ಬಳ್ಳಾರಿ

ಗಡಿ ಗುರುತಿಸುವ ಕಾರ್ಯ ಪೂರ್ಣಗೊಳಿಸಿ: ಟಪಾಲ್ ಗಣೇಶ

Published On :

ಬಳ್ಳಾರಿ: ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ- ಆಂಧ್ರಪ್ರದೇಶದ ಕಾಯ್ದಿಟ್ಟ ಅರಣ್ಯದಲ್ಲಿರುವ ಅಂತರ್ ರಾಜ್ಯ ಗಡಿ ಗುರುತಿಸುವ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗಣಿ ಉದ್ಯಮಿ ಟಪಾಲ್ ಗಣೇಶ್ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ಮತ್ತು ಕರ್ನಾಟಕ ಸರ್ಕಾರಗಳ ಸಹಕಾರದೊಂದಿಗೆ ಸರ್ವೇ ಆಫ್ ಇಂಡಿಯಾದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಿ, ಆರು ವಾರದೊಳಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಅ. 28ರಂದು ಆದೇಶ ನೀಡಿದೆ. ಆದರೆ ಈಗಾಗಲೆ ಮೂರು ವಾರಗಳ ಅವಧಿ ಮುಗಿದಿದ್ದು, ಇನ್ನು ಮೂರು ವಾರ ಮಾತ್ರ ಬಾಕಿ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಮುತುವರ್ಜಿ ವಹಿಸಿ, ರಾಜ್ಯದ ಗಡಿ ಗುರುತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಮಲಪನಗುಡಿ ಪ್ರದೇಶದಲ್ಲಿ ಗಣಿಗಾರಿಕೆಗೆ ಪರವಾನಗಿಯನ್ನು ಪಡೆದ ಓಬಳಾಪುರಂ ಮೈನಿಂಗ್ ಕಂಪನಿಯವರು ಅಲ್ಲಿರುವ ಗಡಿ ಗುರುತುಗಳನ್ನು ಧ್ವಂಸಗೊಳಿಸಿದ್ದರ ಕುರಿತು ಬಳ್ಳಾರಿಯ ಅರಣ್ಯ ಇಲಾಖೆಯವರು ಎಫ್‌ಓಸಿ ದಾಖಲಿಸಿದ್ದಾರೆ. ಗಡಿ ಗುರುತುಗಳನ್ನು ಆಧರಿಸಿಯೆ ಆಂಧ್ರ ಮತ್ತು ಕರ್ನಾಟಕ ಪ್ರದೇಶಗಳು ವಿಭಾಗಿಸಲ್ಪಡುತ್ತವೆ ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿದೆ ಎಂದರು
ಜನಾರ್ದನ ರೆಡ್ಡಿ ಒಡೆತನದ ಓಎಂಸಿ ಗಣಿ ಕಂಪನಿ ಗಣಿ ಗಡಿಗಳನ್ನು, ರಾಜ್ಯ ಗಡಿಗಳನ್ನು ಅಧಿಕಾರ ಬಲದಿಂದ ಧ್ವಂಸಗೊಳಿಸಿ ಅಕ್ರಮವಾಗಿ ಕರ್ನಾಟಕದ ಗಡಿಯಲ್ಲಿರುವ ಗಣಿ ಕಂಪನಿಗಳನ್ನು ಹತೋಟಿಗೆ ತೆಗೆದುಕೊಂಡು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಸಾವಿರಾರು ಕೋಟಿ ರು. ಮೌಲ್ಯದ ಅದಿರು ಲೂಟಿಯಾಗಲು ಓಎಂಸಿ ಕಾರಣವಾಗಿದೆ. ಅಲ್ಲದೇ ರಾಜ್ಯದ ಗಡಿಯನ್ನೇ ಬದಲಾಯಿಸಿದ್ದಾರೆ. ರಾಜ್ಯದ ಗಡಿಯನ್ನು ಗುರುತಿಸುವ ಹಿನ್ನೆಲೆಯಲ್ಲಿ 1887ರ ಟ್ರಾವರ್ಸ್ ನಕ್ಷೆ ಆಧರಿಸಿ 1987ರಲ್ಲಿ ಬಳ್ಳಾರಿ ಕಾಯ್ದಿಟ್ಟ ಅರಣ್ಯದಲ್ಲಿರುವ ಗಡಿ ಗುರುತುಗಳನ್ನು ಆಧರಿಸಿ ಜಂಟಿ ಸಮೀಕ್ಷೆ ಮೂಲಕ ಟ್ರಾವರ್ಸ್ ಸ್ಕೆಚ್ ತಯಾರಿಸಿದ್ದಾರೆ. ಈ ನಕಾಶೆಯಲ್ಲಿ ಗಡಿ ಗುರುತುಗಳ ಡಿಸ್ಟೆನ್ಸ್, ಯಾಂಗಲ್ಸ್‌ಗಳನ್ನು ನಮೂದಿಸಿದ್ದು, ಈ ನಕಾಶೆಯ ಅಂಶಗಳನ್ನು ಆಧರಿಸಿ ಧ್ವಂಸಗೊಳಿಸಿರುವ ಗಡಿ ಗುರುತುಗಳನ್ನು ಪುನರ್‌ಸ್ಥಾಪನೆ ಮಾಡಿದಲ್ಲಿ ಆಂಧ್ರ-ಕರ್ನಾಟಕದ ಗಡಿ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಏಕಾಂಬರಂ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.