ತುಂಗಭದ್ರಾ: ಹರಿದು ಹೋಗಿದ್ದೇ ಹೆಚ್ಚು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 27
ತುಂಗಭದ್ರಾ ಜಲಾಶಯದಲ್ಲಿನ ನೀರನ್ನು 38 ವರ್ಷಗಳಲ್ಲಿ ಕೇವಲ 1 ವರ್ಷ ಮಾತ್ರ ಸಂಪೂರ್ಣ ಬಳಕೆ ಸಾಧ್ಯವಾಗಿದೆ. ಇದು ವಾಸ್ತವ ಸತ್ಯ. ಜಲಾಶಯದ ನೀರು ಪ್ರತಿವರ್ಷ ಬಳಕೆಯಾದರೂ, ಬಚಾವತ್ ಆದೇಶದಂತೆ ಹಂಚಿಕೆ ಮಾಡಿರುವ ನೀರು ಬಳಕೆಯಾಗಿಲ್ಲ.
ಜಲಾಶಯದ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಹರಿದು ಬಂದರೂ ಪ್ರವಾಹದ ಮೂಲಕ ನದಿಗೆ ಹರಿದಿರುವುದೇ ಹೆಚ್ಚು. ನೀರಾವರಿಗೆ ಸಾವಿರಾರು ಕೋಟಿ ಖರ್ಚು ಮಾಡುವ ಸರ್ಕಾರಗಳಿಗೆ, ಜಲಾಶಯಕ್ಕೆ ಹರಿದು ಬಂದಿರುವ ನೀರನ್ನು ಸಂಗ್ರಹ ಮಾಡುವ ಪರ್ಯಾಯ ವ್ಯವಸ್ಥೆ ಇಲ್ಲದಿರುವುದು ನೋವಿನ ಸಂಗತಿ.
ನೀರಿನ ಹಂಚಿಕೆ: 1976-77ರಲ್ಲಿ ತುಂಗಭದ್ರಾ ಜಲಾಶಯದ ನೀರನ್ನು ಕರ್ನಾಟಕ ಹಾಗೂ ಆಂಧ್ರಪ್ರದೇಶ ಹಂಚಿಕೆಯ ಕುರಿತಂತೆ ಬಚಾವತ್ ಆಯೋಗದ ಅಂತಿಮ ಆದೇಶ ಹೊರಬಿದ್ದಿತ್ತು. ಆದೇಶದಂತೆ ಕರ್ನಾಟಕಕ್ಕೆ 138.99 ಟಿಎಂಸಿ ಆವಿಯಾಗುವ ನೀರು ಸೇರಿದಂತೆ 151.49 ಟಿಎಂಸಿ, ಇನ್ನು ಆಂಧ್ರಪ್ರದೇಶಕ್ಕೆ 73.01 ಟಿಎಂಸಿ, ಆವಿಯಾಗುವ ನೀರು ಸೇರಿದಂತೆ 78.51 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ವಾರ್ಷಿಕವಾಗಿ 230 (ನೀರಾವರಿಗೆ 212 ಟಿಎಂಸಿ) ಟಿಎಂಸಿ ನೀರನ್ನು ಎರಡು ರಾಜ್ಯಗಳಿಗೆ ಹಂಚಿಕೆ ಮಾಡಿ 38 ವರ್ಷ ಗತಿಸಿದೆ. ಆದರೂ, ಕೇವಲ 1980-81ರಲ್ಲಿ 212 ಟಿಎಂಸಿ ನೀರು ಬಳಕೆ ಮಾಡಿದ್ದು ಬಿಟ್ಟರೆ, 37 ವರ್ಷದಲ್ಲಿ ಬಚಾವತ್ ಆದೇಶದಂತೆ ಹಂಚಿಕೆ ಮಾಡಿರುವ ನೀರನ್ನು ಎರಡು ರಾಜ್ಯಗಳಿಂದ ಬಳಕೆ ಮಾಡಲು ಸಾಧ್ಯವಾಗಿಲ್ಲ.
38 ವರ್ಷ: 1976-77, 1987-88, 1995-96, 2001-02, 2002-03, 2003-04ರಲ್ಲಿ ಮಾತ್ರ ನೀರು ಪ್ರವಾಹ ರೂಪದಲ್ಲಿ ಹರಿದು ಹೋಗಿಲ್ಲ. ಇನ್ನುಳಿದಂತೆ 32 ವರ್ಷದಲ್ಲಿ ಜಲಾಶಯದ ನೀರು ಪ್ರವಾಹದ ರೂಪದಲ್ಲಿ ನದಿಗೆ ಹರಿದು ಹೋಗಿವೆ. ಆದರೂ ಹಂಚಿಕೆಯ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗಿಲ್ಲ. ಇಂತಹ ನೀರನ್ನು ಸದ್ಬಳಕೆ ಮಾಡಿಕೊಂಡು, ಬಚಾವತ್ ಆದೇಶದಲ್ಲಿ ತಿಳಿಸುವ ನೀರಿನ ಬಳಕೆ ಮಾಡಿಕೊಳ್ಳಲು 38 ವರ್ಷದಲ್ಲಿ ಒಂದು ಪ್ರಯತ್ನವು ಆಗಿಲ್ಲ. ಇದೀಗ ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನೀರು ಸಂಗ್ರಹಿಸುವ ಕುರಿತಂತೆ ಸರ್ಕಾರ ಕೇವಲ ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳು ಆಗುತ್ತಿಲ್ಲ.
