ಬಳ್ಳಾರಿ

ಟ್ರಾಫಿಕ್ ಸಿಗ್ನಲ್‌ಗೆ ಕಟೌಟ್ ಕಿರಿಕಿರಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 5
ಯಾವುದೇ ಹಬ್ಬ- ಹರಿದಿನವಿರಲಿ, ಜನ್ಮದಿನದ ಶುಭಾಶಯಗಳು, ಅಭಿನಂದನೆಗಳು, ಕೃತಜ್ಞತೆಗಳು ಸೇರಿದಂತೆ ಪ್ರತಿಯೊಂದಕ್ಕೂ ಕೆಲವರು ಪ್ರಮುಖ ವೃತ್ತಗಳಲ್ಲಿ, ರಸ್ತೆ ಬದಿಗಳಲ್ಲಿ ಬ್ಯಾನರ್, ಕಟೌಟ್‌ಗಳನ್ನು ಬೃಹದಾಕಾರವಾಗಿ ನಿಲ್ಲಿಸಿ ಅಡ್ಡಿಪಡಿಸುತ್ತಿದ್ದಾರೆ.
ನಗರದ ಗಡಿಗಿ ಚನ್ನಪ್ಪ ವೃತ್ತದ ಸಂಚಾರಿ ದೀಪಕ್ಕೆ (ಸಿಗ್ನಲ್ ಲೈಟ್, ಪಲ್ಸ್‌ರೇಟ್) ಅಡ್ಡವಾಗಿ ಕಟೌಟ್‌ಗಳನ್ನು ನಿಲ್ಲಿಸಿದ್ದಾರೆ. ಹೀಗಾಗಿ ಇಲ್ಲಿನ ಅನಂತಪುರ ರಸ್ತೆಯಿಂದ ಚನ್ನಪ್ಪ ವೃತ್ತಕ್ಕೆ ಆಗಮಿಸುವ ವಾಹನ ಸವಾರರಿಗೆ ಸಿಗ್ನಲ್ ಲೈಟ್ ಕಾಣುವುದಿಲ್ಲ. ಇದರಿಂದ ಅನೇಕ ಬಾರಿ ರೆಡ್, ಗ್ರೀನ್ ಸಿಗ್ನಲ್ ಬೀಳುವುದು ಕಾಣದೇ ಹಲವು ಅನಾಹುತಗಳು ಸಂಭವಿಸುತ್ತವೆ. ಆದರೆ ಬಳ್ಳಾರಿ ಮಹಾನಗರ ಪಾಲಿಕೆ ಮತ್ತು ಸಂಚಾರಿ ಪೊಲೀಸರು ಮಾತ್ರ ತಮಗೇನು ಗೊತ್ತೇ ಇಲ್ಲ, ಸಂಬಂಧವೇ ಇಲ್ಲದಂತೆ ಮೌನವಹಿಸಿರುವುದು ವಿಪರ್ಯಾಸ.
ಸಂಚಾರಿ ನಿಯಮ ಪಾಲನೆ ಪ್ರತಿಯೊಬ್ಬ ವಾಹನ ಸವಾರನ ಆದ್ಯ ಕರ್ತವ್ಯ ನಿಜ. ಆದರೆ ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದಲ್ಲಿ ಅನಂತಪುರ ರಸ್ತೆಯಿಂದ ವೃತ್ತಕ್ಕೆ ಆಗಮಿಸುವ ತಿರುವಿಗೆ ಕಟ್ಟಿರುವ ಬ್ಯಾನರ್ ಸಿಗ್ನಲ್ ಪಲ್ಸ್‌ರೇಟ್‌ಗೆ ಅಡ್ಡಲಾಗಿರುವುದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗಿದೆ.
ದಾರಿ ತೋರಿಸಿದ ಪಾಲಿಕೆ: ಪ್ರಸ್ತುತ ದಿನಗಳಲ್ಲಿ ಬ್ಯಾನರ್ ಪ್ರಚಾರದ ಗೀಳಂತು ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಹಬ್ಬ- ಹರಿದಿನಗಳು ಮತ್ತಿತರೆ ಸಂದರ್ಭಗಳಲ್ಲಿ ಬ್ಯಾನರ್, ಕಟೌಟ್‌ಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ, ಜನನಿಬೀಡ ಸ್ಥಳಗಳಲ್ಲಿ ನಿಲ್ಲಿಸುತ್ತಾರೆ. ಆದರೆ ಅವುಗಳಿಗೆ ಅನುಮತಿ ನೀಡುವಾಗ ಸ್ಥಳ, ಇತರೆ ಅಂಶಗಳನ್ನು ಪರಿಶೀಲಿಸಿ, ಅನುಮತಿ ನೀಡಬೇಕಾದ ಪಾಲಿಕೆ ಜಾಗೃತಿ ವಹಿಸದೇ ನಿರ್ಲಕ್ಷ್ಯ ವಹಿಸಿರುವುದು ಸಂಚಾರಿ ನಿಯಮಗಳ ಉಲ್ಲಂಘನೆಗೆ ತಾನೇ ದಾರಿ ಮಾಡಿಕೊಟ್ಟಂತಾಗಿದೆ.
