ಬಳ್ಳಾರಿ

ಅರಣ್ಯಪ್ರದೇಶ ನಾಶ: ಹಂಪಿ ವಿವಿ ಕುಲಪತಿ ವಿಷಾದ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 2
ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾ 37ರಷ್ಟು ಅರಣ್ಯಪ್ರದೇಶವಿತ್ತು. ಆದರೆ, ಇಂದು ಶೇಕಡಾ 12ರಷ್ಟು ಮಾತ್ರ ಉಳಿದಿರುವುದು ಖೇದಕರ ಸಂಗತಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಕಮಲಾಪುರದ ದರೋಜಿ ಕರಡಿಧಾಮ ಹಾಗೂ ಸ್ವ್ಯಾನ್ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ 59ನೇ ವನ್ಯಜೀವಿ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ನಾಶಕ್ಕೆ ಮಾನವನ ದುರಹಂಕಾರವೇ ಕಾರಣವಾಗಿದ್ದು, ಭೂಮಿಯ ಮೇಲೆ ತನಗಷ್ಟೇ ಜೀವಿಸುವ ಹಕ್ಕಿದೆ ಎಂದು ತಿಳಿದು ಅದರ ವನ್ಯ ಮತ್ತು ಅದರ ಅವಲಂಬಿತ ಜೀವಸಂಕುಲದ ನಾಶಕ್ಕೆ ಕಾರಣವಾಗಿ, ತಾನೂ ವಿನಾಶದ ಹಾದಿಯಲ್ಲಿ ಸಾಗಿದ್ದಾನೆ. ಬುಡಕಟ್ಟು ಜನರು ಬೇಟೆಯಾಡುವುದನ್ನು ಆಹಾರಕ್ಕೆ ಬಳಸಿದರು. ಆದರೆ, ಭಾರತಕ್ಕೆ ಬಂದ ಬ್ರಿಟಿಷರು ಬಂದೂಕು ತಂದು ಪ್ರಾಣಿ ಬೇಟೆಯನ್ನು ಮೋಜಿಗಾಗಿ ಬಳಸಿದರು. ಬೇಟೆಯನ್ನು ಪ್ರಶ್ನಿಸುವ ಮನೋಭಾವವನ್ನು ಹೊಂದುವ ಮೂಲಕ ಅದನ್ನು ತಡೆದು ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕೆಂದರು.
ಜಿಲ್ಲಾ ವನ್ಯಜೀವಿ ಪರಿಪಾಲಕ ಸಂತೋಷ್ ಮಾರ್ಟಿನ್ ನಶಿಸಿಹೋಗುತ್ತಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಾಗೂ ರಣಹದ್ದುಗಳ ಬಗ್ಗೆ ಮಾತನಾಡಿದರು. ಪ್ರಾದೇಶಿಕ ಅರಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಪಿ.ಪ್ರಕಾಶ್, ದರೋಜಿ ಕರಡಿ ಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ಜಾಲಿಹಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಲಯ ಅರಣ್ಯಾಧಿಕಾರಿ (ಕರಡಿಧಾಮ) ಎಂ. ನಾಗರಾಜ್, ಹೊಸಪೇಟೆ ಪ್ರಾದೇಶಿಕ ಅರಣ್ಯವಲಯದ ವಲಯ ಅರಣ್ಯಾಧಿಕಾರಿ ಶ್ರೀಧರ್, ಕಮಲಾಪುರ ಠಾಣೆ ಪಿಎಸ್‌ಐ ಹನುಮಂತಪ್ಪ, ಉರಗ ತಜ್ಞ ವೇಣುಗೋಪಾಲ ನಾಯ್ಡು, ಕಮಲಾಪುರ ಸರ್ಕಾರಿ ಪ್ರೌಢಶಾಲ ಮುಖ್ಯೋಪಾಧ್ಯಾಯ ಅನಂತರಾವ್, ಪರಿಸರವಾದಿ ಪಂಪಯ್ಯಸ್ವಾಮಿ ಮಳಿಮಠ್ ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಎಂ. ನಾಗರಾಜ್ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಈರಪ್ಪ ಎಸ್. ಹಳಿಯಾಳ್ ವಂದಿಸಿದರು.  ನಂತರ ಕರಡಿಧಾಮ ಸುತ್ತಮುತ್ತಲಿನ ಗ್ರಾಮಗಳ ಶಾಲಾ ಮಕ್ಕಳಿಂದ ಪರಿಸರ ಕುರಿತ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆ ನಡೆಯಿತು.
ಸಂಜೆ ರಂಗಕರ್ಮಿ ಶಂಕರ ನಾಯ್ಡು, ಮೃತ್ಯುಂಜಯ ಗೌಡ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.