪಕ್ಷವು ನಗರದ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಎಲೆಕ್ಷನ್ ಅಂದರೆ ಕಲೆಕ್ಷನ್ ಎಂಬ ವಾತಾವರಣ ನಿರ್ಮಾಣವಾಗಿದೆ. ಇಂದಿನ ರಾಜಕೀಯ ನಾಯಕರಿಗೆ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ಹಣ, ಹೆಂಡ ಇತರೆ ಆಮಿಷಗಳನ್ನು ನೀಡಿ ಜನರನ್ನು ಆಸೆಬುರುಕರನ್ನಾಗಿ ಮಾಡುತ್ತಿದ್ದಾರೆ. ಜನಪರ ಮಾತನಾಡುವ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ರಾಜಕೀಯ ಮುಖಂಡರು ಬಳ್ಳಾರಿಯಲ್ಲಿ ಯಾರೂ ಇಲ್ಲ ಎಂದು ಮಳೆಬೆನ್ನೂರ್ ಅವರು ಆತಂಕ ವ್ಯಕ್ತಪಡಿಸಿದರು.
ಜನಪರ ಕಾಳಜಿ ಇಲ್ಲ: ದುಡಿಯುವ ವರ್ಗವನ್ನು ಆಳುವ ವರ್ಗ ಹತ್ತಿಕ್ಕುತ್ತಾ ಬಂದಿದೆ. ಬಂಡವಾಳ ಶಾಹಿಗಳು, ಶ್ರೀಮಂತರು, ಉದ್ಯಮಿಗಳ ಹಿಡಿತದಲ್ಲಿರುವ ರಾಜಕೀಯ ಪಕ್ಷಗಳು ಬಡಜನರ, ರೈತ ಮತ್ತು ಕಾರ್ಮಿಕರ ಹಿತಕಾಯುವಲ್ಲಿ ವಿಫಲವಾಗಿವೆ. ಕೇವಲ ಸುಳ್ಳು ಭರವಸೆ, ಪೊಳ್ಳು ಆಶ್ವಾಸನೆ, ಹಣದ ಆಮಿಷ, ಜಾತಿ ರಾಜಕಾರಣ ಮಾಡುವುದೇ ಈ ಪಕ್ಷಗಳ ಸಾಧನೆಯಾಗಿದೆ ಹೊರತು ನಿಜವಾದ ಜನಪರ ಕಾಳಜಿಯನ್ನು ಮರೆತಿದ್ದಾರೆ. ಇಂತಹ ವ್ಯವಸ್ಥೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆ? ಎಂದು ಪ್ರಶ್ನಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಭ್ರಷ್ಟಾಚಾರ ಹಾಗೂ ಹಗರಣ ಸೇರಿದಂತೆ ಇತರ ಆರೋಪಗಳಲ್ಲಿ ಮುಳುಗಿ, ಜನಪರ ಕಾಳಜಿಯನ್ನು ಮರೆತಿವೆ. ಇಂತಹ ರಾಜಕೀಯ ಪಕ್ಷಗಳಿಂದ ದೇಶ ಹಾಗೂ ಜನರ ಅಭಿವೃದ್ಧಿ, ಏಳಿಗೆ ಸಾಧ್ಯವಿಲ್ಲ. ಮುಂದಿನ ಚುನಾವಣೆಗಳಲ್ಲಿ ಎರಡೂ ಪಕ್ಷಗಳಿಗೆ ಜನರು ತಕ್ಕಪಾಠ ಕಲಿಸುತ್ತಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಕೋಮುವಾದಿ, ಭ್ರಷ್ಟ ರಾಜಕೀಯ ಪಕ್ಷಗಳನ್ನು ಹಿಮ್ಮೆಟ್ಟಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಮುಖಂಡ ಟಿ.ಜಿ. ವಿಠ್ಠಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಸಮಾಜದಲ್ಲಿ ಬೇರೂರಿ ನಿಲ್ಲಬೇಕಾದರೆ, ಆ ವ್ಯವಸ್ಥೆಗೆ ಸುಭದ್ರ ಅಡಿಪಾಯ ಹಾಕಲು ಕಮ್ಯುನಿಷ್ಟ್ ಪಕ್ಷದಿಂದ ಮಾತ್ರ ಸಾಧ್ಯ ಎಂದರು. ಸಿಪಿಐ ಕಾರ್ಯದರ್ಶಿ ನಾಗಭೂಷಣ ರಾವ್ ಮಾತನಾಡಿದರು. ಸಮಾವೇಶದಲ್ಲಿ ದಾವಣಗೆರೆ ಪಾಲಿಕೆ ಸದಸ್ಯ ಉಮೇಶ್, ಎಐವೈಎಫ್ ಜಿಲ್ಲಾಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ, ಶೇಖರ್ಬಾಬು, ಮಾರೆಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. ಸಿಪಿಐ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

