ಸಂಡೂರು ತಾಲೂಕಿಗೆ ಮೂಲ ಸೌಕರ್ಯ ಕಲ್ಪಿಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 22
ಗಣಿಗಾರಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅತಿಹೆಚ್ಚು ಆದಾಯ ನೀಡುತ್ತಿರುವ ಸಂಡೂರು ತಾಲೂಕಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸಂಡೂರಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಎರಡೂ ಸರ್ಕಾರಗಳಿಗೆ ದೊರೆಯುವ ಗಣಿ ಆದಾಯದ ಜತೆಗೆ ಸಂಡೂರು ತಾಲೂಕಿನ ಅಭಿವೃದ್ಧಿಯೂ ಆಗಬೇಕಿತ್ತು. ಆದರೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯಿಂದಾಗಿ ತಾಲೂಕು ಅಭಿವೃದ್ಧಿಯಾಗಿಲ್ಲ. ಜನತೆ ಕನಿಷ್ಠ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಂದಾಯ, ಶಿಕ್ಷಣ, ಆರೋಗ್ಯ ಹೀಗೆ ಒಂದಲ್ಲ ಒಂದು ಸಮಸ್ಯೆ ಹೊತ್ತು ನಿತ್ಯ ಜಿಲ್ಲಾ ಕೇಂದ್ರಗಳಿಗೆ ತಲುಪಲು ಸೂಕ್ತ ರಸ್ತೆಗಳ ಕೊರತೆ ಇದ್ದು, ಸಂಚಾರಕ್ಕೆ ನಾಲ್ಕು ತಾಸು ಬೇಕಾಗುತ್ತದೆ. ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಸಂಘಟನೆಗಳ ಮುಖಂಡ ಶಿವಕುಮಾರ್ ಆರೋಪಿಸಿದ್ದಾರೆ.
ಒಮ್ಮೆ ಭೇಟಿ ನೀಡಿ: ಸ್ಥಳೀಯವಾಗಿ ತಲೆಯೆತ್ತಿರುವ ಉಕ್ಕು ಕಾರ್ಖಾನೆಗಳಿಗೆ ಹಗಲು-ರಾತ್ರಿ ಎನ್ನದೆ ಅದಿರು ಪೂರೈಸುವ ಲಾರಿಗಳಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ವಿಪರೀತ ಟ್ರಾಫಿಕ್ ಉಂಟಾಗಿ, ಜನಸಾಮಾನ್ಯರು ತೀವ್ರ ತೊಂದರೆ ಎದುರಿಸುತ್ತಿದ್ದು, ಇದರಲ್ಲಿ ಸಿಲುಕುವ ಆ್ಯಂಬುಲೆನ್ಸ್ಗಳಲ್ಲೇ ರೋಗಿಗಳ ಪ್ರಾಣ ಹೋಗಿರುವ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಕೂಡಲೆ ಸಂಡೂರು ತಾಲೂಕಿಗೆ ಒಮ್ಮೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ನೀಡಿದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹದಗೆಟ್ಟ ರಸ್ತೆಗಳಿವೆ: ಸಂಡೂರು- ತೋರಣಗಲ್ಲು, ಸಂಡೂರು- ಕೂಡ್ಲಿಗಿ, ಸಂಡೂರು- ಕುಮಾರಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪಟ್ಟಣಕ್ಕೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಯೋಜನೆ, ಆರ್ ಅಂಡ್ ಆರ್ ಯೋಜನೆಯನ್ನು ಜಾರಿಗೊಳಿಸಬೇಕು. ಎನ್ಎಂಡಿಸಿಯಿಂದ ರೈತರಿಗೆ ದೊರೆಯಬೇಕಿದ್ದ ರು. 1.24 ಕೋಟಿ ಪರಿಹಾರಧನವನ್ನು ಕೂಡಲೆ ನೀಡಲು ಆದೇಶಿಸಬೇಕು. ನೂರು ಹಾಸಿಗೆ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು. ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಿ 108 ಆ್ಯಂಬುಲೆನ್ಸ್ ನೀಡಬೇಕು. ದೇವಗಿರಿ, ಕಮ್ಮತ್ತೂರು ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎನ್ನುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರನ್ನು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