1994-95ರಲ್ಲಿ ಜಲಾಶಯದ ಸಂಗ್ರಹ ಸಾಮರ್ಥ್ಯದ ಮೂರು ಪಟ್ಟು ನೀರು (304.83 ಟಿಎಂಸಿ) ಪ್ರವಾಹದ ರೂಪದಲ್ಲಿ ನದಿಗೆ ಹರಿದು ಹೋಗಿದೆ. ಆ ವರ್ಷದಲ್ಲಿಯೂ ಕೂಡ ಬಚಾವತ್ ಆದೇಶದಂತೆ 212 ಟಿಎಂಸಿ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗಿಲ್ಲ. ಕೇವಲ 190.50 ಟಿಎಂಸಿ ನೀರು ಮಾತ್ರ ಬಳಕೆ ಮಾಡಲಾಗಿದೆ. ಇನ್ನು ಹಿಂಗಾರಿನಲ್ಲಿ ಜಲಾಶಯಕ್ಕೆ ಹರಿದು ಬರುವ ನಿರೀಕ್ಷಿತ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಹಂಚಿಕೆಯಂತೆ ನೀರಿನ ಬಳಕೆ ಸಾಧ್ಯವಾಗಿಲ್ಲ.
2012-13ರಲ್ಲಿ 14 ಟಿಎಂಸಿ ನೀರು ಪ್ರವಾಹದ ರೂಪದಲ್ಲಿ ಹರಿದು ಹೋಗಿದೆ. ಆ ವರ್ಷ ಎರಡು ರಾಜ್ಯಗಳು ಸೇರಿ ಕೇವಲ 123.71 ಟಿಎಂಸಿ ನೀರು ಮಾತ್ರ ಬಳಕೆ ಮಾಡಿವೆ. ಒಂದು ಕ್ಯುಸೆಕ್ ನೀರಿನಲ್ಲಿ 60 ರಿಂದ 70 ಎಕರೆಯಲ್ಲಿ ಬತ್ತ ಬೆಳೆಯಬಹುದಾಗಿದೆ. 11,574 ಕ್ಯುಸೆಕ್ ಸಂಗ್ರಹವಾದರೆ ಒಂದು ಟಿಎಂಸಿ ನೀರಾಗುತ್ತದೆ. ಒಂದು ಟಿಎಂಸಿ ನೀರು ಬಳಸಿದರೆ ರೈತರು ಕೋಟ್ಯಂತರ ಮೌಲ್ಯದ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ವಾಸ್ತವವನ್ನು ಸರ್ಕಾರ ಅರಿತುಕೊಂಡು, ಜಲಾಶಯದಿಂದ ಪ್ರವಾಹ ರೂಪದಲ್ಲಿ ನದಿಗೆ ಹರಿದು ಹೋಗುವ ನೀರಿನ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
ಆಹಾರ ಉತ್ಪಾದನೆ ಕೊರತೆ, ಬರ ಎದುರಾಗುತ್ತದೆ ಎಂದು ಹತ್ತಾರು ಯೋಜನೆ ಹಾಕಿಕೊಳ್ಳುವ ಸರ್ಕಾರ ತುಂಗಭದ್ರಾ ಜಲಾಶಯ ನೀರನ್ನು ಸಂಗ್ರಹಿಸಿ, ಸಂಪೂರ್ಣ ಬಳಕೆಗೆ ಮನಸ್ಸು ಮಾಡಿದರೆ, ಈ ಭಾಗದ ಜಲಾಶಯದ ಆಯಕಟ್ಟಿನ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇನ್ನು ಬಚಾವತ್ ಆದೇಶದಲ್ಲಿ ತಿಳಿಸಿರುವ ಹಂಚಿಕೆಯ ನೀರನ್ನು ಸಂಪೂರ್ಣವಾಗಿ ಬಳಸಲು ಸಾಧ್ಯವಾಗುತ್ತದೆ.
ಈ ವರ್ಷವೂ ಸುಮಾರು 211 ಟಿಎಂಸಿ ನೀರು ಪ್ರವಾಹ ರೂಪದಲ್ಲಿ ನದಿಗೆ ಹರಿಬಿಡಲಾಗಿದೆ. ನ. 24ರ ಮಟ್ಟಿಗೆ ಜಲಾಶಯದಲ್ಲಿ ಕೇವಲ 80.307 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ಬಚಾವತ್ ಆದೇಶದಂತೆ 212 ಟಿಎಂಸಿ ನೀರನ್ನು ಬಳಕೆ ಮಾಡಲು ಸಾಧ್ಯವಾಗಿಲ್ಲ. ಪ್ರವಾಹದ ಮೂಲಕ ಹರಿದು ಹೋಗುವ ನೀರನ್ನು ಸಮಾಂತರ ಜಲಾಶಯ ಮೂಲಕ ಸಂಗ್ರಹಿಸಿದರೆ ಅಥವಾ ಪ್ರವಾಹ ಕಾಲುವೆ ನಿರ್ಮಿಸಿದರೆ ನೀರಿನ ಸಮರ್ಪಕ ಬಳಕೆಯಾಗುವುದು. ಅಲ್ಲದೆ, ಬಚಾವತ್ ಆದೇಶದಂತೆ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ.
ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಈ ಬಾರಿ ಚಳಿಗಾಲ ಅಧಿವೇಶನದಲ್ಲಾದರೂ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಧ್ವನಿ ಎತ್ತುವರೇ ಎಂಬುದನ್ನು ಕಾದುನೋಡಬೇಕಾಗಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

