ಕೊರಚ ಸಮಾಜದ ದಾರಿ ತಪ್ಪಿಸುವ ಹುನ್ನಾರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ, 11
ಕೊರಚ ಸಮಾಜದ ಕೆಲವರೇ ನಕಲಿ ಬಿಸ್ಕೆಟ್ ದಂಧೆ ಮಾಡುತ್ತಿದ್ದು, ಅವರೂ ಈ ದಂಧೆ ಕೈಬಿಡಲು ನಿರ್ಧರಿಸಿದರೂ ಮಧ್ಯವರ್ತಿಗಳು ಮತ್ತು ಕೆಲ ಪೊಲೀಸರು ಕುಮ್ಮಕ್ಕು ನೀಡುವ ಮೂಲಕ ಸಮಾಜವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಕೊರಚ ಸಮಾಜದ ಮುಖಂಡ ಪ್ರೊ. ಕೆ.ಎನ್. ರಾಮಾಂಜನೇಯ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲವೇ ಜನ ಈ ದಂಧೆಯಲ್ಲಿ ಪಾಲ್ಗೊಂಡಿರುವುದರಿಂದ ಇಡೀ ಕೊರಚ ಜನಾಂಗಕ್ಕೆ ಅವಮಾನವಾದಂತಾಗಿದೆ. ಹಾಗೆ, ಕೆಲವೇ ಪೊಲೀಸರ ಕೃತ್ಯದಿಂದ ಇಡೀ ಇಲಾಖೆಗೆ ಅಗೌರವ ಭಾವನೆ ಮೂಡಿಸುವ ಕಾರ್ಯವನ್ನು ಚಿವುಟಿ ಹಾಕಬೇಕಿದೆ. ಅದಕ್ಕಾಗಿ ಕೊರಚ ಸಮಾಜದ ಪ್ರಜ್ಞಾವಂತರು, ಉದ್ಯೋಗಸ್ಥರು ಕೈಜೋಡಿಸಲು ಸಿದ್ಧ ಎಂದು ತಿಳಿಸಿದರು.
ಕೊರಚ, ಕೊರಮ ಜನಾಂಗದ ಜಾಗೃತಿಗಾಗಿ ಡಿಸೆಂಬರ್ ತಿಂಗಳಲ್ಲಿ ತಾಲೂಕು ಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕೆ.ಎನ್. ರಾಮಾಂಜನೇಯ ತಿಳಿಸಿದರು.
ರಾಜ್ಯ ಮುಖಂಡ ಮೋಹನ್ರಾಜ್ ಮಾತನಾಡಿ, ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿದ ಕೊರಮ, ಕೊರಚ ಜನಾಂಗಕ್ಕೆ ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಅನ್ಯಾಯವಾಗಿದೆ. ಸರ್ಕಾರಗಳು ಈ ಜನಾಂಗವನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರಂತ ಎಂದರು.
ಎಲ್ಲ ರಾಜಕೀಯ ಪಕ್ಷಗಳು ಎಸ್ಸಿ ಕೋಟಾದಲ್ಲಿ ಕೊರಚ ಸಮಾಜದ ಯಾರೊಬ್ಬರಿಗೂ ಟಿಕೆಟ್ ನೀಡುತ್ತಿಲ್ಲ. ಸುಮಾರು 44 ವರ್ಷಗಳಿಂದ ಕೆಪಿಸಿಸಿಯಲ್ಲಿ ದುಡಿದ ಕಡೂರಿನ ಸಿ. ನಂಜಪ್ಪಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಮುಂಬರುವ ಎಂಪಿ ಚುನಾವಣೆಯಲ್ಲಿ ಮೀಸಲು ಚಿತ್ರದುರ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ನಂಜಪ್ಪರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ರಾಜ್ಯ ಕುಳುವ ಸಮಾಜದ ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ವಜ್ರಾಲ್ ಮಾತನಾಡಿ, ವಾರದ ಹಿಂದೆ ನಕಲಿ ಚಿನ್ನದ ಬಿಸ್ಕೆಟ್ ದಂಧೆ ಬಗ್ಗೆ ಜಾಗೃತಿ ಮೂಡಿಸಲು ಸಭೆ ನಡೆಸಿದ್ದರಿಂದ ದಂಧೆಯ ಮಧ್ಯವರ್ತಿ ಬತ್ತನಹಳ್ಳಿ ಗಿತ್ಲ ರಾಮಪ್ಪ ಮತ್ತು ಕೆಲವರು ಮನೆಗೆ ನುಗ್ಗಿ ದಾಂಧಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ. ನಕಲಿ ಚಿನ್ನದ ಬಿಸ್ಕೆಟ್ ಮೋಸದ ಜಾಲದಿಂದ ಜನತೆಯನ್ನು ಪಾರುಮಾಡಲು ಮೊದಲು ಮಧ್ಯವರ್ತಿಗಳಾದ ನಂಜಪಲ್ ರಾಜಪ್ಪ, ಗಿತ್ಲ ರಾಮಪ್ಪ ಸೇರಿದಂತೆ ಟಿಬಿ ಡ್ಯಾಂ, ಮುನಿರಾಬಾದ್, ಮೊಳಕಾಲ್ಮೂರು, ಹರಪನಹಳ್ಳಿ ಪೊಲೀಸ್ ಠಾಣೆಗಳಲ್ಲಿನ ಕೆಲ ಪೊಲೀಸರ ಮೊಬೈಲ್ ಸಂಖ್ಯೆಗಳನ್ನು ತನಿಖೆಗೊಳಪಡಿಸಿದರೆ ಮೋಸದ ಜಾಲ ಬಯಲಾಗುತ್ತದೆ. ಈ ಬಗ್ಗೆ ಶೀಘ್ರವೇ ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬತ್ತನಹಳ್ಳಿ ಹಾಲಪ್ಪ, ಕೃಷ್ಣಪ್ಪ, ಕಸಾಪುರ ನಾಗೇಂದ್ರಪ್ಪ, ಚಿಲಕನಹಟ್ಟಿ ಕಾಮಣ್ಣ, ಭಾಗ್ಯಮ್ಮ, ಪವಿತ್ರಾ, ಟೋಕ, ರವಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಆರೋಪ ಸುಳ್ಳು: ನಂಜಪಲ್ ರಾಜಪ್ಪ
ರಾಮದುರ್ಗ ತಾಪಂ ಸದಸ್ಯ ನಂಜಪಲ್ ರಾಜಪ್ಪ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಾನು ಕೊರಚ ಸಮಾಜದ ಮುಖಂಡನಾಗಿದ್ದರಿಂದ ಏನಾದರೂ ಸಮಸ್ಯೆಗಳು ಬಂದಾಗ ನಮ್ಮ ಕೊರಚ ಸಮಾಜದವರೇ ನನ್ನನ್ನು ಪೊಲೀಸ್ ಠಾಣೆಗಳಿಗೆ ಕರೆದುಕೊಂಡು ಹೋಗುತ್ತಾರೆ. ನಾನು ಜನಪ್ರತಿನಿಧಿಯಾಗಿದ್ದರಿಂದ ಯಾರೇ ಕರೆದರೂ ಕಷ್ಟ-ಸುಖಗಳಿಗೆ ಸ್ಪಂದಿಸುವ ಜವಾಬ್ದಾರಿ ಇದೆ. ಅದಕ್ಕಾಗಿ ನಾನು ಪೊಲೀಸ್ ಠಾಣೆಗೆ ಹೋಗಿ ಸಮಸ್ಯೆಗಳಿದ್ದರೆ ಬಗೆಹರಿಸುತ್ತೇನೆ. ನಕಲಿ ಚಿನ್ನದ ಬಿಸ್ಕೆಟ್ ದಂಧೆಗೂ ನನಗೂ ಯಾವುದೇ ಸಂಬಂಧವಿಲ್ಲ. ಗುರುಸ್ವಾಮಿ ವಜ್ರಾಲ್ ಮನೆಯಲ್ಲಿಯೇ ಅವರ ಸಹೋದರ ಈ ದಂಧೆ ಮಾಡುತ್ತಾನೆ. ಗುರುಸ್ವಾಮಿ ಮೊದಲು ಅವರ ಮನೆಯವರನ್ನು ಸರಿದಾರಿಗೆ ತರುವ ಕೆಲಸ ಮಾಡಲಿ. ಅದನ್ನು ಬಿಟ್ಟು ವಿನಾಕಾರಣ ನನ್ನ ಹಾಗೂ ಬತ್ತನಹಳ್ಳಿಯ ಗಜ್ಲಿ ರಾಮಪ್ಪನ ಮೇಲೆ ಆರೋಪ ಮಾಡುವುದು ಸರಿಯಲ್ಲ. ನಾನು ತಪ್ಪಿತಸ್ಥ ಆದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಿ ಎಂದು ಆರೋಪವನ್ನು ತಳ್ಳಿ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

