ಆಟೋ ನಿಲುಗಡೆಗೆ ಅವಕಾಶ ನೀಡಿ
ಬಳ್ಳಾರಿ: ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆ (ಘೋಷ್ ಆಸ್ಪತ್ರೆ) ಎದುರು ಆಟೋ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ಆರ್ಎಸ್ ಆಟೋ ಚಾಲಕ ಮತ್ತು ಮಾಲೀಕರ ಸಂಘವು ಸಂಚಾರಿ ಇನ್ಸ್ಪೆಕ್ಟರ್ ವಸಂತಕುಮಾರ್ರಿಗೆ ಶನಿವಾರ ಮನವಿ ಸಲ್ಲಿಸಿತು.
ಕಳೆದ ಒಂದು ದಶಕದಿಂದ ಅನಂತಪುರ ರಸ್ತೆಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದೇವೆ. ಆದರೆ ನಿಲುಗಡೆ ಸ್ಥಳದಲ್ಲೇ ಇದೀಗ ಫುಟ್ಪಾತ್ ಅಳವಡಿಸಿರುವುದರಿಂದ ಆಟೋ ನಿಲ್ಲಿಸಲು ಸ್ಥಳಾವಕಾಶವಿಲ್ಲದೆ, ಪರದಾಡುವಂತಾಗಿದೆ. ಪಕ್ಕದಲ್ಲೇ ಆಟೋ ನಿಲ್ಲಿಸಿದರೆ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಆಸ್ಪತ್ರೆ ಎದುರು ಆಟೋ ನಿಲುಗಡೆ ಸ್ಥಳಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಂಘದ ಅಧ್ಯಕ್ಷ ಜಾನ್ಬಾಸ್ಕೋ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಿಸಿಲಹಳ್ಳಿ, ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ಚಾಗನೂರ್, ಗೋಡೆಹಾಳ್, ಟಿ. ಬೂದಿಹಾಳ್, ಅಸುಂಡಿ, ಹಗರಿ ಸೇರಿ ಇತರೆ ಗ್ರಾಮಗಳಿಗೆ ಮಾತ್ರ ಹೋಗುತ್ತಿದ್ದು, ನಗರದಲ್ಲಿ ಸಂಚರಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲದೆ ಹಳ್ಳಿ ಜನರು ಪರದಾಡುತ್ತಿದ್ದಾರೆ. ಆದ್ದರಿಂದ ಆದಷ್ಟು ಬೇಗ ಜಿಲ್ಲಾ ಆಸ್ಪತ್ರೆ ಎದುರು ಆಟೋ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕುಮಾರಸ್ವಾಮಿ, ಕೆ. ವುಲಿತಪ್ಪ, ಹೊನ್ನೂರಪ್ಪ, ಮಾರೇಶ್, ಎಸ್. ಮಲ್ಲಿಕಾರ್ಜುನ, ಎಚ್. ಪರಶುರಾಮ್, ಎರ್ರಿಸ್ವಾಮಿ ಇತರರು ಇದ್ದರು.
ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ
ಸಂಡೂರು: ಪಟ್ಟಣದಲ್ಲಿನ ಸರ್ಕಾರಿ ಆಂಗ್ಲ ಮಾಧ್ಯಮ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆ ಭಾನುವಾರ ಪಟ್ಟಣದ ಕೃಪಾನಿಲಯ ಶಾಲೆಯಲ್ಲಿ ಜರುಗಿತು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 193 ವಿದ್ಯಾರ್ಥಿಗಳಲ್ಲಿ 187 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಪರೀಕ್ಷಾ ವೀಕ್ಷಕರಾಗಿ ಬಳ್ಳಾರಿಯ ಡಯಟ್ ಉಪನ್ಯಾಸಕ ಬೋಗಾರ್ ಸತ್ಯವಾನ್ ಆಗಮಿಸಿದ್ದರು.
ಪರೀಕ್ಷಾ ಅಧೀಕ್ಷಕರಾಗಿ ಎಂ. ತಿಪ್ಪೇಸ್ವಾಮಿ ಕಾರ್ಯನಿರ್ವಹಿಸಿದರು. ತಾಲೂಕು ನೋಡಲ್ ಅಧಿಕಾರಿ ಬುಳ್ಳಪ್ಪ, ಚರಂತಯ್ಯ ಉಪಸ್ಥಿತರಿದ್ದರು.
