ಬಳ್ಳಾರಿ

ವ್ಯಾಸತೀರ್ಥ ಯೋಜನೆಯ ಕುಡಿವ ನೀರು ಪೂರೈಕೆ

Published On :

ಹಗರಿಬೊಮ್ಮನಹಳ್ಳಿ: ಜನತೆಯ ಬಾಯಾರಿಕೆ ನಿವಾರಿಸಲು ಶ್ರೀಕ್ಷೇತ್ರ ಮಂತ್ರಾಲಯ ಮಠ ರೂಪಿಸಿರುವ ವ್ಯಾಸ ತೀರ್ಥ ಯೋಜನೆಯ ಕುಡಿಯುವ ನೀರಿನ ಟ್ಯಾಂಕರ್ ಶನಿವಾರ ಮುಂಜಾನೆ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಆಗಮಿಸಿತು.
ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಈ ಯೋಜನೆ ಆರಂಭವಾಗಿದ್ದು, ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗಕ್ಕೆ ಬಂದಿರುವ ನೀರಿನ ಟ್ಯಾಂಕ್‌ರ್‌ನಿಂದ ಕುಡಿಯುವ ನೀರನ್ನು ಪೂರೈಸಲಾಯಿತು. ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ರಾಯರಾಳು ತಾಂಡ, ಒಬಳಾಪುರ, ಕೋಗಳಿ ತಾಂಡ ಹಾಗೂ ಸೊನ್ನ ಗ್ರಾಮಗಳಿಗೆ ಶನಿವಾರ ಮುಂಜಾನೆಯಿಂದಲೇ ನೀರನ್ನು ಪೂರೈಸುವ ಕಾರ್ಯವನ್ನು ಪಂರಾಇ ಸಿಬ್ಬಂದಿ ಆರಂಭಿಸಿತು.
ಪಟ್ಟಣದ ಹಳೇಹಗರಿಬೊಮ್ಮನಹಳ್ಳಿಯಲ್ಲಿ ನೀರನ್ನು ತುಂಬಿಕೊಂಡ ಟ್ಯಾಂಕರ್‌ಗೆ ಪಂರಾಇ ಎಇಇ ಖೇಣಿಬಸಪ್ಪ ಚಾಲನೆ ನೀಡಿ, ತಾಲೂಕಿನ ಹಲವು ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ಈಗಾಗಲೆ ಅಂರ್ತಜಲ ಬತ್ತಿ ಹೋಗಿ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದೆ. ಅತ್ಯಂತ ಸಮಸ್ಯೆ ಇರುವ ಗ್ರಾಮಗಳನ್ನು ಈಗಾಗಲೆ ಗುರುತಿಸಲಾಗಿದ್ದು, ಎಲ್ಲಿ ಸಮಸ್ಯೆ ಬಿಗಡಾಯಿಸಿದೆಯೋ ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತದೆ ಎಂದರು.
ಮಂತ್ರಾಲಯ ಮಠದವರು ಕಳುಹಿಸಿರುವ ಈ ಟ್ಯಾಂಕರ್ ತಾಲೂಕಿನಲ್ಲೇ ಇರುತ್ತದೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಕಂಡುಬರುತ್ತದೆಯೋ ಅಂತಹ ಹಳ್ಳಿಗಳಿಗೆ ತಕ್ಷಣವೇ ಟ್ಯಾಂಕರ್ ಕಳುಹಿಸಿ ನೀರಿನ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕ ಆಡಳಿತ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆಗೆ ತೊಂದರೆ ಆಗದಂತೆ ನಿಗಾವಹಿಸಲಾಗುತ್ತಿದೆ. ಇದಲ್ಲದೇ ಜನತೆ ನೀರಿನ ಮಿತ ಬಳಕೆ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.