ಬಳ್ಳಾರಿ

ಬಾರದ ಹಿಂಗಾರು: ಅನ್ನದಾತ ಕಂಗಾಲು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 21
ಎರಡ್ಮೂರು ವರ್ಷಗಳ ಸತತ ಬರದಿಂದ ತತ್ತರಿಸಿದ್ದ ರೈತ ಸಮುದಾಯಕ್ಕೆ ಈ ಬಾರಿ ಉತ್ತಮ ಮಳೆ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕೈಕೊಟ್ಟ ಹಿಂಗಾರು ಮಳೆಯಿಂದಾಗಿ ರೈತರ ನಿರೀಕ್ಷೆ ಹುಸಿ ಯಾಗಿದೆ.
ಕಳೆದ ಎರಡು ವರ್ಷದ ಬರದ ನೋವನ್ನು ಹೋಗಲಾಡಿಸುವ ಆಶಾಭಾವವನ್ನು ಮಳೆ ಈ ಬಾರಿಯೂ ಸುಳ್ಳು ಮಾಡಿದೆ. ಬರದ ಕರಿನೆರಳಿಗೆ ಬಲಿಯಾದ ಮಳೆಯಾಶ್ರಿತ ರೈತರು ಚಾತಕ ಪಕ್ಷಿಯಂತೆ ಮಳೆಗಾಗಿ ಕಾದು ಸೋತು ಸುಣ್ಣವಾಗಿದ್ದಾರೆ. ಕೇವಲ 15-20 ನಿಮಿಷ ಉತ್ತಮ ಮಳೆ ಬಂದರೆ ರೈತನ ಎರಡು ವರ್ಷದ ನೋವು ಮರೆಯಾಗುತ್ತಿತ್ತು, ಆದರೆ ಅಂತಹ ಮಳೆ ಬಾರದಿರುವುದು ಜಿಲ್ಲೆಯ ರೈತರನ್ನು ಕಂಗೆಡಿಸಿದೆ.

ತೇವಾಂಶ ಇಲ್ಲ: ಜಿಲ್ಲೆಯ ಬಳ್ಳಾರಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ತಾಲೂಕಿನಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಬೆಳೆ ಇಲ್ಲದೆ ಆತಂಕಕ್ಕೆ ಕಾರಣವಾಗಿದೆ. ಹಿಂಗಾರು ಬಿತ್ತನೆ ಸಂದರ್ಭದಲ್ಲಿ ಉತ್ತಮ ಮಳೆಯಾಯಿತು. ಇದರಿಂದಾಗಿ ರೈತರು ಕಷ್ಟ ಮರೆಯುವಂತೆ ವರುಣ ಮಾಡುತ್ತಾನೆ ಎಂಬ ನಿರೀಕ್ಷೆ, ಕೊನೆಗೂ ನಿರೀಕ್ಷೆಯಾಗಿಯೇ ಉಳಿದಿದೆ. ಕಡಲೆ, ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ ಬೆಳೆಗಳು ಮಳೆ ಕೊರತೆಯಿಂದ ತೇವಾಂಶ ಕಡಿಮೆಯಾಗಿ ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಸಾಲ ತಂದು ಬಿತ್ತನೆ ಮಾಡಿರುವ ರೈತರ ಮುಖದ ಮೇಲೆ ಆತಂಕದ ಛಾಯೆ ಕಾಣುತ್ತಿದೆ.
