ಬಳ್ಳಾರಿ

ಡಿಸಿ ನಿರ್ಲಕ್ಷ್ಯದಿಂದ ಬಂಡ್ ಕುಸಿತ

Published On :

ಬಳ್ಳಾರಿ: ನಗರಕ್ಕೆ ನೀರು ಸರಬರಾಜು ಮಾಡುವ ಅಲ್ಲೀಪುರ ಕೆರೆ ಬಂಡ್ ಕುಸಿತ ಕಾಮಗಾರಿ ತನಿಖೆಗೊಳಪಡಿಸಬೇಕು. ಪಾಲಿಕೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನಿರ್ಲಕ್ಷ್ಯದಿಂದಾಗಿ ಬಂಡ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘದ ರಾಜ್ಯಾಧ್ಯಕ್ಷ ವಿ.ಎನ್. ಹಳ್ಳಿಕಟ್ಟಿ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲೀಪುರದ ಕೆರೆಯ ಬಂಡ್ ಕುಸಿದು ಆರು ತಿಂಗಳು ಕಳೆದರೂ ಕಾಮಗಾರಿ ಕೈಗೊಳ್ಳಲಿಲ್ಲ. ನಿಧಾನವಾಗಿ ಕಾಮಗಾರಿ ಆರಂಭಿಸಿದ್ದು, ನಿರ್ಮಾಣದ ಹಂತದಲ್ಲಿಯೇ ಕುಸಿದು ಬಿದ್ದಿರುವುದು ನೀರು ಸಂಗ್ರಹಕ್ಕೆ ತೊಂದರೆಯಾಗಲಿದೆ. ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸಲು ಇದು ಕಾರಣವಾಗುತ್ತದೆ. ಕಾಮಗಾರಿಯನ್ನು ಲ್ಯಾಂಡ್ ಆರ್ಮಿಗೆ ವಹಿಸಿಕೊಡಲಾಗಿದ್ದು, ಕಳಪೆ ಕಾಮಗಾರಿಯಿಂದ ಬಂಡ್ ಮತ್ತೊಮ್ಮೆ ಕುಸಿದಿದೆ. ಇದಕ್ಕೆ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಕಾರಣರಾಗಿದ್ದಾರೆ ಎಂದು ದೂರಿದರು.
ಅನುಮತಿ ಇಲ್ಲ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಆಗಮಿಸಿದ ಎಂಜಿನಿಯರ್‌ರೊಬ್ಬರು ಕುಸಿದ ಕೆರೆಯನ್ನು ವೀಕ್ಷಿಸಿ, ಯಾವ ರೀತಿ ಪುನರ್ ನಿರ್ಮಿಸಬೇಕೆಂಬ ಕುರಿತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದರು. ಬಂಡ್ ಕುಸಿದಾಗ ಅದರ ದುರಸ್ತಿಗೆ ಆಗುವ ವೆಚ್ಚದ ಯೋಜನಾ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಆರಂಭಿಕವಾಗಿ ಮಣ್ಣು ಪರಿಶೀಲನೆ ಸೇರಿದಂತೆ ರು. 6 ಲಕ್ಷ ವೆಚ್ಚವಾಗುತ್ತದೆ. ಸಂವಿಧಾನದಡಿ ಮಾನ್ಯತೆ ಪಡೆದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಸೇರಿದ ಅಲ್ಲೀಪುರ ಕೆರೆ ಬಂಡ್ ದುರಸ್ತಿ ಕಾಮಗಾರಿಯನ್ನು ಮಂಡಳಿಯ ಅನುಮತಿ ಇಲ್ಲದೆ ಭೂಸೇನಾ ನಿಗಮಕ್ಕೆ ಜಿಲ್ಲಾಧಿಕಾರಿಗಳು ವಹಿಸಿದ್ದಾರೆ. ಬೇರೆ ಏಜೆನ್ಸಿ ಅವರಿಗೆ ಕಾಮಗಾರಿ ವಹಿಸಿಕೊಟ್ಟರೂ ಉಸ್ತುವಾರಿ ಮಾತ್ರ ಜಲ ಮಂಡಳಿಗೆ ನೀಡಬೇಕಾಗಿತ್ತು ಎಂದರು.
ಕೆರೆಯಲ್ಲಿ ಕೇವಲ 3.5 ಮೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಡಿ. 15ರ ವರೆಗೆ ಮಾತ್ರ ಎಚ್‌ಎಲ್ ಕಾಲುವೆಗೆ ನೀರು ಸರಬರಾಗುತ್ತಿರುವುದರಿಂದ ಅಲ್ಲಿವರೆಗೆ ಕೆರೆಗೆ ನೀರು ತುಂಬಿಸಲು ಸಾಧ್ಯ. ಇದರಿಂದಾಗಿ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಸಾಕಷ್ಟು ಎದುರಾಗಲಿದೆ. ಸದ್ಯ ಕೆರೆಯಲ್ಲಿ ಸಂಗ್ರಹಿಸಿರುವ 3.5 ಮೀ ನೀರು ಮಾರ್ಚ್ ಕೊನೆವರೆಗೆ ಮಾತ್ರ ಬರಲಿದ್ದು, ನಂತರ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಈ ಮೊದಲು ರು. 21 ಲಕ್ಷಗಳಷ್ಟಿದ್ದ ಕಾಮಗಾರಿ ವೆಚ್ಚ ನಂತರ ರು. 27 ಲಕ್ಷದವರೆಗೆ ವಿಸ್ತರಣೆಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ರಘುನಾಥ್, ಗೋಡೆಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.