ಅಭಿವೃದ್ಧಿ ಕಾಣದ ಗಾಂಧೀಜಿ ಚಿತಾಭಸ್ಮವಿರುವ ಸ್ಮಾರಕ
ಕೂಡ್ಲಿಗಿ: ದೇಶದಲ್ಲಿಯೇ ಅಪರೂಪವೆನಿಸುವ ಕೂಡ್ಲಿಗಿಯಲ್ಲಿನ ಗಾಂಧೀಜಿ ಚಿತಾಭಸ್ಮ ಇರುವ ಹುತಾತ್ಮರ ಸ್ಮಾರಕವನ್ನು ಸರ್ಕಾರ ಈಗಾಗಲೇ ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಿದ್ದರೂ ಇದೂವರೆಗೂ ಅಭಿವೃದ್ಧಿ ನೆಪದಲ್ಲಿ ಬರೀ ಅನಗತ್ಯ ವಾದ ವಿವಾದಗಳು ಸೃಷ್ಟಿಯಾಗಿ ಚುನಾವಣೆ, ಗಾಂಧಿ ಜಯಂತಿ ಹಾಗೂ ಸ್ವಾತಂತ್ರ್ಯೋತ್ಸವ ದಿನದಂದು ಮಾತ್ರ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ನೆನಪಾಗುವ ಈ ಸ್ಮಾರಕ ಮಾತ್ರ ಇಂದಿಗೂ ಅಭಿವೃದ್ಧಿಯಾಗದೇ ಅನಾಥವಾಗಿ ಉಳಿದಿದ್ದು ದುರಂತ.
ಕೂಡ್ಲಿಗಿಯ ಗುಡೇಕೋಟೆ ರಸ್ತೆಯಲ್ಲಿನ ಇಂದಿನ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಅಂದಿನ ಕಾಂಗ್ರೆಸ್ ಯುವಕರು ಬಳ್ಳಾರಿ ಲೋಕಸಭಾ ಸದಸ್ಯ ಟೇಕೂರ್ ಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಗಾಂಧೀಜಿ ಅವರ ಚಿತಾಭಸ್ಮ ಬಳ್ಳಾರಿಗೆ ತಂದಿದ್ದರು. ನಂತರ ಕೆಲ ಕಾಲ ಬಳ್ಳಾರಿಯ ಮಲ್ಲಸಜ್ಜನ ವ್ಯಾಯಾಮ ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಕೂಡ್ಲಿಗಿ ಪಟ್ಟಣಕ್ಕೆ ತರಲಾಯಿತು. ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಕೂಡ್ಲಿಗಿಯ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಭೇಟಿ ನೀಡಿ ಅದರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದರು. ಆಗ ಈ ಸ್ಮಾರಕ ಅಮೃತಶಿಲೆಯ ಮಂಟಪದ ರೂಪ ಪಡೆಯಿತು. ಆದರೆ, ಇಲ್ಲಿವರೆಗೂ ಈ ಹುತಾತ್ಮರ ಸ್ಮಾರಕ ಅಭಿವೃದ್ಧಿ ಕಾಣದೇ ಅನಾಥವಾಗಿಯೇ ಇದೆ.
ಮದ್ಯಪಾನ ಅಡ್ಡೆ: ಸದ್ಯ ಸ್ಮಾರಕದ ಸುತ್ತ ಸಂಜೆಯಾದೊಡನೆ ಮದ್ಯಪಾನ, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಡುತ್ತಿದೆ. ಇಲ್ಲಿಯ ನಾಗರಿಕರು ಗಾಂಧೀಜಿ ಚಿತಾಭಸ್ಮ ಸ್ಮಾರಕದ ಅಭಿವೃದ್ಧಿಗೆ ಹಲವು ವರ್ಷಗಳಿಂದಲೂ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರೂ, ಯಾರೂ ಕೂಡ ರಾಷ್ಟ್ರಪಿತನ ಸ್ಮಾರಕದ ಅಭಿವೃದ್ಧಿ ಬಗ್ಗೆ ಗಮನಹರಿಸಲಿಲ್ಲ.
