ಹೆಸರಿಗೆ ಉದ್ಯಾನ: ಒಳಗೆಲ್ಲ ಭಣಭಣ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ.10
ನಗರ, ಪಟ್ಟಣ ಪ್ರದೇಶ ಎಂದ ಕೂಡಲೇ ನೂರಾರು ವಾಹನಗಳ ಸದ್ದು, ಅದರ ಜತೆಗೆ ಹೊರಸೂಸುವ ವಿಷಕಾರಿ ಹೊಗೆ, ಧೂಳುಮಯ ರಸ್ತೆ, ಶುದ್ಧ ಗಾಳಿ ಇಲ್ಲದೇ ಮನಸ್ಸಿಗೆ ನೆಮ್ಮದಿ ಸಿಗದೇ ಸ್ವಲ್ಪ ಹೊತ್ತು ನೆಮ್ಮದಿಯಿಂದ ಕಾಲ ಕಳೆಯಲು ಇರುವುದು ಉದ್ಯಾನವನ ಆದರೆ, ಅದೀಗ ಭಣಭಣ ಎನ್ನುತ್ತಿದೆ.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು ಸ್ಪರ್ಧಿಸುತ್ತಿದ್ದ ಮಲ್ಲಿಗೆ ನಾಡು ಹೂವಿನಹಡಗಲಿಯ ಹೊರವಲಯದಲ್ಲಿ ಆಗಸ್ಟ್-15ರ ಉದ್ಯಾನವನವಿದೆ. ಉದ್ಯಾನವನ ಎಂದ ಕೂಡಲೇ ಸುಂದರ ಗಿಡ ಮರಗಳು, ಶುದ್ಧ ಗಾಳಿ, ಘಾಸಿಗೊಂಡಿರುವ ಮನಸ್ಸುಗಳಿಗೆ ತುಸು ನೆಮ್ಮದಿ ಸಿಗಲೆಂದು ನಿರ್ಮಾಣ ಮಾಡಲಾಗಿದ್ದ ಈ ಉದ್ಯಾನವನ ಹೆಸರಿಗಷ್ಟೇಯಾಗಿದೆ. ಹಚ್ಚ ಹಸುರಿನ ಸುಂದರ ಪರಿಸರ ಹಾಗೂ ಮಾದರಿ ಉದ್ಯಾನವನ ನಿರ್ಮಾಣಕ್ಕೆ ಅಗತ್ಯ ಪೂರಕ ವ್ಯವಸ್ಥೆ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದೇ ಮಲ್ಲಿಗೆನಾಡು ಹೂವಿನಹಡಗಲಿ ಸೇರಿದಂತೆ ಸುತ್ತಮುತ್ತಲಿನ ಜನರಿಗೆ ಪಾರ್ಕ್ ಸೌಲಭ್ಯ ಈಗ ಮರೀಚಿಕೆ.
ಕ್ಷೇತ್ರದ ಅಭಿವೃದ್ಧಿ ಎಂದ ಕೂಡಲೇ ಕೇವಲ ಕಟ್ಟಡ ನಿರ್ಮಾಣ ಮಾಡಿದರೆ ಸಾಲದು, ಮನಸ್ಸುಗಳನ್ನು ಅರಳಿಸುವಂತಹ ಸುಂದರ ಉದ್ಯಾನವನಗಳ ಅಗತ್ಯವಿದೆ ಎಂದು ಸಾಂಸ್ಕೃತಿಕ ರಾಯಭಾರಿಯೆಂದೇ ಹೆಸರಾದ ಎಂ.ಪಿ. ಪ್ರಕಾಶ ಅವರ ಉತ್ಕಟ ಬಯಕೆಯಾಗಿತ್ತು. ಅದರಂತೆ ಪ್ರವಾಸಿಗರು ಹಾಗೂ ಶಾಲಾ ಕಾಲೇಜುಗಳ ಮಕ್ಕಳ ಆಸಕ್ತಿಗನುಗುಣವಾಗಿ ಆಗಸ್ಟ್ 15 ಸ್ವಾತಂತ್ರ್ಯ ಉದ್ಯಾನವನ ನಿರ್ಮಿಸಿದ್ದರು. 1997 ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಸ್ಮರಣೆಯ ಉದ್ದೇಶದಿಂದ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆಗಸ್ಟ್-15ರ ಸಾರ್ವಜನಿಕ ಉದ್ಯಾನವನ ಹಾಗೂ ಮದಲಗಟ್ಟಿ ವೃತ್ತಕ್ಕೆ ಸುವರ್ಣ ಮಹೋತ್ಸವ ವೃತ್ತ ಎಂದು ನಾಮಕರಣ ಮಾಡಲಾಗಿತ್ತು. ಈಗ ಇವೆರಡೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಬಲ್ಡೋಟಾ ಕಂಪನಿ ಪಾರ್ಕ್ನಲ್ಲಿ ಕೆಲಸ ಮಾಡುವ 3 ಕಾರ್ಮಿಕರಿಗೆ ತಿಂಗಳಿಗೆ ತಲಾ ರು. 2 ಸಾವಿರ ಸಂಬಳ ನೀಡುತ್ತಿತ್ತು, ಆದರೆ, ಉದ್ಯಾನವನ ಅಭಿವೃದ್ಧಿಗೆ ಕಾಳಜಿ ವಹಿಸಲಿಲ್ಲ. ಇನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಪುರಸಭೆ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.
ಪಾರ್ಕ್ನಲ್ಲಿ ಹಸಿರು ಹೊದಿಕೆ, ಅಲಂಕಾರಿಕ ಗಿಡ-ಮರಗಳಿಲ್ಲ. ಬಣ್ಣ ಮಾಸಿದ ಮೂರ್ತಿಗಳು, ಸ್ವಚ್ಛತೆ ಇಲ್ಲದೇ ಬೆಳೆದ ಗಿಡಗಂಟೆಯ ಪೊದೆಗಳಲ್ಲಿ ವಿಷ ಜಂತುಗಳ ಕಾಟ. ನೀರಿನ ಕೊರತೆಯಿಂದ ಒಣಗಿನಿಂತ ಗಿಡ ಮರ, ನೆಲಹಾಸು ಮಳೆಗಾಲಕ್ಕೆ ಮಾತ್ರ ಹಸಿರಿನಿಂದ ಕೂಡಿರುತ್ತವೆ.
ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರ ಉತ್ತರಾಧಿಕಾರಿಯಂದೇ ಬಿಂಬಿತವಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಆಗಸ್ಟ್-15ರ ಉದ್ಯಾನವನ ನಿರ್ವಹಣೆಗೆ ಪಕ್ಕದ ವಲಯ ಅರಣ್ಯಾಧಿಕಾರಿ ಇಲಾಖೆ ಮೌಖಿಕವಾಗಿ ಆದೇಶಿಸಿದ್ದಾರೆ. ಆದರೆ, ಈವರೆಗೂ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಈಗಲಾದರೂ ಕಾಯಕಲ್ಪ ನೀಡುವರೇ ಕಾಯ್ದು ನೋಡಬೇಕಿದೆ.
- ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

