ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಶಿವದೀಕ್ಷೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮೇ 16
ವೀರಶೈವ ಧರ್ಮದಲ್ಲಿ ಪ್ರತಿಯೊಬ್ಬರೂ ಸಂಸ್ಕಾರಕ್ಕೆ ಒಳಗಾಗುವ ಮೂಲಕ ಶ್ರೇಷ್ಠತೆ ಪಡೆದುಕೊಳ್ಳುತ್ತಾರೆ. ಸಂಸ್ಕಾರ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಪ್ರತಿಯೊಂದು ಸಂಸ್ಕಾರಕ್ಕೂ ವೈಜ್ಞಾನಿಕ ತಳಹದಿ ಇದ್ದೇ ಇದೆ. ಸಂಸ್ಕಾರ ಕೇವಲ ಧಾರ್ಮಿಕ ವಿಧಿಯಲ್ಲ, ಈ ಕ್ರಿಯೆಗೆ ಒಳಗಾದವರೂ ಸಮಾಜ ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಉಜ್ಜಿನಿ ಸದ್ಧರ್ಮ ಪೀಠದ ಶ್ರೀ 1008 ಜಗದ್ಗುರು ಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಆರಾಧ್ಯದೈವ ಶ್ರೀಗುರು ಮರುಳಸಿದ್ಧೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಗುರುವಾರ ಬೆಳಗಿನ ಜಾವ ಏರ್ಪಡಿಸಲಾಗಿದ್ದ ಜಂಗಮ ವಟುಗಳಿಗೆ ಶಿವದೀಕ್ಷಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಾದ ನೀಡಿದರು. ಯಾವುದೇ ವ್ಯಕ್ತಿಯನ್ನು ಕೀಳರಿಮೆಯಿಂದ ನೋಡಬಾರದು. ಪ್ರತಿಯೊಬ್ಬರೂ ಹುಟ್ಟಿನಿಂದಲೇ ಬಂದ ಕೆಲವು ಗುಣಗಳೊಂದಿಗೆ ಸಂಸ್ಕಾರಕ್ಕೆ ಒಳಗಾದಾಗ ಪರಿಪೂರ್ಣತೆಗೆ ಒಳಗಾಗುತ್ತಾರೆ. ವಿವಿಧ ಧರ್ಮ, ಜಾತಿಯವರು ತಮ್ಮ ಪದ್ಧತಿ ಅನುಸರಿಸಲು ಹಿಂಜರಿಯಬಾರದು. ಅದನ್ನು ಪ್ರತಿಷ್ಠೆಯನ್ನಾಗಿರಿಸಿಕೊಳ್ಳಬೇಕು ಎಂದರು.
189 ವಟುಗಳಿಗೆ ದೀಕ್ಷೆ: ಸದ್ಧರ್ಮ ಪೀಠದಲ್ಲಿ 189 ಜಂಗಮ ವಟುಗಳಿಗೆ ಶಿವದೀಕ್ಷೆ ಕರುಣಿಸಲಾಯಿತು. ಶಿವದೀಕ್ಷೆಯನ್ನು ಪೀಠದಲ್ಲಿ ಪಡೆಯಲೆಂದೇ ರಾಜ್ಯದ ಮೂಲೆ ಮೂಲೆಗಳಿಂದ ಜಂಗಮ ವಟುಗಳು ಉಜ್ಜಿನಿಗೆ ಆಗಮಿಸಿದ್ದರು. ಬುಧವಾರ ರಾತ್ರಿ ಆರಂಭವಾದ ದೀಕ್ಷೆ ಪ್ರಕ್ರಿಯೆ ಗುರುವಾರ ಬೆಳಗ್ಗೆ 7.30ರ ವರೆಗೆ ನಡೆಯಿತು. ಪ್ರತಿ ಜಂಗಮ ವಟುಗಳಿಗೆ ಪೀಠದ ವತಿಯಿಂದ ಖಾವಿ ವಸ್ತ್ರ ಮತ್ತು ಇಷ್ಟಲಿಂಗಗಳನ್ನು ನೀಡಲಾಯಿತು. ಜಗದ್ಗುರುಗಳು ಪ್ರತಿ ವಟುವಿಗೆ ಕೊನೆಯದಾಗಿ ಕಿವಿಯಲ್ಲಿ ಮಂತ್ರೋಪದೇಶ ಪಠಿಸಿದರು. ಶಿವದೀಕ್ಷೆಯ ಪ್ರಕ್ರಿಯೆಯಲ್ಲಿ ಜಂಗಮ ವಟುಗಳಿಗೆ ಕಾಮನಾಳು ಹಿರೇಮಠಾಧ್ಯಕ್ಷ ಸಿದ್ಧಪಾದ ಶಿವಾಚಾರ್ಯ ಸ್ವಾಮೀಜಿ, ಮಾನಿಹಳ್ಳಿಯ ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯ ಸ್ವಾಮೀಜಿ ತೊಡಗಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

