ವೈಮನಸ್ಸು: ಕೋಟೆ ಛಿದ್ರವಾಗುವ ಭೀತಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 10
ರೆಡ್ಡಿ ಸಹೋದರರು, ಶ್ರೀರಾಮುಲು ಕಪಿಮುಷ್ಟಿಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಕಾಂಗ್ರೆಸ್ ಯಶಸ್ವಿಯಾಗಿ ನಿಟ್ಟುಸಿರು ಬಿಟ್ಟಿತ್ತು. ಆದರೆ, ಇದೀಗ ಕಾಂಗ್ರೆಸ್ ನಾಯಕರ ವೈಮನಸ್ಸಿನಿಂದ ಅಭದ್ರತೆಯ ಭೀತಿ ಕಾಡುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಭಾವಿ ಕಾಂಗ್ರೆಸ್ ಮುಖಂಡರ ಒಳಜಗಳ ಹೈಕಮಾಂಡ್ಗೆ ಮುಟ್ಟಿದ್ದು, ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎನ್ನಲಾಗಿದೆ.
1999ರಲ್ಲಿ ಸೋನಿಯಾಗಾಂಧಿ ಲೋಕಸಭೆಯ ಚುನಾವಣೆಯಲ್ಲಿ ಪ್ರತಿನಿಧಿಸಿದ್ದ ಕ್ಷೇತ್ರ ಬಳ್ಳಾರಿಯಾಗಿದ್ದು, ಹೀಗಾಗಿ ಅವರಿಗೆ ಬಳ್ಳಾರಿಯೆಂದರೆ ಸೆಳೆತವಿದೆ. ಬಳ್ಳಾರಿಯಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಬಳಿ ಇದ್ದ ಅಧಿಕಾರವನ್ನು ಕಾಂಗ್ರೆಸ್ ಕಿತ್ತುಕೊಂಡಿದ್ದು, ಸಂತಸಕ್ಕೆ ಕಾರಣವಾಗಿತ್ತು. ಈ ಹಿಂದೆಯೂ ಪ್ರಮುಖ ನಾಯಕರ ಆಂತರಿಕ ಭಿನ್ನಮತದಿಂದಲೇ ಕಾಂಗ್ರೆಸ್ ಜಿಲ್ಲೆಯಲ್ಲಿ ಕಳೆಗುಂದಿತ್ತು. ಇದೀಗ ಅಧಿಕಾರಕ್ಕೆ ಬಂದರೂ, ಕಾಂಗ್ರೆಸ್ನಲ್ಲಿ ಒಬ್ಬರ ಮೇಲೊಬ್ಬರ ಕೆಸರೆರಚಾಟ ಮಾತ್ರ ನಿಂತಿಲ್ಲ. ಇದು ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಮೇಲೆ ಪ್ರಭಾವ ಬೀರಿದರೂ ಅಚ್ಚರಿಪಡಬೇಕಿಲ್ಲ.
ಗಮನಿಸುತ್ತಿರುವ ಹೈಕಮಾಂಡ್: ಬಳ್ಳಾರಿ ಕಾಂಗ್ರೆಸ್ ಮುಖಂಡರಲ್ಲಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ, ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ಗೆ ಯಾವುದೇ ಪ್ರತಿಪಕ್ಷಗಳ ಭೀತಿಯಿಲ್ಲ. ಕಾಂಗ್ರೆಸ್ಗೆ ಪಕ್ಷದಲ್ಲಿರುವ ಕೆಲ ಮುಖಂಡರೇ ಪ್ರತಿಪಕ್ಷವಾಗಿದ್ದಾರೆ.
ತಮ್ಮ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಹೊರಹಾಕುವ ಮೂಲಕ ಭಿನ್ನಾಭಿಪ್ರಾಯದ ಕಂದಕವನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ತಟಸ್ಥ ಧೋರಣೆ ಹೊಂದಿರುವುದು ಸಹಜವಾಗಿಯೇ ಕಾಂಗ್ರೆಸ್ನಲ್ಲಿ ಮತ್ತಷ್ಟು ಭಿನ್ನಮತಗಳು ತಲೆದೋರಲು ಕಾರಣವಾಗಿದೆ ಎನ್ನಬಹುದು.
