ಬಳ್ಳಾರಿ

ಮತ್ತೆ ಚಿಗುರಿತು ಹೊಸ ತಾಲೂಕು ಕನಸು

Published On :

ಕನ್ನಡಪ್ರಭ ವಾರ್ತೆ, ಕೊಟ್ಟೂರು, ನ. 27
ತಾಲೂಕು ಹಣೆಪಟ್ಟಿ ಹೊಂದಲು ತುದಿಗಾಲಲ್ಲಿ ನಿಂತಿರುವ ಜಿಲ್ಲೆಯ ಕೊಟ್ಟೂರು, ಕಂಪ್ಲಿ ಮತ್ತು ಕುರುಗೋಡು ಸೇರಿದಂತೆ ರಾಜ್ಯದ ಇತರ 40 ಪಟ್ಟಣಗಳ ಜನತೆಯ ನಿರಾಸೆಯ ಕಾರ್ಮೋಡಗಳು ಸರಿಯುವ ಲಕ್ಷಣಗಳು ಗೋಚರಿಸುತ್ತಿವೆ.
ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳವಾರ ಮಾತನಾಡಿ, 177ನೇ ತಾಲೂಕಾಗಿ ಘೋಷಿತವಾದ ಕಿತ್ತೂರು ತಾಲೂಕು ರಚನೆ ಮತ್ತು ಅಲ್ಲಿನ ಕಚೇರಿಗಳ ಹುದ್ದೆಗೆ ಸಂಬಂಧಿಸಿದಂತೆ ಅಂದಾಜು ವೆಚ್ಚದ ವಿವರವನ್ನು ತಿಳಿಸುವಂತೆ ಆಗಸ್ಟ್ 1ರಂದು ಪತ್ರ ಬರೆದು ಬೆಳಗಾವಿ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದರು. ಜಿಲ್ಲಾಧಿಕಾರಿಯವರು ನೂತನ ತಾಲೂಕು ರಚನೆಗೆ ತಗಲುವ ಅಂದಾಜು ವೆಚ್ಚದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿದರು. ಅನಂತರ ಈ ವರದಿಯನ್ನಾಧರಿಸಿ 43 ಹೊಸ ತಾಲೂಕುಗಳ ರಚನೆಗೆ ಕ್ರಮ ಕೈಗೊಳ್ಳುವ ಸುಳಿವು ನೀಡಿದ್ದಾರೆ. ಈ ಸುಳಿವು ಜನತೆಗೆ ಸಮಾಧಾನ ತರಿಸಿದೆ.
ಜನತೆಗೆ ಆಶಾಭಾವನೆ: ಹಲವು ದಶಕಗಳ ಬೇಡಿಕೆಯಾದ ಹೊಸ ತಾಲೂಕುಗಳ ರಚನೆಗೆ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಮುಂದಾಗಿ 43 ಪಟ್ಟಣಗಳನ್ನು ತಾಲೂಕುಗಳನ್ನಾಗಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.
ಅನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದ ಆರಂಭದಲ್ಲೇ ಸಚಿವ ವಿ. ಶ್ರೀನಿವಾಪ್ರಸಾದ್ ನೂತನ ತಾಲೂಕುಗಳ ರಚನೆ ಸಾಧ್ಯವಿಲ್ಲ ಎಂಬ ಖಡಾಖಂಡಿತದ ಮಾತುಗಳನ್ನಾಡಿ ತಾಲೂಕುಗಳ ರಚನೆಗೆ ಎಳ್ಳುನೀರು ಬಿಡುವ ಮಾತನಾಡಿದ್ದರು. ಈ ಬೆಳವಣಿಗೆಯಿಂದ ಹೊಸ ತಾಲೂಕಾಗುವ ಕನಸು ಕಂಡಿದ್ದ ಪಟ್ಟಣದ ನಾಗರಿಕರ ಆಶಾಭಾವನೆ ಕಮರಿಹೋಗಿತ್ತು.
ಪ್ರತಿರೋಧ: ಸಚಿವರ ಈ ಹೇಳಿಕೆ ವಿರುದ್ಧ ನಂತರದ ದಿನಗಳಲ್ಲಿ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತಗೊಳ್ಳಲಾರಂಭಿಸಿತು. ಇದರ ಸೂಕ್ಷ್ಮ ಅರಿತ ಕಾಂಗ್ರೆಸ್ ಸರ್ಕಾರ ಇದೀಗ ಹಿಂದಿನ ಸರ್ಕಾರ ಘೋಷಿಸಿದ 43 ತಾಲೂಕುಗಳ ಹಂತ ಹಂತವಾಗಿ ರಚಿಸುವತ್ತ ಮುಂದಾಗಿರುವುದನ್ನು ಸ್ವತಃ ಕಂದಾಯ ಸಚಿವರು ಅಧಿವೇಶನದಲ್ಲಿ ಸ್ಪಷ್ಟಪಡಿಸಿರುವುದು ಜನರು ತಾಲೂಕುಗಳ ರಚನೆಯನ್ನು ಮತ್ತೆ ಎದುರು ನೋಡುವಂತೆ ಮಾಡಿದೆ.
ಬಳ್ಳಾರಿಯ ತಾಲೂಕುಗಳು: ರಾಜ್ಯದಲ್ಲಿ ಬಹುತೇಕ ತಾಲೂಕುಗಳು 400 ಚ.ಮೀ.ನಷ್ಟಿದ್ದರೆ ಬಳ್ಳಾರಿ ಜಿಲ್ಲೆಯ ತಾಲೂಕುಗಳು 600 ಚ.ಮೀ. ಕ್ಷೇತ್ರ ಹೊಂದಿವೆ. ಅಭಿವೃದ್ಧಿ, ಆಡಳಿತದ ದೃಷ್ಟಿಯಿಂದ 3 ಹೋಬಳಿಗೆ ಒಂದು ತಾಲೂಕು ರಚನೆ ಆಗಲೇಬೇಕಿರುವುದು ಅತಿ ಅವಶ್ಯ ಎಂಬುದು ಹಲವಾರು ವರ್ಷಗಳ ಬೇಡಿಕೆ.
ಜಿಲ್ಲೆಯ ಪೂರ್ವ-ಪಶ್ಚಿಮ ಭಾಗದಲ್ಲಿ ನೂತನ ತಾಲೂಕು ರಚಿಸುವುದು ಅವಶ್ಯ ಎಂಬ ಹಿನ್ನೆಲೆಯಿಂದ ಕೊಟ್ಟೂರು, ಕಂಪ್ಲಿ ಮತ್ತು ಕುರುಗೋಡು ತಾಲೂಕು ಆಗುವುದು ಸೂಕ್ತ ಎಂದು ಎಂ.ಬಿ. ಪ್ರಕಾಶ್ ನೇತೃತ್ವದ ತಾಲೂಕು ರಚನಾ ಸಮಿತಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ನಮೂದಿಸಿದೆ. ಈಗಲಾದರೂ ಈ ಮೂರು ಪಟ್ಟಣಗಳನ್ನು ತಾಲೂಕುಗಳನ್ನಾಗಿ ಸರ್ಕಾರ ಪರಿವರ್ತಿಸಬೇಕಿದೆ.
ಮಂಗಳವಾರದ ಸಚಿವರ ಮಾತಿನಿಂದ ಪಟ್ಟಣ ಸೇರಿದಂತೆ ತಾಲೂಕುಗಳ ಪಟ್ಟಿಯಲ್ಲಿ ರಾಜ್ಯದ ಇತರ ನಗರ ಹಾಗೂ ಪಟ್ಟಣಿಗರು ಸಂತುಷ್ಟಗೊಂಡಿದ್ದಾರೆ. ಆದರೆ ಕೇವಲ ಮಾತನಾಡಿ ಸುಮ್ಮನಾಗದೇ ತಾಲೂಕು ಘೋಷಣೆ ಮಾಡಿದರೆ ಇನ್ನೂ ಉತ್ತಮ ಎಂಬುದು ಜನತೆಯ ಮಾತು.

