ಕನ್ನಡ ಶಬ್ದ ಸಂಪತ್ತು ಹೆಚ್ಚಿಸಬೇಕು
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 7
ಇಂದು ಜನತೆ ನಿತ್ಯ ಜೀವನದಲ್ಲಿ ಇಂಗ್ಲಿಷ್ ಭಾಷೆಯ ಪದಗಳನ್ನು ಹೆಚ್ಚಾಗಿ ಬಳಸುತ್ತಿರುವುದರ ಫಲವಾಗಿ ಕನ್ನಡ ಪದಗಳನ್ನು ಕಳೆದುಕೊಳ್ಳುವ ಆತಂಕ ಉಂಟಾಗಿದೆ. ಭಾಷೆಯಲ್ಲಿ ಮೂಲರೂಪ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಶಬ್ದ ಸಂಪತ್ತನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದು ಖ್ಯಾತ ವಿದ್ವಾಂಸ ಡಾ. ಹಂಪಾ ನಾಗರಾಜಯ್ಯ ಅಭಿಪ್ರಾಯಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ ಗುರುವಾರ ಅಧ್ಯಯನಾಂಗ ಹಮ್ಮಿಕೊಂಡಿದ್ದ ಸಂಶೋಧನ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿ, ಸಂಖ್ಯಾವಾಚಕಗಳು ದ್ರಾವಿಡ ಭಾಷೆಗಳ ಗಟ್ಟಿ ಭಾಗಗಳು. ಭಾಷೆಯಲ್ಲಿ ಉಳಿಸಿಕೊಳ್ಳುವುದಕ್ಕೂ, ಕಳೆದುಕೊಳ್ಳುವುದಕ್ಕೂ ಒಂದು ಮೆಥೆಡಾಲಜಿ ಇದೆ. ಆದ್ದರಿಂದ ಭಾಷೆಯ ಮೂಲರೂಪ ಉಳಿಸಿಕೊಳ್ಳುವ ಪ್ರಯತ್ನ ಸಂಶೋಧಕರಲ್ಲಿ ಚಿಗುರೊಡೆಯಬೇಕು. ಸಾಮೂಹಿಕ ಚಿಂತನೆ ಸಂದರ್ಭದಲ್ಲಿ ಹಳಗನ್ನಡದ ಕುರಿತು ಮೂಲ ಬೇರುಗಳನ್ನು ಸಂಶೋಧಕರು ಹುಡುಕುವ ಮೂಲಕ ಕನ್ನಡವನ್ನು ಮತ್ತಷ್ಟು ಗಟ್ಟಿ ಮಾಡಬೇಕಿದೆ ಎಂದು ಹೇಳಿದರು.
ತರಗತಿಗಳಲ್ಲಿ, ಪಠ್ಯಗಳಲ್ಲಿ ಸಿಗಲಾರದ ಶಿಕ್ಷಣ ಕ್ಷೇತ್ರ ಕಾರ್ಯದಿಂದ ಲಭ್ಯವಾಗುತ್ತದೆ. ವಿಸ್ತಾರವಾದ ಅಧ್ಯಯನ, ಚಲನಶೀಲತೆ, ಸಮಯದ ಸದುಪಯೋಗದ ಮೂಲಕ ಸಂಶೋಧಕರು ಕನ್ನಡಕ್ಕೆ ಹೊಸದಿಕ್ಕು, ಹೊಸದಿಗಂತ ತೋರಿಸುವಂತಾಗಬೇಕು ಎಂದರು.