ಆತಂಕಕ್ಕೆ ಕಾರಣ: ಜಿಲ್ಲೆಯ ಕಾಂಗ್ರೆಸ್ನಲ್ಲಿಯ ಭಿನ್ನಾಭಿಪ್ರಾಯಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಪರ್ಯಾಯ ರಾಜಕೀಯ ಪಕ್ಷಗಳಲ್ಲಿ ಪ್ರಬಲವಾಗಿ ಮುಂದಾಗದಿರುವುದು ಕಾಂಗ್ರೆಸ್ ಪಕ್ಷಕ್ಕೆ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಒಂದು ವೇಳೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರಿಗೆ ಯಾವುದೇ ಒತ್ತಡಗಳು (ಗಣಿಗಾರಿಕೆ ಸಂಬಂಧಿ ಗೊಂದಲಗಳು) ಇಲ್ಲದಿದ್ದರೆ, ಕಾಂಗ್ರೆಸ್ನ ಇಂತಹ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಂಡು, ಕಳೆದ ಹೋದ ಅಧಿಕಾರವನ್ನು ಮರು ಸ್ಥಾಪಿಸಲು ಬೇಕಾಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳಲು ಮುಂದಾಗುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾಂಗ್ರೆಸ್ನಲ್ಲಿ ಇಂತಹ ಒಳಜಗಳ ಮುಂದುವರಿದಿದ್ದೇ ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೇರೆ ಪಕ್ಷಕ್ಕೆ ಜಿಲ್ಲೆಯಲ್ಲಿ ಲಾಭವಾಗುತ್ತದೆ ಎಂಬುದು ರಾಜ್ಯದ ಮುಖಂಡರಿಗೆ ಮಾತ್ರ ಅಲ್ಲ, ಹೈಕಮಾಂಡ್ ಆತಂಕಕ್ಕೆ ಕಾರಣವಾಗಿದೆ.
ಕಾರ್ಯಕರ್ತರು, ಮುಖಂಡರಿಗೆ ಬೇಸರ: ನಾಯಕರಲ್ಲಿ ಭಿನ್ನಮತ ಹಾಗೂ ಕೆಸರೆರಚಾಟ ಅವರ ಹಿಂಬಾಲಕರಿಗೆ ಸಂತೋಷಕ್ಕೆ ಕಾರಣವಾಗಿದ್ದರೂ, ಪಕ್ಷದ ನಿಷ್ಠಾವಂತ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಬೇಸರ ಮೂಡಿಸಿದೆ. ಆದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ಮುಖಂಡರ ಪರವಾಗಿ, ವಿರೋಧವಾಗಿ ಮಾತನಾಡಬೇಕು ಎನ್ನುವ ಗೊಂದಲ ಅವರಲ್ಲಿದೆ. ಪಕ್ಷದ ವಿಚಾರದಲ್ಲಿ ಹಾಗೂ ಮುಖಂಡರಲ್ಲಿ ಭಿನ್ನಮತಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ಈ ಭಿನ್ನಮತ ಮುಖಂಡರಿಗೂ ಬಿಸಿ ಮುಟ್ಟಿಸಿದರೂ ಆಶ್ಚರ್ಯವಿಲ್ಲ.
ಬೂದಿ ಮುಚ್ಚಿದ ಕೆಂಡ: ಬಳ್ಳಾರಿ ನಗರ ಕ್ಷೇತ್ರ ಟಿಕೆಟ್ ಗಿಟ್ಟಿಸಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿನ ಭಿನ್ನಮತ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಭಿನ್ನಮತ ಬೂದಿಮುಚ್ಚಿದ ಕೆಂಡಂತಿದ್ದು, ತಮ್ಮ ತಪ್ಪುಗಳನ್ನು ತಾವೇ ಎತ್ತಿಟ್ಟುಕೊಂಡು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಳ್ಳಾರಿ ಮತ್ತೆ ಕಾಂಗ್ರೆಸ್ನ ಭದ್ರಕೋಟೆಯಾಗುವ ಹಂತದಲ್ಲಿ ಇಂತಹ ಬೆಳವಣಿಗೆಗಳು ಪಕ್ಷಕ್ಕೆ ಧಕ್ಕೆಯುಂಟು ಮಾಡುತ್ತಿವೆ. ಎಲ್ಲ ಮುಖಂಡರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಮಟ್ಟಿಗೆ ಎದ್ದು ಕಾಣುತ್ತಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