ಮೊದಲ ಪಟ್ಟಿಯಲ್ಲಿ ಕೊಟ್ಟೂರು
ಅಧಿವೇಶನದ ಮೊದಲ ದಿನವೇ ತಾಲೂಕುಗಳ ರಚನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ತಾವು ಸೇರಿದಂತೆ ಇತರ ಶಾಸಕರು ಉತ್ತರಕ್ಕೆ ಒತ್ತಾಯಿಸಿದ್ದೆವು. ಕಂದಾಯ ಸಚಿವರು ಈಗಾಗಲೆ ಹಂತ ಹಂತವಾಗಿ ಈ ಪ್ರಕ್ರಿಯೆಗೆ ಮುಂದಾಗುವುದಾಗಿ ಪ್ರಕಟಿಸಿದ್ದಾರೆ. ಸರ್ಕಾರ ಮುಂಬರುವ ದಿನಗಳಲ್ಲಿ ತಾಲೂಕು ಘೋಷಿಸುವ ಮೊದಲ ಹಂತದ ತಾಲೂಕು ಪಟ್ಟಯಲ್ಲಿ ಕೊಟ್ಟೂರು ಸೇರಿದಂತೆ ಕಂಪ್ಲಿ, ಕುರುಗೋಡು ಸ್ಥಾನ ಪಡೆಯುವುದು ನಿಶ್ಚಿತ. ಈ ಕುರಿತು ತಮಗೆ ಸರ್ಕಾರದಿಂದ ಸ್ಪಷ್ಟ ಭರವಸೆ ವ್ಯಕ್ತವಾಗಿದೆ.
- ಎಸ್. ಭೀಮಾನಾಯ್ಕ, ಶಾಸಕ
- ಜಿ. ಸೋಮಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.