ಕಬ್ಬು ಮುಕ್ತ ಮಾರಾಟಕ್ಕೆ ಆಗ್ರಹ: ಹೆದ್ದಾರಿ ಬಂದ್
ಹೊಸಪೇಟೆ: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೈತರು ಬೆಳೆದ ಕಬ್ಬನ್ನು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಐಎಸ್ಆರ್ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ರು. 21 ಕೋಟಿ ಬಾಕಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ವಿಠಲ್ ಅರಭಾವಿ ಆತ್ಮಹತ್ಯೆಯನ್ನು ರಾಜ್ಯ ಸರ್ಕಾರ ಹೊಣೆ ಹೊತ್ತು ಆತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ರಾಷ್ಟ್ರೀಯ ಹೆದ್ದಾರಿ-13ನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಜಿಲ್ಲಾಡಳಿತ ವಿಫಲ: ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಬ್ಬನ್ನು ಮುಕ್ತ ಮಾರಾಟ ಮಾಡಲು ಐಎಸ್ಆರ್ ಕಾರ್ಖಾನೆಯವರು ಅವಕಾಶ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರೈತರನ್ನು ಎದುರಿಸಲು ಕಾರ್ಖಾನೆಯವರು ಕೋರ್ಟ್ ಮೆಟ್ಟಿಲೇರಿದ್ದಾರೆ. ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಿಲ್ಲಾಡಳಿತ ಕೋರ್ಟ್ನಲ್ಲಿ ಸರಿಯಾದ ಮಾಹಿತಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಬಳ್ಳಾರಿ ಜಿಲ್ಲಾಡಳಿತಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ ಎಂದು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸರ್ಕಾರಕ್ಕೆ ಕಾಳಜಿ ಇಲ್ಲ: ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ಕಬ್ಬಿಗೆ ಬೆಂಬಲ ಬೆಲೆ ಮತ್ತು ಕಬ್ಬು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಲು ಹೋರಾಡುತ್ತೇನೆ. ಈ ಕಾರ್ಖಾನೆ ವ್ಯಾಪ್ತಿಯಿಂದ ಸುಮಾರು 7.5 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ಆದರೆ ಐಎಸ್ಆರ್ ಕಾರ್ಖಾನೆಗೆ ಕೇವಲ 3.5 ಲಕ್ಷ ಟನ್ ಕಬ್ಬನ್ನು ನುರಿಸುವ ಸಾಮರ್ಥ್ಯವಿದೆ. ಉಳಿದ ಕಬ್ಬನ್ನು ಮುಕ್ತ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ಬಿ. ರಾಜಶೇಖರ ಗೌಡ, ಜಿಲ್ಲಾ ಕಾರ್ಯಧ್ಯಕ್ಷ ದರೂರು ಪುರುಷೋತ್ತಮಗೌಡ, ಜಿಲ್ಲಾ ಕಾರ್ಯದರ್ಶಿ ಕೊಟ್ಗಿ ಲೋಕೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ, ಕಾಕುಪ್ಪಿ ಬಸವರಾಜ, ಶ್ರೀಪಾದಸ್ವಾಮಿ, ಮಾಬುಸಾಬ್, ನಾಗರಾಜ, ಮಹೇಶ್ವರಸ್ವಾಮಿ, ಎಸ್. ಕೃಷ್ಣನಾಯ್ಕ, ತಳವಾರ ಹುಲುಗಪ್ಪ, ಹಂಪಾಪಟ್ಟಣದ ಭೀಮಪ್ಪ, ವರದಾಪುರ ಕುಮಾರ್, ಕುಪ್ಪಿನಕೇರಿ ವೆಂಕಟೇಶ್, ಎಂ. ವಿಶ್ವನಾಥ ಶೆಟ್ಟಿ, ಎಚ್. ಪಾಂಡುರಂಗ ಶೆಟ್ಟಿ, ಡಿ. ರಾಘವೇಂದ್ರ ಶೆಟ್ಟಿ, ನರಸಿಂಹಮೂರ್ತಿ, ಎಂ. ಪ್ರಕಾಶ್ ಶೆಟ್ಟಿ, ಜಿ. ಭೀಮರಾಜ್ ಶೆಟ್ಟಿ, ಎಂ.ಎಸ್. ಶ್ರೀನಿವಾಸ, ಎಂ. ಗುರುರಾಜ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಗೆ ಮರಿಯಮ್ಮನಹಳ್ಳಿ ಕಿರಾಣಿ ವರ್ತಕರ ಸಂಘ, ಬಟ್ಟೆ ವ್ಯಾಪಾರಿಗಳು, ರಸಗೊಬ್ಬರ ಅಂಗಡಿಗಳು, ಎಲೆಕ್ಟ್ರಿಕಲ್ಸ್ ಅಂಗಡಿಗಳು ಸೇರಿದಂತೆ ಹಲವರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಬೆಂಬಲ ಸೂಚಿಸಿದರು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದರಿಂದ ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ವಿವಿಧೆಡೆಗೆ ತೆರಳಿಬೇಕಿದ್ದ ಪ್ರಯಾಣಿಕರಿಗೆ ಧರಣಿ ಬಿಸಿ ತಟ್ಟಿತು. ಎಸಿ ಸುನೀಲ್ಕುಮಾರ್, ತಹಸೀಲ್ದಾರ್ ರಮೇಶ್ ಕೋನರಡ್ಡಿ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದರು.
ಡಿ. 5ರಂದು ಐಎಸ್ಆರ್ ಕಾರ್ಖಾನೆ ಬಗ್ಗೆ ಕೋರ್ಟ್ನಲ್ಲಿ ವ್ಯಾಜ್ಯವಿದೆ. ಅಂದು ಏನೇ ತೀರ್ಮಾನ ಹೊರ ಬಂದರೂ ಡಿ. 6ರಿಂದ ಕಾನೂನು ಭಂಗ ಚಳುವಳಿ ಮೂಲಕ ಕಬ್ಬನ್ನು ಮುಕ್ತ ಮಾರಾಟಕ್ಕೆ ಸಾಗಸಿಲಾಗುತ್ತದೆ. ಈ ಹಿನ್ನಲೆಯಲ್ಲಿ ಎಸಿ ಅವರಿಗೆ ಡಿ. 5ರ ವರೆಗೆ ಅವಧಿ ನೀಡಲಾಗಿದೆ. ಡಿ. 6ರಿಂದ ಕಬ್ಬು ಮಾರಾಟಕ್ಕೆ ರೈತರು ಮುಂದಾಗಲಿದ್ದಾರೆ.
- ಚಾಮರಸ ಮಾಲೀಪಾಟೀಲ್,
ರೈತ ಸಂಘದ ರಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

