ಬುದ್ಧ-ಬಸವ ತತ್ವಗಳು ಯುವಪೀಳಿಗೆ ತಲುಪಲಿ
ಬಳ್ಳಾರಿ: ಸಮಾಜ ಸುಧಾರಣೆಗೆ ಉತ್ತಮ ಅಡಿಪಾಯವಾಗಿರುವ ಬುದ್ಧ-ಬಸವಣ್ಣನವರ ತತ್ವ ಆದರ್ಶಗಳು 21ನೇ ಶತಮಾನದಲ್ಲಿನ ಯುವಪೀಳಿಗೆಗೆ ಮುಟ್ಟುವ ಪ್ರಯತ್ನವಾಗಬೇಕು ಎಂದು ಖ್ಯಾತ ರಂಗತಜ್ಞ ಪಿ. ಬಸವಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಘಟಕವು ಬುದ್ಧ-ಬಸವ ಜಯಂತಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬುದ್ಧ-ಬಸವ ಸಾಂಸ್ಕೃತಿಕ ಅನುಸಂಧಾನ ಎಂಬ ವಿಷಯ ಕುರಿತ ಉಪನ್ಯಾಸ ನೀಡಿ ಮಾತನಾಡಿದರು.
ವಿಶ್ವದಲ್ಲೇ ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದರೂ, ಬುದ್ಧನು ದಾರ್ಶನಿಕರಂತೆ ಪ್ರವಚನ ಮಾಡದೆ, ಜೀವನ ಹೇಗೆ ಎದುರಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಮಾನತೆ ವಿಷಯದಲ್ಲಿ ಭಾರತೀಯ ಸಂವಿಧಾನ ಅಮೆರಿಕ ಸಂವಿಧಾನಕ್ಕಿಂತಲೂ ಶ್ರೇಷ್ಠವಾಗಿದೆ. ಅಲ್ಲಿ ಕರಿಯರು ತಮ್ಮ ಹಕ್ಕುಗಳಿಗಾಗಿ ಒಮ್ಮೆ ಮಾತ್ರ ಹೋರಾಟ ಮಾಡಿ ಪಡೆದಿದ್ದು, ಭಾರತದಲ್ಲಿ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ. ಇಲ್ಲಿ ಹೋರಾಟ ಮಾಡಿದವರನ್ನು ಪೂಜ್ಯನೀಯರೆಂದು ಭಾವಿಸಲಾಗುತ್ತದೆ ಎಂದರು.
12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ಸಮಾನತೆ ತರುವ ಮೂಲಕ ಜಾತಿ ವಿನಾಶವನ್ನು ಮಾಡಿದರು. ಎಲ್ಲ ಧರ್ಮಗಳು ಸಮಾನವಾದ ಧರ್ಮಗಳನ್ನು ಹೊಂದಿವೆ. ಆದರೆ ಯಾವ ಧರ್ಮಗಳೂ ಶ್ರೇಷ್ಠವಲ್ಲ ಯಾವ ಧರ್ಮಗಳು ಕನಿಷ್ಠವಲ್ಲ ಎಲ್ಲ ಧರ್ಮಗಳು ಸಮಾನತೆ ಹೊಂದಿವೆ. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದರು.
ಎಲ್ಲ ಧರ್ಮಗಳೂ ಒಂದೇ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಡಾ. ಮಂಜಪ್ಪ ಹೊಸಮನಿ ಮಾತನಾಡಿ, ನಮಗೆ ಯಾವುದೇ ಜಾತಿಯಿಲ್ಲ. ಎಲ್ಲ ಜಾತಿಗಳು ಒಂದೇ. ಜಾತಿ ತಾರತಮ್ಯ ಎಂದಿಗೂ ಮಾಡಕೂಡದು. ಬುದ್ಧ, ಬಸವಣ್ಣನವರ ತತ್ವ, ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಅಧಿಕಾರಿಗಳಾದ ಡಾ.ಜೆ. ಸೋಮಶೇಖರ, ಡಾ. ಶಾಂತಾನಾಯಕ, ಡಾ. ರಾಮಕೃಷ್ಣ, ಡಾ.ಕೆ. ಮೊಹನದಾಸ, ನಿರಂಜನ, ನಿರ್ಮಲಾ, ಅಶ್ವನಿ, ಶಶಿಧರ, ರವಿನಾರಾಯಣ, ಬಿ. ವಿಜಯಕುಮಾರ ಮತ್ತು ವಿವಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೊಡ್ಡಬಸವ ಗವಾಯಿಗಳು ವಚನ ಗಾಯನದ ಮೂಲಕ ಪ್ರಾರ್ಥಿಸಿದರು. ಡಾ. ಹೊನ್ನುರು ಅಲಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಡಾ. ಲೋಕೇಶ ನಿರೂಪಿಸಿದರು. ವೀರೇಂದ್ರಕುಮಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