ಸಿಗ್ನಲ್ ಮರೆ: ವೃತ್ತ ಎಂದ ಮೇಲೆ ವಿವಿಧೆಡೆ ತೆರಳುವವರು ಒಂದೇ ಬಾರಿಗೆ ವಾಹನ ಚಲಾಯಿಸಿದರೆ ಅದರಿಂದಾಗುವ ಅಪಘಾತ, ವಾಹನಗಳ ಡಿಕ್ಕಿ ಇವೆಲ್ಲವನ್ನು ಮನಗಂಡು ಜನಸಂದಣಿ ಅಧಿಕವಿರುವ ವೃತ್ತದಲ್ಲಿ ಸಿಗ್ನಲ್ ನಂಬರ್ ಹಾಗೂ ಸಿಗ್ನಲ್ ಲೈಟ್ ಅಳವಡಿಸಲಾಗಿರುತ್ತದೆ. ಆದರೆ ಸಿಗ್ನಲ್ ಲೈಟ್‌ಗೆ ಅಡ್ಡಲಾಗಿ ಕಟೌಟ್ ಕಟ್ಟಲು ಅನುಮತಿ ನೀಡಿರುವ ಪಾಲಿಕೆಯ ಕ್ರಮ ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಸಿಗ್ನಲ್‌ಗೆ ಅಡ್ಡಲಾಗಿರುವುದರಿಂದ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಬೇರೆ ಊರುಗಳಿಗೆ, ಕೆಲಸದ ನಿಮಿತ್ತ ಹೋಗುವ ವಾಹನಗಳ ಸವಾರರಿಗೆ ಸುಗಮವಾಗಿ ತೆರಳಲು ಕಷ್ಟವಾಗಿ ಅಪಘಾತಗಳಿಗೆ ಆಹ್ವಾನವಿಟ್ಟಂತಾಗಿದೆ.
ಎಚ್ಚರಿಕೆ ವಹಿಸದ ಪಾಲಿಕೆ: ಆಟೋ, ಬೈಕ್, ಬಸ್‌ಗಳ, ವಿವಿಧ ವಾಹನಗಳ ಸವಾರರು ವೃತ್ತದಲ್ಲಿ ಸಿಗ್ನಲ್ ಪಲ್ಸ್‌ರೇಟ್ ಮುಗಿಯುವವರೆಗೆ ಕಾಯ್ದು ಮುಂದೆ ತೆರಳಬೇಕಾಗುತ್ತದೆ. ಈ ನಿಯಮ ಪಾಲನೆಗೆ ಪ್ರಾಶಸ್ತ್ಯ ನೀಡಬೇಕಾಗಿದ್ದು ಪಾಲಿಕೆ ಕರ್ತವ್ಯವೂ ಹೌದು. ಆದರೆ ಕಟೌಟ್‌ಗಳನ್ನು ಕಟ್ಟುವವರು ಅನುಮತಿ ಕೋರಿದಾಗಲಾದರೂ ಎಚ್ಚರ ವಹಿಸದೆ ಅನುಮತಿ ನೀಡಿರುವ ಕ್ರಮವನ್ನು ಪ್ರಶ್ನಿಸುವಂತಾಗಿದೆ.
ಈ ಬಗ್ಗೆ ಮುಂಜಾಗರೂಕತೆ ವಹಿಸಿ, ಸಂಚಾರಿ ನಿಯಮಗಳ ಪಾಲನೆಗೆ, ವಾಹನ ಸವಾರರ, ಸಾರ್ವಜನಿಕರ ಕಾಳಜಿ ವಹಿಸಬೇಕಾಗಿರುವುದು ಪಾಲಿಕೆಯ ಜವಾಬ್ದಾರಿ. ಈಗಲಾದರೂ ಸಿಗ್ನಲ್ ಲೈಟ್, ಪಲ್ಸ್‌ರೇಟ್‌ಗೆ ಅಡ್ಡಿಯಾಗಿರುವ ಕಟೌಟ್‌ಗಳನ್ನು ತೆರವುಗೊಳಿಸಿ, ಅದರಿಂದಾಗುವ ಅನಾಹುತಗಳನ್ನು ತಪ್ಪಿಸಲು ಪಾಲಿಕೆ ಕ್ರಮ ಕೈಗೊಳ್ಳುವುದೆ ಎಂಬುದು ಕಾದು ನೋಡಬೇಕು.
-ವೈ.ಎಂ. ಸಿದ್ಧಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.