ದೇಶಭಕ್ತರಲ್ಲಿ ಬೇಸರ: ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಇಚ್ಛಾಶಕ್ತಿ ತೋರಿ ರು. 1 ಕೋಟಿ ಮುಂಜೂರು ಮಾಡಿಸಿದ್ದರೂ ಕಾಮಗಾರಿ ಮಾಡುವಾಗ ಪಕ್ಕದ ಐತಿಹಾಸಿಕ ಮಹದೇವ ಮೈಲಾರ ಕ್ರೀಡಾಂಗಣದ ಸ್ವಲ್ಪಭಾಗ ಅಭಿವೃದ್ಧಿಗೆ ಬಳಸಿಕೊಳ್ಳಲು ಮುಂದಾದಾಗ ಇಲ್ಲಿನ ಜನತೆ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತೆ ಈ ಸ್ಮಾರಕದ ಅಭಿವೃದ್ಧಿಗೆ ಅಡ್ಡಿ ಉಂಟಾಯಿತು.
ಹುತಾತ್ಮರ ಸ್ಮಾರಕವೂ ಹೌದು: ಗಾಂಧೀಜಿ ಚಿತಾಭಸ್ಮವಿರುವ ಸ್ಥಳ ಕೇವಲ ಸ್ಮಾರಕವಾಗಿರದೆ 1850ರಿಂದ 1947ರ ವರೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹುತಾತ್ಮರ ನೆನಪಿಗಾಗಿ ಹುತಾತ್ಮರ ಸ್ಮಾರಕವೂ ಆಗಿದೆ ಎನ್ನುವುದು ಮತ್ತೊಂದು ವಿಶೇಷ. ಜೂನ್ 2006ರಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಜಿ. ವಾಲಿ ಅವರು ಪೌರಾಡಳಿತ ನಿರ್ದೇಶಕರ ಖಾತೆಯಲ್ಲಿರಿಸಿದ ಸಾಮಾನ್ಯ ಉದ್ದೇಶದ ನಿಧಿಯಿಂದ ಸ್ಮಾರಕದ ದುರಸ್ತಿಗಾಗಿ ರು. 10 ಲಕ್ಷ ಅನುದಾನ ಬಿಡುಗಡೆ ಮಾಡಿದ ಬಗ್ಗೆ ಡಿಸಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಚಿತಾಭಸ್ಮ ಸ್ಮಾರಕ ರಾಷ್ಟ್ರೀಯ ಸ್ಮಾರಕವಾಗಿದೆ ಎಂಬ ಬಗ್ಗೆಯೂ ಸೂಚಿಸಲಾಗಿದೆ.
ಸ್ಮಾರಕದ ಸುತ್ತ ದೇಶಪ್ರೇಮ ಬಿಂಬಿಸುವ ವಾತಾವರಣ ನಿರ್ಮಿಸಿ ದೇಶಭಕ್ತರ ಪುಸ್ತಗಳಿರುವ ಗ್ರಂಥಾಲಯ, ಸ್ಮಾರಕದ ಸುತ್ತ ಉದ್ಯಾನವನ, ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು, ಮೇಲ್ಛಾವಣಿ, ವ್ಯವಸ್ಥಿತ ರಸ್ತೆ ನಿರ್ಮಿಸಬೇಕಿದೆ. ಆದರೆ ಸ್ಮಾರಕದ ಮೂಲ ಸ್ವರೂಪಕ್ಕೆ ಧಕ್ಕೆ ತರದಂತೆ ನೋಡಿಕೊಂಡರೆ ಸಾಕು ಎನ್ನುವುದು ಇಲ್ಲಿಯ ದೇಶಭಕ್ತರ ಕಳಕಳಿ.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

