ಬಳ್ಳಾರಿ

ಸಿ ಕೆಟಗರಿ ಕಂಪನಿಗೆ ಗಣಿ ಗುತ್ತಿಗೆ ಬೇಡ

Published On :

ಬಳ್ಳಾರಿ:  ಸರ್ವೋಚ್ಚ ನ್ಯಾಯಾಲಯವು ರದ್ದು ಮಾಡಿರುವ ಸಿ ಕೆಟಗರಿಯ 51 ಗಣಿ ಕಂಪನಿಗಳಿಗೆ ಯಾವುದೇ ಕಾರಣಕ್ಕೂ ಪುನಃ ಹರಾಜು ಮುಖಾಂತರ ಗಣಿ ಗುತ್ತಿಗೆ ನೀಡಕೂಡದು. ಸಂಡೂರು ತಾಲೂಕಿನ ರಾಮಘಡ ಮತ್ತು ಸ್ವಾಮಿ ಮಲೈ ಬ್ಲಾಕ್‌ಗಳನ್ನು ಸೂಕ್ಷ್ಮ ಅರಣ್ಯ ಪ್ರದೇಶಗಳೆಂದು ಗುರುತಿಸಿ ಗಣಿಗಾರಿಕೆ ನಿಷೇಧ ಮಾಡುವಂತೆ ಜನ ಸಂಗ್ರಾಮ ಪರಿಷತ್, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಕ್ರಿಯಾ ಸಮಿತಿ ಹಾಗೂ ಸಂಡೂರಿನ ವಿವಿಧ ಪ್ರಗತಿಪರ ಸಂಘ, ಸಂಸ್ಥೆಗಳು ಮನವಿ ಮಾಡಿವೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ ಅವರು, ಸುಪ್ರೀಂ ಕೋರ್ಟ್ ಸಿ ಕೆಟಗರಿ ಗಣಿ ಕಂಪನಿಗಳನ್ನು ರದ್ದು ಮಾಡಿರುವುದು ಸ್ವಾಗತಾರ್ಹ. ಕೆಲ ಮಾನದಂಡಗಳ ಮೂಲಕ ಎ ಮತ್ತು ಬಿ ಕೆಟಗರಿಯ ಗಣಿ ಕಂಪನಿಗಳನ್ನು ಪುನಾರಂಭ ಮಾಡಬಹುದೆಂದು ಆದೇಶ ನೀಡಿದೆ. ಆದರೆ ಅದೇ ಸಿ ಕೆಟಗರಿ ಮೈನಿಂಗ್ ಕಂಪನಿಗಳನ್ನು ಪುನಃ ಹರಾಜು ಮೂಲಕ ಪ್ರಾರಂಭಿಸಬೇಕೆಂಬ ಆದೇಶ ಆಘಾತಕಾರಿ ಸಂಗತಿಯಾಗಿದೆ ಎಂದಿದ್ದಾರೆ.
ರಾಜ್ಯ ಬೊಕ್ಕಸಕ್ಕೆ ನಷ್ಟ: ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಹಾಗೂ ಪರಿಸರಕ್ಕೆ ಹಾನಿಯುಂಟಾಗಿದೆ, ಅಪಾರ ಪ್ರಮಾಣದ ಅರಣ್ಯ ಸಂಪತ್ತು, ಬೆಟ್ಟಗುಡ್ಡಗಳು, ವಿವಿಧ ಸಸ್ಯ ವೈವಿಧ್ಯತೆ ಮತ್ತು ಐತಿಹಾಸಿಕ ದೇವಸ್ಥಾನಗಳನ್ನು ಒಳಗೊಂಡ  ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆಯ ಕಾಶ್ಮೀರವೆಂದರೂ ತಪ್ಪಾಗಲಾರದು. ಸರ್ಕಾರವಾಗಲಿ, ಸಿಇಸಿಯಾಗಲಿ, ಐಸಿಎಫ್‌ಆರ್‌ಇ ಇದಕ್ಕೆ ಸಂಬಂಧಪಟ್ಟ ಯಾವುದೇ ಇಲಾಖೆಗಳು ಇಲ್ಲಿನ ಸ್ಥಳೀಯರ, ಪರಿಸರವಾದಿಗಳ, ರೈತರ ಸಲಹೆಗಳನ್ನು ಕೇಳಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ರಾಮಘಡ ಮತ್ತು ಸ್ವಾಮಿ ಮಲೈ ಬ್ಲಾಕ್‌ಗಳನ್ನು ಸೂಕ್ಷ್ಮ ಅರಣ್ಯ ಪ್ರದೇಶಗಳೆಂದು ಗುರುತಿಸಬೇಕೆಂದು ಮನವಿ ಮಾಡಿದರು. ಯಾವುದೇ ಕಾರಣಕ್ಕೂ ಸಿ ಕೆಟಗರಿ ಮೈನಿಂಗ್ ಕಂಪನಿಗಳಿಗೆ ಹರಾಜು ಮುಖಾಂತರ ಗಣಿ ಪರವಾನಿಗೆಯನ್ನು ನೀಡಕೂಡದು. ಈ ಕುರಿತು ರಾಜ್ಯ ಸರ್ಕಾರ ಕೂಲಂಕುಷವಾಗಿ ವಿಚಾರಣೆ ನಡೆಸಿ, ಉನ್ನತ ವರದಿಗೆ ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿವೆ. ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಟಿ.ಎಂ. ಶಿವಕುಮಾರ್, ಎ.ಜಿ ಶ್ರೀಶೈಲ, ವಕೀಲ ಸಿದ್ದಪ್ಪ, ಮೂಲಿಮನಿ ಈರಣ್ಣ, ಪೆನ್ನಪ್ಪ ಕಮತೂರು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.