ಜನಪದ ಸಾಹಿತ್ಯ ವೈಶಿಷ್ಟ್ಯದಿಂದ ಕೂಡಿದೆ: ಗೌರಮ್ಮ
ಬಳ್ಳಾರಿ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಜನಪದ ಸಾಹಿತ್ಯವು ವೈಶಿಷ್ಟ್ಯದಿಂದ ಕೂಡಿದೆ ಎಂದು ಶಿಕ್ಷಕಿ ಗೌರಮ್ಮ ಅಭಿಪ್ರಾಯಪಟ್ಟರು. ಕಸಾಪ ಜಿಲ್ಲಾ ಘಟಕದಿಂದ ಇಲ್ಲಿನ ನಂದಿ ಇಂಟರ್ನ್ಯಾಷನಲ್ ಪಪೂ ಕಾಲೇಜ್ನಲ್ಲಿ ಶನಿವಾರ ಏರ್ಪಡಿಸಿದ್ದ ರುಕ್ಮಿಣಮ್ಮ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಸಾಪ ಸಿರುಗುಪ್ಪ ತಾಲೂಕು ಮಾಜಿ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿದರು. ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಡಿ. ನಾಗರಾಜ ಪ್ರಸಾದ ಶೆಟ್ಟಿ, ನಗರಾಧ್ಯಕ್ಷೆ ಕೆ.ವಿ. ಜಯಲಕ್ಷ್ಮಿ ಇತರರು ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ
ಬಳ್ಳಾರಿ: ಎಸ್ಎಸ್ಎಲ್ಸಿ ಪರೀಕ್ಷೆಗಳು ಏ. 1ರಿಂದ 10ರವರೆಗೆ ಜಿಲ್ಲಾದ್ಯಂತ ನಡೆಯಲಿದ್ದು, ಎಲ್ಲಾ ಸಿದ್ಧತೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಜಿಲ್ಲೆಯಾದ್ಯಂತ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 30,093 (ಫ್ರೆಷರ್ಸ್) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 17,263 ವಿದ್ಯಾರ್ಥಿಗಳು ಹಾಗೂ 12,830 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 9 ವಿದ್ಯಾರ್ಥಿಗಳು ಕಿವುಡ ಮತ್ತು ಮೂಕ ವಿದ್ಯಾರ್ಥಿಗಳಿದ್ದು, ಇವರಿಗೆ ವಿಶೇಷ ಭಾಷಾ ರಿಯಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾದ್ಯಂತ ಒಟ್ಟು 101 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 69 ಕ್ಲಸ್ಟರ್ ಕೇಂದ್ರಗಳು, 28 ಕ್ಲಸ್ಟರ್ ರಹಿತ ಕೇಂದ್ರಗಳು ಹಾಗೂ 4 ಖಾಸಗಿ ಅಭ್ಯರ್ಥಿಗಳ ಕೇಂದ್ರಗಳಿವೆ. ಕ್ಲಸ್ಟರ್ ಹಾಗೂ ಸ್ವತಂತ್ರ ಪರೀಕ್ಷಾ ಕೇಂದ್ರಗಳ ಕೊಠಡಿ ಮೇಲ್ವಿಚಾರಕರನ್ನಾಗಿ ಒಂದು ಕ್ಲಸ್ಟರ್ನಿಂದ ಮತ್ತೊಂದು ಕ್ಲಸ್ಟರ್ಗೆ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಯಟ್, ಬಿಇಒ ಹಂತದಲ್ಲಿ ಸಂಚಾರಿ ಜಾಗೃತ ದಳ ಮತ್ತು ಡಿಡಿಪಿಐ ಕಚೇರಿ ಹಂತದಲ್ಲಿ ಎರಡು ಸಂಚಾರಿ ಜಾಗೃತ ದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತುಮುತ್ತ 200 ಮೀ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅವ್ಯವಹಾರ ಕಂಡುಬಂದಲ್ಲಿ ಕೂಡಲೇ ಕೇಂದ್ರದ ಪರೀಕ್ಷಾ ಮುಖ್ಯ ಅಧೀಕ್ಷಕರನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು. ಪರೀಕ್ಷೆಗಳು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಮೊದಲ 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಅವಕಾಶ ನೀಡಲಾಗುವುದು. ಪ್ರತಿ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ವಿಜಯಕುಮಾರ್ ತಿಳಿಸಿದ್ದಾರೆ.
ನಾಳೆ ನೇರ ಫೋನ್ ಇನ್ ಕಾರ್ಯಕ್ರಮ
ಬಳ್ಳಾರಿ: ಮತದಾನ ಜಾಗೃತಿ ಕುರಿತು ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಏ. 2ರಂದು ಮಧ್ಯಾಹ್ನ 12.30 ರಿಂದ 1 ಗಂಟೆಯವರೆಗೆ ನೇರ ಫೋನ್ಇನ್ ಕಾರ್ಯಕ್ರಮ ನಡೆಯಲಿದೆ ಎಂದು ನಿಲಯದ ಮುಖ್ಯಸ್ಥ ಕೆ. ವೆಂಕಟೇಶ್ ತಿಳಿಸಿದ್ದಾರೆ. ಬಳ್ಳಾರಿ ಜಿಪಂ ಸಿಇಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ್ ನಾಯಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ, ಮಾದರಿ ನೀತಿ ಸಂಹಿತೆ, ಮತದಾರರ ಪಟ್ಟಿಯಲ್ಲಿ ಕಡ್ಡಾಯ ನೋಂದಣಿ, ಕಡ್ಡಾಯ ಮತದಾನ, ಮತ್ತಿತರ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಹೊಸಪೇಟೆ ಸಹಾಯಕ ಆಯುಕ್ತ ಡಾ. ಅಶೋಕ್ ಮತ್ತು ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ ಪಾಲ್ಗೊಳ್ಳಲಿದ್ದಾರೆ. ಆಸಕ್ತರು ದೂರವಾಣಿ ಸಂಖ್ಯೆ-08394-221100, 227100ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

