ರೈತರು, ಕಾರ್ಮಿಕರಿಂದ ಅಹೋರಾತ್ರಿ ಧರಣಿ
ಬಳ್ಳಾರಿ: ಕಂಪನಿ ಕೃಷಿ ವಿರೋಧಿಸಿ ಹಾಗೂ ಕೃಷಿ ಸಂರಕ್ಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು, ಕೃಷಿ ಕಾರ್ಮಿಕರು ಡಿಸಿ ಕಚೇರಿ ಮುಂದೆ ಗುರುವಾರ ಬೆಳಗ್ಗೆ 2 ದಿನಗಳ ಅಹೋರಾತ್ರಿ ಧರಣಿ ಪ್ರಾರಂಭಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ದೊಡ್ಡ ಬಂಡವಾಳಗಾರರು, ಭೂ ಮಾಲೀಕರು, ಶ್ರೀಮಂತರ ಪರ ಜಾಗತೀಕರಣ ನೀತಿಗಳನ್ನು ಮುಂದುವರಿಸುತ್ತಿವೆ. ರೈತರು ಹಾಗೂ ಕೃಷಿ ಕೂಲಿಕಾರರ ವ್ಯವಸಾಯವನ್ನು ಲಾಭದಾಯಕವಾಗುವಂತೆ ಕ್ರಮಕೈಗೊಳ್ಳದೆ ಕೃಷಿಯನ್ನೇ ರೈತರ ಕೈಗಳಿಂದ ಕಿತ್ತುಕೊಂಡು ದೊಡ್ಡ ಕಂಪನಿಗಳಿಗೆ ಪರಭಾರೆ ಮಾಡಲು ಮುಂದಾಗುತ್ತಿರುವುದು ಶೋಚನೀಯ ಎಂದರು.
ಬಡ ರೈತರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಜಮೀನಿನ ಹಕ್ಕು ಪತ್ರಗಳನ್ನು ನೀಡದೆ ಒಕ್ಕಲೆಬ್ಬಿಸುತ್ತಿರುವುದು ಹಾಗೂ ಭೂ ಸುಧಾರಣಾ ಕಾನೂನಿಗೆ ಖಾಸಗಿ ಕಂಪನಿಗಳ ಪರ ತಿದ್ದುಪಡಿ ತರಲು ಪ್ರಯತ್ನಿಸುತ್ತಿರುವುದು, ಕೃಷಿ ರಂಗದಲ್ಲಿ ಬಂಡವಾಳ ಹೂಡಲು ವಿದೇಶಿ ಕಂಪನಿಗಳನ್ನು ಆಹ್ವಾನಿಸುತ್ತಿರುವುದು ಇವೆಲ್ಲವೂ ಕೃಷಿ, ಗುತ್ತಿಗೆ ಕೃಷಿ, ಮುಂಗಡ ವ್ಯಾಪಾರದ ಕೃಷಿ ಜಾರಿಗೆ ತರಲು ನಡೆಸಿರುವ ಹುನ್ನಾರ ಎಂದು ಆರೋಪಿಸಿದರು.
ಅರಣ್ಯ, ಕಂದಾಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ಬಡ ರೈತರನ್ನು ಒಕ್ಕಲೆಬ್ಬಿಸಬಾರದು. ಅವರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು. ಬಲವಂತದ ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಹೊಸ ಕಾಯ್ದೆಯಂತೆ ಪರಿಹಾರ ನೀಡಬೇಕು. ಭೂ ಸುಧಾರಣಾ ಕಾಯ್ದೆಯನ್ನು ಬಡ ಗೇಣಿದಾರರನ್ನು ಸಂರಕ್ಷಿಸಲು ಅನುವಾಗುವಂತೆ ತಿದ್ದುಪಡಿ ಮಾಡಬೇಕು. ಖರ್ಚು ಕಳೆದು ಉಳಿದ ಲಾಭದಲ್ಲಿ ಶೇ. 25ರಷ್ಟು ಮಾತ್ರ ಗೇಣಿ ಎಂದು ನಿಗದಿಪಡಿಸಬೇಕು. ಗೇಣಿ ರೈತರನ್ನು ನೋಂದಾಯಿಸಿಕೊಳ್ಳಬೇಕು. ಭೂ ಬೆಲೆ ನಿಗದಿಪಡಿಸುವಾಗ ಮನಸೋ ಇಚ್ಛೆ ನಿಗದಿಪಡಿಸಿ ವಂಚಿಸಲಾಗಿದ್ದು, ತನಿಖೆಗೆ ಒಳಪಡಿಸಿ ಶಿಕ್ಷಿಸಬೇಕು ಎಂದು ರೈತರು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಬಿ. ಅಡಿವೆಪ್ಪ, ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ, ಕೆ. ಗಾದಿಲಿಂಗಪ್ಪ, ಇ.ಆರ್. ಯಲ್ಲಪ್ಪ, ಸಿಐಟಿಯುನ ಆರ್.ಎಸ್. ಬಸವರಾಜ್, ಜೆ. ಸತ್ಯಬಾಬು, ನೂರಾರು ರೈತರು, ಕೃಷಿ ಕೂಲಿಕಾರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

