ಕಾರಿಗೆ ಲಾರಿ ಡಿಕ್ಕಿ: ಇಬ್ಬರು ಸಜೀವ ದಹನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 27
ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿರುವ ದುರ್ಘಟನೆ ತಾಲೂಕಿನ ಜೋಳದರಾಶಿ ಸಮೀಪದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಕಾರಿನಲ್ಲಿದ್ದ ದೇಹಗಳು ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳು ಮಾತ್ರ ಉಳಿದಿವೆ.
ಮೃತರನ್ನು ಆಂಧ್ರಪ್ರದೇಶದ ಆತ್ಮಕೂರು ಗ್ರಾಮದ ಕಾರು ಚಾಲಕ ಓಬಳೇಶ್ (30), ಅಚ್ಚಂಪಲ್ಲಿ ಕುಮಾರ್ (28) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನರು ಆತ್ಮಕೂರಿನಿಂದ ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಇಬ್ಬರು ಅನಂತಪುರದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಆ ಇಬ್ಬರೂ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ಲಾರಿ ಚಾಲಕ ಲಾರಿಯನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆದರೆ ಆಂಧ್ರದ ವಿಡಪನಕಲ್ ಚೆಕ್ಪೋಸ್ಟ್ ಬಳಿ ಆಂಧ್ರ ಪೊಲೀಸರು ಲಾರಿಯನ್ನು ಪರಿಶೀಲಿಸಿದ್ದಾರೆ. ಅನುಮಾನಗೊಂಡು ತಕ್ಷಣ ಪಿ.ಡಿ. ಹಳ್ಳಿ ಠಾಣಾಗೆ ಸಂಪರ್ಕಿಸಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ಕೂಡಲೇ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಡೀಸೆಲ್ ಟ್ಯಾಂಕ್ಗೆ ಬೆಂಕಿ?: ಅನಂತಪುರ ಕಡೆಯಿಂದ ಕಾರು ಬರುತ್ತಿರುವಾಗ ಜೋಳದರಾಶಿ ಸಮೀಪದಲ್ಲಿಯೇ ಬಳ್ಳಾರಿ ಕಡೆಯಿಂದ ಅನಂತಪುರ ಮಾರ್ಗವಾಗಿ ಚೆನ್ನೈಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂದಿನ ಭಾಗ ಜಖಂಗೊಂಡಿದೆ. ಕೂಡಲೇ ಡೀಸೆಲ್ ಟ್ಯಾಂಕ್ಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದಾಗಿ ಕಾರಿನಲ್ಲಿದ್ದ ಇಬ್ಬರೂ ಸುಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ, ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಉಮೇಶ್ ಈಶ್ವರ ನಾಯಕ್, ಪಿ.ಡಿ. ಹಳ್ಳಿ ಠಾಣೆ ಪಿಎಸ್ಐ ಸಂದೀಪ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾರು ಸುಟ್ಟು ಕರಕಲಾಗಿದ್ದು, ಅದರಲ್ಲಿದ್ದ ಕಾರು ಚಾಲಕ ಹಾಗೂ ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಗಳೂ ಬೆಂದು ಹೋಗಿದ್ದಾರೆ. ಕೇವಲ ಮೂಳೆಗಳು, ತಲೆ ಬುರುಡೆಗಳು ಮಾತ್ರ ಇವೆ.
ಕಾರಿಗೆ ಡಿಕ್ಕಿ ಹೊಡೆದಿರುವುದನ್ನು ನೋಡಿದರೆ, ಅಪಘಾತ ಸಂದರ್ಭದಲ್ಲಿ ಚಾಲಕ ಸತ್ತಿರಬಹುದು, ಇನ್ನು ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರಬಹುದು. ಆದರೆ ಕಾರಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹೊರಗಡೆ ಅವರಿಬ್ಬರಿಗೂ ಬರಲು ಆಗದೆ, ಬೆಂಕಿಯಲ್ಲಿ ಬೆಂದಿರಬಹುದು ಎಂದು ಪೊಲೀಸರು ತಿಳಿಸಿದರು.
ಸತ್ತವರು ಆತ್ಮಕೂರಿನವರು: ಮೃತಪಟ್ಟವರ ಪತ್ತೆಗೆ ಪೊಲೀಸರು ಹರಸಾಹಸ ಪಡುವಂತಾಯಿತು. ಆಂಧ್ರದ ಅನಂತಪುರ ಜಿಲ್ಲೆ ಆತ್ಮಕೂರು, ಅಚ್ಚಂಪಲ್ಲಿ ಗ್ರಾಮದವರು. ಸುಟ್ಟ ದೇಹಗಳನ್ನು ವಿಮ್ಸ್ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಿ.ಡಿ. ಹಳ್ಳಿ ಠಾಣೆ ಪಿಎಸ್ಐ ಸಂದೀಪ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

