ಬಳ್ಳಾರಿ

ಭೀಮನ ಪಾತ್ರಕ್ಕೆ ಭೀಮಪ್ಪನ ಬಲ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ. 22
ಮಕ್ಕಳಿಗೆ ಪಾಠ ಮಾಡಿದರಷ್ಟೆ ಆಯಿತೆಂದೇ ತಿಳಿದುಕೊಂಡ ಶಿಕ್ಷಕರಿಗಿಂತ ಎಸ್. ಭೀಮಪ್ಪ ಬೇರೆಯಾಗಿ ಕಾಣುತ್ತಾರೆ. ಇವರು ಮಕ್ಕಳಿಗೆ ಪಾಠ ಮಾಡುವುದಷ್ಟೇ ಅಲ್ಲದೆ ತಾನು ಕೆಲಸ ಮಾಡುವ ಗ್ರಾಮಸ್ಥರೊಂದಿಗೂ ಒಡನಾಟ ಹೊಂದಿ ಅಲ್ಲಿಯ ಯುವಕರಲ್ಲಿ ನಾಟಕದ ಗೀಳು ಹಚ್ಚಿದ್ದಾರೆ.
ಎಸ್. ಭೀಮಪ್ಪ ಮೂಲತಃ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲೂಕು ಯರಬಳ್ಳಿ ಗ್ರಾಮದವರಾಗಿದ್ದರೂ ಬಿ.ಎ. ಪದವಿ ಮುಗಿಸಿ ಶಿಕ್ಷಕ ವೃತ್ತಿಯ ತರಬೇತಿ ಪಡೆದು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಪತ್ನಿ ಅಂಜಿನಮ್ಮ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 17 ವರ್ಷದಿಂದಲೂ ಕೂಡ್ಲಿಗಿ ತಾಲೂಕಿನ ಕಂದಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ  ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭೀಮಪ್ಪ ಈಗ ತನ್ನ ಹುಟ್ಟೂರಿಗಿಂತಲೂ ಹೆಚ್ಚಾಗಿ ಕಂದಗಲ್ ಗ್ರಾಮದವರೇ ಆಗಿ ಬಿಟ್ಟಿದ್ದಾರೆ.
ಗ್ರಾಮದ ಪ್ರತಿಯೊಬ್ಬರ ಬಾಯಲ್ಲೂ ಶಿಕ್ಷಕ ಭೀಮಪ್ಪ ಹೆಸರು ಕೇಳಿಬರುತ್ತದೆ. ಗ್ರಾಮದ ಎಲ್ಲರಿಗೂ ಚಿರ ಪರಿಚಿತವಾಗಿರುವ ಭೀಮಪ್ಪಗೆ ವಿದ್ಯಾರ್ಥಿಗಳ ಜತೆಗೆ  ಗ್ರಾಮಸ್ಥರ ಮೇಲೂ ಎಲ್ಲಿಲ್ಲದ ಕಾಳಜಿ. ಶಿಕ್ಷಕ ಎನ್ನುವ ಅಹಂ ಇಲ್ಲದೇ ಗ್ರಾಮದ ಅನಕ್ಷರಸ್ಥ ಯುವಕರ ಜತೆಗೆ ಬೆರೆತು 17 ವರ್ಷಗಳಿಂದಲೂ  ಅವರೊಂದಿಗೆ ನಾಟಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಕಂದಗಲ್ಲು ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರ ಬಾಯಲ್ಲೂ ಶಿಕ್ಷಕ ಭೀಮಪ್ಪನ ಹೆಸರಿದೆ.
ರಕ್ತರಾತ್ರಿಯ ಭೀಮ, ದುರ್ಯೋಧನ, ಅಶ್ವತ್ಥಾಮನ ಪಾತ್ರಗಳೆಂದರೆ ಭೀಮಪ್ಪನಿಗೆ ಎಲ್ಲಿಲ್ಲದ ಪ್ರೀತಿ. ಕಂದಗಲ್ಲು ಗ್ರಾಮದವರಲ್ಲದೆ ಕೊಟ್ಟೂರು, ಹರಪ್ಪನಹಳ್ಳಿ, ತುಮಕೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿಯೂ ರಕ್ತರಾತ್ರಿ ನಾಟಕದಲ್ಲಿ ಭೀಮ, ದುರ್ಯೋಧನ, ಅಶ್ವತ್ಥಾಮನ ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ನೊಂದವರಿಗೆ ಸಹಾಯ: ಈಚೆಗೆ ಭೀಮಪ್ಪ ತನ್ನ ಸ್ನೇಹಿತ ಶಿಕ್ಷಕರ ಜತೆಗೆ ಶ್ರೀ ಗುರು ಕೊಟ್ಟೂರೇಶ್ವರ ಕಲಾ ಸಂಘದ ಹೆಸರಿಲ್ಲಿ ಹತ್ತು ಹಲವು ನಾಟಕಗಳ ಜತೆಗೆ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಕೊಟ್ಟೂರಿನ ರಾಜ್ ಭವನದಲ್ಲಿ ಬಡ ವಿದ್ಯಾರ್ಥಿನಿಯೊಬ್ಬಳ ಎಂಬಿಎ ವ್ಯಾಸಂಗಕ್ಕೆ ಹಣ ಒದಗಿಸಲು ಶಿಕ್ಷಕ ಮಿತ್ರರು ಸೇರಿ ರಕ್ತರಾತ್ರಿ ನಾಟಕ ಪ್ರದರ್ಶನ ನೀಡಿ ಜನಪರ ಕಳಕಳಿ ಮೆರೆದಿದ್ದಾರೆ.
