ಬಳ್ಳಾರಿ

ಪ್ರಿಟಿಂಗ್ ಪ್ರೆಸ್‌ಗಳಿಗೂ ಸಿಬಿಐ ನೋಟಿಸ್

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ,ಅ. 2
ಅಕ್ರಮ ಗಣಿಗಾರಿಕೆ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಜಲುಗಳಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಬಂಧಿತರು ನೀಡುವ ಮಾಹಿತಿ ಆಧರಿಸಿ, ಅದಿರು ಸಾಗಾಟಕ್ಕೆ ಸಂಬಂಧಿಸಿದಂತೆ ನಕಲಿ ಪರ್ಮಿಟ್‌ಗಳನ್ನು ಮುದ್ರಿಸಿದ ಕೆಲ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಸಿಬಿಐ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇದು ಸಹಜವಾಗಿ ಇಂತಹ ಟ್ರೇಡರ್ಸ್‌ಗಳೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿರುವ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.
ನೋಟಿಸ್ ಜಾರಿ: ಗಣಿ ಅಕ್ರಮತೆಯಲ್ಲಿ ಬಂಧಿತ ಆರೋಪಿಗಳು ಯಾರು ಯಾರೊಂದಿಗೆ ವ್ಯವಹರಿಸಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಾರೋ ಎಂಬ ಆತಂಕ ಶುರುವಾಗಿದೆ. ಬಂಧಿತರ ಮಾಹಿತಿಯನ್ನಾಧರಿಸಿ, ವಿಚಾರಣೆಯ ಆಳಕ್ಕೆ ಇಳಿಯುತ್ತಿದ್ದಾರೆ ಸಿಬಿಐ ಅಧಿಕಾರಿಗಳು. ಮುಂದುವರಿದು ಇದೀಗ ನಕಲಿ ಪರ್ಮಿಟ್ ಮುದ್ರಿಸಿಕೊಟ್ಟ ಪ್ರಿಂಟಿಂಗ್ ಪ್ರೆಸ್‌ಗಳಿಂದ ಮಾಹಿತಿ ಪಡೆಯಲು ನೋಟಿಸ್ ಜಾರಿ ಮಾಡಿರುವುದು ನೋಟಿಸ್ ಪಡೆದ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಆತಂಕ ಶುರುವಾಗಿದೆ. ವಿಚಾರಣೆಗೆ ಕೆರೆಸಿ ಬಂಧಿಸುತ್ತಿರುವ ಸಿಬಿಐ ಅಧಿಕಾರಿಗಳು ತಮಗೇನು ಮಾಡುತ್ತಾರೆ ಎಂಬ ಆತಂಕ ಸೃಷ್ಟಿಯಾಗಿದೆ.
ನಕಲಿ ಪರ್ಮಿಟ್ ಹಾವಳಿ: ಭೂಮಿಯಿಂದ ತೆಗೆದ ಅದಿರನ್ನು ಸಾಗಾಣಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ಪರ್ಮಿಟ್ ಪಡೆಯಬೇಕಿತ್ತು. ಇದರಿಂದಾಗಿ ಆಯಾ ಕಂಪನಿಗೆ ಅದಿರು ತೆಗೆಯಲು ಇಲಾಖೆಯಿಂದ ಎಷ್ಟು ಪರ್ಮಿಟ್ ನೀಡಲಾಗಿತ್ತು ಎಂಬ ಮಾಹಿತಿ ಸಿಗುತ್ತದೆ. ಅಲ್ಲದೇ ಎಷ್ಟು ಅದಿರು ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಅಧಿಕೃತವಾಗಿ ನೀಡಬೇಕಾಗುತ್ತದೆ. ಇದರಿಂದ ಅಧಿಕೃತವಾದ ಮಾಹಿತಿ ಸರ್ಕಾರಕ್ಕೆ ಹೋಗುವುದರಿಂದ ತೆರಿಗೆ ಸೇರಿದಂತೆ ಎಲ್ಲಾ ವಿಷಯಗಳು ದಾಖಲಾಗುತ್ತವೆ. ಎಲ್ಲವನ್ನೂ ಅಧಿಕೃತವಾಗಿ ತೆರಿಗೆ ಮತ್ತಿತರ ಸಮಸ್ಯೆಗಳು ಆಗುವುದರಿಂದ ಕೆಲ ಟ್ರೇಡರ್ಸ್‌ಗಳು ಅಡ್ಡ ದಾರಿ ಹಿಡಿಯಲು ಮುಂದಾಗಿ, ಅಕ್ರಮ ಸಾಗಾಣಿಕೆ ಮೂಲಕ ದುಡ್ಡು ಗಳಿಸಲು ಮುಂದಾದವು.
ಪ್ರಶ್ನಾತೀತವಾಗಿದ್ದ ಸಾಗಾಣಿಕೆ: ಗಣಿ ಭೂಮ್ ಇರುವ ಕಾಲಕ್ಕೆ ಯಾವ ಗಣಿಗಾರಿಕೆ ಪ್ರದೇಶದಲ್ಲಿ ಅದಿರನ್ನು ತೆಗೆಯಲಾಗಿದೆ, ಯಾವ ಪರ್ಮಿಟ್‌ಗಳ ಮೂಲಕ ಸಾಗಾಣಿಕೆಯಾಗುತ್ತಿತ್ತು ಎನ್ನುವುದು ಪ್ರಶ್ನಾತೀತ. ಇದರಿಂದಾಗಿ ಕೆಲ ಗಣಿ ಮಾಲೀಕರು, ಟ್ರೇಡರ್ಸ್‌ಗಳು ಆಡಿದ್ದೇ ಆಟವಾಗಿತ್ತು. ಯಾವೊಬ್ಬ ಅಧಿಕಾರಿಗಳು ಇದನ್ನು ಪ್ರಶ್ನಿಸುವ ಧೈರ್ಯ ತೋರುತ್ತಿರಲಿಲ್ಲ. ಕಾರಣ ಇಡೀ ಸರ್ಕಾರ ಗಣಿ ಲಾಬಿ ಕೈಯಲ್ಲಿತ್ತು. ಇನ್ನು ರಾಜ್ಯ ಮಟ್ಟದ ಅಧಿಕಾರಿಗಳೇ ಇವರನ್ನು ಪ್ರಶ್ನಿಸದಿರುವಾಗ, ಜಿಲ್ಲಾ ಮಟ್ಟದ ಅಧಿಕಾರಿಗಳು, ಕೆಳ ಮಟ್ಟದ ಅಧಿಕಾರಿಗಳು ತಾನೇ ಏನು ಮಾಡಿಯಾರು? ಇಂತಹ ಸಂದರ್ಭದಲ್ಲಿ ಯಾವುದು ನಕಲಿ, ಯಾವುದು ಅಸಲಿ ಪರ್ಮಿಟ್ ಎನ್ನುವುದು ತಿಳಿಯಲು ಕಷ್ಟವಾಗುತ್ತಿತ್ತು. ಇದೀಗ ತನಿಖೆ ನಡೆಯುತ್ತಿದೆ ಎನ್ನುವ ಕಾರಣಕ್ಕೆ ನಕಲಿ ಪರ್ಮಿಟ್‌ಗಳ ಸತ್ಯ ಬಹಿರಂಗವಾಗಿದೆ.
ವಿಚಾರಣೆ ನಡೆಸಲು ನೋಟಿಸ್ ಜಾರಿ: ಕೆಲ ಗಣಿ ಕಂಪನಿಗಳಲ್ಲಿ ಅನಧಿಕೃತವಾಗಿ ಅದಿರನ್ನು ತೆಗೆದಿದ್ದು, ಇಂತಹ ಜಿರೋ ಮೆಟರಿಯಲ್‌ನ್ನು ಕೆಲವು ಟ್ರೇಡರ್ಸ್‌ಗಳು ತಾವೇ ನಕಲಿ ಪರ್ಮಿಟ್‌ಗಳನ್ನು ಮುಂದ್ರಿಸಿಕೊಂಡು, ನಕಲಿ ಪರ್ಮಿಟ್‌ಗಳನ್ನು ಹೊಂದಿ ಜಿರೋ ಮೆಟರಿಯಲ್ ಸಾಗಾಣಿಕೆ ಮಾಡುವ ದಂಧೆ ಮಾಡಿದ್ದಾರೆ ಎಂಬುದು ತನಿಖೆ ಸಂದರ್ಭದಲ್ಲಿ ಮಾಹಿತಿ ಲಭ್ಯವಾಗಿದೆ.
ಇದರಿಂದ ಇದೀಗ ಇಂತಹ ನಕಲಿ ಪರ್ಮಿಟ್‌ಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬ ಮಾಹಿತಿ ಪಡೆದು ಹೊಸಪೇಟೆಯ ಕೆಲ ಮುದ್ರಣಗಾರರ ವಿಚಾರಣೆ ನಡೆಸಲು ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.


-ವೈ.ಎಂ. ಸಿದ್ದಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.