ಯಾವ ಬೆಳೆಗೆ ಏನು ಹಾನಿ?: ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಲೆಯನ್ನು ಬಿತ್ತನೆ ಮಾಡಲಾಗಿದೆ. ಆದರೆ ಕಡಲೆ ಬೆಳೆಗೆ ತೇವಾಂಶದ ಕೊರತೆಯಿಂದ ಮಳೆಯಾಶ್ರಿತ ಪ್ರದೇಶದ ಬೆಳೆ ಹೆಚ್ಚು ಇಳುವರಿ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಎಕರೆಗೆ 8ರಿಂದ 10 ಚೀಲ ಕಡಲೆ ಬೆಳೆಯಬೇಕಿತ್ತು, ಆದರೆ ನವೆಂಬರ್ ಅಂತ್ಯದೊಳಗೆ ಮಳೆ ಬಾರದಿದ್ದರೆ ಎಕರೆಗೆ ಕೇವಲ 2ರಿಂದ 3 ಚೀಲ ಸಿಗುತ್ತದೆ. ಇದರಿಂದಾಗಿ ರೈತರು ಸಾಕಷ್ಟು ಸಂಕಷ್ಟ ಎದುರಿಸುವಂತಾಗುತ್ತದೆ. ಬಳ್ಳಾರಿ ತಾಲೂಕು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಇತರ ತಾಲೂಕುಗಳಲ್ಲಿ ಕಡಲೆ ಬೆಳೆಗೆ ಹೆಚ್ಚಿನ ಹಾನಿಯಾದಂತಾಗಿದೆ. ಇನ್ನು ಸೂರ್ಯಕಾಂತಿ, ಜೋಳಕ್ಕೂ ತೇವಾಂಶದ ಕೊರತೆ ಇದ್ದರಿಂದ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತನಿಗೆ ಸಾಕಷ್ಟು ನಿರಾಸೆಯಾಗಿದೆ.
ಕೈಕೊಟ್ಟ ವರುಣ: ಹಿಂಗಾರು ಬೆಳೆ ಬಿತ್ತನೆ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ರೈತನ ಮೊಗದಲ್ಲಿ ಸಂತೋಷ ಮನೆ ಮಾಡಿತ್ತು. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಬರಬೇಕಿದ್ದ ಸಾಮಾನ್ಯ ಮಳೆಯೂ ಬಾರದಿರುವುದು ಕಡಲೆ, ಸೂರ್ಯಕಾಂತಿ, ಜೋಳದ ಇಳುವರಿ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗಲಿದೆ. ಸೆಪ್ಟೆಂಬರ್‌ನಲ್ಲಿ ಸರಾಸರಿ 141.1 ಮಿ.ಮೀ. ಮಳೆಯಾಗಬೇಕಿತ್ತು, 125.2 ಮಿ.ಮೀ. ಮಳೆಯಾಗಿದೆ. ಇನ್ನು ಅಕ್ಟೋಬರ್‌ನಲ್ಲಿ 104.8 ಮಿ.ಮೀ. ವಾಡಿಕೆ ಮಳೆಯಿದ್ದರೆ, ಕೇವಲ 94.6 ಮಿ.ಮೀ. ಮಳೆಯಾಗಿದೆ. ಅಂದರೆ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಅಭಾವದಿಂದಾಗಿ ಎಲ್ಲ ಬೆಳೆಗಳ ಇಳುವರಿ ಕಡಿಮೆಯಾಗಿದೆ.
ಪರಿಹಾರ ಘೋಷಣೆ ಅಗತ್ಯ: ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ನಿಟ್ಟುಸಿರು ಬಿಡುವ ವಿಷಯವಾಗಿದ್ದರೂ, ಮಳೆ ಬಾರದಿರುವ ಹಿನ್ನೆಲೆಯಲ್ಲಿ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ಸರ್ಕಾರ ಬರ ಪರಿಹಾರದಡಿ ಪರಿಹಾರ ನೀಡುತ್ತದೆ ಎಂಬ ಆಶಾಭಾವದಲ್ಲಿ ರೈತರಿದ್ದಾರೆ.
ಬೆಳೆ ಪರಿಹಾರ ನೀಡಬೇಕೆಂಬ ಕೂಗು ಕೂಡ ರೈತರಿಂದ ಕೇಳಿಬರುತ್ತಿದೆ. ಸರ್ಕಾರ ನೀಡುವ ಪರಿಹಾರ ರೈತರ ಸಾಲ ತೀರಿಸದಿದ್ದರೂ, ಕೊಂಚ ಪರಿಹಾರ ಸಿಕ್ಕಿತಲ್ಲ ಎಂಬ ಧನ್ಯತಾಭಾವ ರೈತರಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕಂಗಾಲಾಗಿರುವ ಅನ್ನದಾತನಿಗೆ ಕೊಂಚ ಆಸರೆಯಾಗಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.