ಅರಿವಿನ ಪಲ್ಲಟದಿಂದ ಸಾಧ್ಯ: ಮಂಗಳೂರಿನ ಸಮಾಜ ವಿಜ್ಞಾನಿ ಡಾ. ವಿಲಿಯಂ ಡಿಸಿಲ್ವಾ ಸಾಂಸ್ಕೃತಿಕ ರಾಜಕಾರಣ ಕುರಿತು ಮಾತನಾಡಿ, ಪ್ರತಿಕ್ಷಣ ಅರಿವಿನ ಪಲ್ಲಟವಾಗುತ್ತಿರುತ್ತದೆ. ಈ ಮೂಲಕ ಅರಿವು ಹೊಸತನ ಪಡೆಯುತ್ತದೆ. ಅರಿವಿನಿಂದ ದೇಹ, ದೇವಾಲಯವಾಯಿತು. ಕಾಯಕ ಕೈಲಾಸವಾಯಿತು. ಈ ಕ್ರಾಂತಿಕಾರಕ ಬದಲಾವಣೆ ಅರಿವಿನ ಪಲ್ಲಟದಿಂದ ಸಾಧ್ಯವಾಯಿತು. ಅರಿವಿನಿಂದ ಸಂಶೋಧನೆಗೆ ತಳಹದಿ ಸಿಗುತ್ತದೆ. ಅಂತರ್ ಶಿಸ್ತೀಯ ಮತ್ತು ತೌಲನಿಕ ಅಧ್ಯಯನಗಳು ಸಾಧ್ಯವಾಗುತ್ತವೆ. ಜಾಗತೀಕರಣದ ಈ ಹೊತ್ತಿನಲ್ಲಿ ಸಂಶೋಧನೆ ಗುಣಾತ್ಮಕವಾಗಿರಬೇಕು ಎಂದು ಹೇಳಿದರು.
ಇಸಂಗಳಿಗೆ ಒಳಗಾಗದಿರಿ: ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶೀಯ ಜ್ಞಾನ ಪರಂಪರೆಯ ತಳಹದಿಯ ಮೇಲೆ ಹೊಸದಾರಿಗಳ ಕಡೆಗೆ ಸಂಶೋಧಕರು ಚಲಿಸಬೇಕಿದೆ. ಸಂಶೋಧಕರು ಯಾವುದೇ ಇಸಂಗಳಿಗೆ ಒಳಗಾಗದೆ, ಪೂರ್ವಾಗ್ರಹ ಪೀಡಿತರಾಗದೆ ಸತತ ಅಧ್ಯಯನ, ಕ್ಷೇತ್ರಕಾರ್ಯ, ಅನುಸಂಧಾನದ ಮೂಲಕ ಸಂಶೋಧನೆಗೆ ಸತ್ಯದ ದಾರಿ ಕಂಡುಕೊಳ್ಳಬೇಕು. ಹಂಪಿ ಕನ್ನಡ ವಿವಿಯ ಎಲ್ಲ ಪಿಎಚ್ಡಿ ಪ್ರಬಂಧಗಳನ್ನು ಅಂತರ್ಜಾಲದಲ್ಲಿ ಅಳವಡಿಸಲಾಗುತ್ತಿದೆ. ಆದ್ದರಿಂದ ಉದ್ಯೋಗದ ಗುರಿಗಾಗಿ ಪಿಎಚ್ಡಿ ಮಾಡಬೇಡಿ. ಇದೊಂದು ಪರಾಮರ್ಶನ ಗ್ರಂಥವಾಗಬೇಕು. ಕನ್ನಡ, ಕರ್ನಾಟಕವನ್ನು ಗಮನದಲ್ಲಿರಿಸಿ ಜಾಗತೀಕರಣಕ್ಕೆ ಉತ್ತರವಾಗಿ ಸಂಶೋಧಕರಿಂದ ಗುಣಾತ್ಮಕ ಸಂಶೋಧನೆಗಳು ಹೊರಬರಲಿ ಎಂದು ಆಶಿಸಿದರು.
ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಸ್ವಾಗತಿಸಿದರು. ಅಧ್ಯಯನಾಂಗದ ನಿರ್ದೇಶಕ ಡಾ. ಅಶೋಕ್ಕುಮಾರ್ ರಂಜೇರೆ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಯನಾಂಗದ ಉಪ ನಿರ್ದೇಶಕ ಡಾ.ಎಸ್.ವೈ. ಸೋಮಶೇಖರ ನಿರೂಪಿಸಿ, ವಂದಿಸಿದರು.
ಸಂಶೋಧಕರು ಯಾವುದೇ ಇಸಂಗಳಿಗೆ ಒಳಗಾಗದೆ, ಪೂರ್ವಾಗ್ರಹ ಪೀಡಿತರಾಗದೆ ಸತತ ಅಧ್ಯಯನ, ಕ್ಷೇತ್ರಕಾರ್ಯ, ಅನುಸಂಧಾನದ ಮೂಲಕ ಸಂಶೋಧನೆಗೆ ಸತ್ಯದ ದಾರಿ ಕಂಡುಕೊಳ್ಳಬೇಕು.
- ಹಿ.ಚಿ. ಬೋರಲಿಂಗಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