ಎಸ್. ಭೀಮಪ್ಪ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಎನ್‌ಎಸ್‌ಎನ್ ಸೇರಿ ಅಲ್ಲಿ ಸ್ನೇಹಿತರ ಜತೆಗೆ ಅಕ್ಷರ ಕಲಿಯೋಣ ಬನ್ನಿ ನಾಟಕ ಪ್ರದರ್ಶನ ಮಾಡುವುದರ ಮೂಲಕ ನಾಟಕದ ಗೀಳು ಬೆಳೆಸಿಕೊಂಡರು.
ವೇತನದಲ್ಲಿ ನಾಟಕ್ಕೆ ಹಣ: ನಂತರ ಸ್ವಗ್ರಾಮ ಯರಬಳ್ಳಿ ಹಾಗೂ ಕೆಲಸ ಮಾಡುವ ಕಂದಗಲ್ಲು ಮುಂತಾದ ಗ್ರಾಮಗಳಲ್ಲಿ ಅಣ್ಣನ ಆಜ್ಞೆ, ಧನಿಕರ ದೌರ್ಜನ್ಯ, ಚಿನ್ನದ ಗೊಂಬೆ, ಸರ್ಪ ಸಾಮ್ರಾಜ್ಯ ಮುಂತಾದ ಹತ್ತು ಹಲವು ಸಾಮಾಜಿಕ ನಾಟಕಗಳಲ್ಲಿಯೂ ಖಳನಾಯಕನ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಶಿಕ್ಷಕ ವೃತ್ತಿಯಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ನಾಟಕ, ಸಮಾಜ ಸೇವೆಗೆ ಖರ್ಚು ಮಾಡುವ ಇಂತಹ ಶಿಕ್ಷಕರು ಇರುವುದು ಅಪರೂಪವೆಂದೇ ಹೇಳಬಹುದು.
ಕಂದಗಲ್ಲು ನನ್ನ ಕರ್ಮಭೂಮಿಯಾಗಿದ್ದು, ಪೋಷಕರು, ಸಮುದಾಯದ ಜೊತೆಗೆ ನಿಕಟ ಸಂಬಂಧವಿದ್ದರೆ ಶಿಕ್ಷಕರು ಯಶಸ್ವಿಯಾಗಲು ಸಾಧ್ಯ ಎನ್ನುವ ಭೀಮಪ್ಪ, ರಂಗಭೂಮಿ ಕಲಾವಿದರಾದ ಪುರುಷೋತ್ತಮ ಹಂದ್ಯಾಳ್, ಹಿರೇಕುಂಬಳಗುಂಟೆ ನಾಗರಾಜ, ಕಂದಗಲ್ಲು ಚನ್ನಬಸಪ್ಪ, ಮನ್ಸೂರ್ ಭದ್ರಮ್ಮ, ಗೆಣಿಕಿಹಾಳ್ ತಿಮ್ಮನಗೌಡ ನನ್ನ ಕಾಲೇಜಿನ ಗುರುಗಳಾದ ಭರತ್ ಭೂಷಣ್, ನನ್ನಂತೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತ ರಕ್ತರಾತ್ರಿ ನಾಟಕದ ವಿವಿಧ ಪಾತ್ರಗಳನ್ನು ನಿರ್ವಹಿಸುವ ನನ್ನ ಮಿತ್ರರಾದ ನಾಗನಗೌಡ, ಶೇಖರನಾಯ್ಕ, ರುದ್ರಮುನಿಸ್ವಾಮಿ ಹಾಗೂ ತಾಲೂಕಿನ ಎಲ್ಲ ಶಿಕ್ಷಕ ಮಿತ್ರರ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರ ನಾನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಎಸ್. ಭೀಮಪ್ಪ.

ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.