ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಅ. 5
6 ತಿಂಗಳಿನಿಂದ ಬಾಕಿ ಇರುವ ಸಹಾಯಧನ ತಕ್ಷಣ ಬಿಡುಗಡೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ನೂರಾರು ಕಾರ್ಯಕರ್ತೆಯರು ಶನಿವಾರ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಶಾಖೆಯ ಕರೆಯ ಮೇರೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದೇವದಾಸಿ ವಿಮೋಚನಾ ಸಂಘದ ಕಾರ್ಯಕರ್ತೆಯರು ಪಟ್ಟಣದ ರಾಮನಗರದ ಶ್ರೀ ಈಶ್ವರ ದೇವಸ್ಥಾನದ ಆವರಣದಿಂದ ತಾಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದರು,.
ಈ ಸಂದರ್ಭದಲ್ಲಿ ತಕ್ಷಣ ಸಹಾಯಧನ ಬಿಡುಗಡೆ ಮಾಡುವುದು ಎಲ್ಲ ದೇವದಾಸಿಯರಿಗೆ ಕಡ್ಡಾಯವಾಗಿ ನಿವೇಶನ ಸಹಿತ ಮನೆ ನೀಡಬೇಕೆಂಬ ಘೋಷಣೆಗಳನ್ನು ಕೂಗಿದರು.
ತಾಲೂಕು ಕಚೇರಿ ಆವರಣದಲ್ಲಿ ಬಹಿರಂಗಸಭೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಬಹಿರಂಗಸಭೆಯನ್ನುದ್ದೇಶಿಸಿ ಸಂಘದ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ ಮಾತನಾಡಿ, ಹಲವರ ಅವಿರತ ಹೋರಾಟ, ಧರಣಿ ಸತ್ಯಾಗ್ರಹಗಳ ನಂತರ ರಾಜ್ಯದಲ್ಲಿನ ದೇವದಾಸಿಯರಿಗೆ ತಿಂಗಳಿಗೆ ರು. 400ನಂತೆ ಸಹಾಯಧನ ನೀಡಲು ಸರ್ಕಾರ ಒಪ್ಪಿಕೊಂಡಿತು. ಒಂದು ವರ್ಷ ಮಾತ್ರ ಸರ್ಕಾರ ತಾನು ಒಪ್ಪಿಕೊಂಡಂತೆ ಸಹಾಯಧನ ವಿತರಿಸಿದ್ದು, ಬಿಟ್ಟರೆ ಕಳೆದ ಆರು ತಿಂಗಳಿನಿಂದೀಚಿಗೆ ಸಹಾಯಧನ ವಿತರಣೆ ನಿಲ್ಲಿಸಿದೆ. ಇದರಿಂದಾಗಿ ರಾಜ್ಯದ ದೇವದಾಸಿ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಕೂಡಲೇ ಸರ್ಕಾರ ಸಹಾಯಧನ ವಿತರಿಸಲು ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿದರು.
ಮುಖ್ಯವಾಗಿ ಈ ಬಾರಿ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಮುಂಗಾರು ಮಳೆ ಕೈಕೊಟ್ಟು ಕೃಷಿ ಕೆಲಸ ಕಾರ್ಯಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳಲ್ಲಿ ಉಳ್ಳವರಿಗೆ ಮಾತ್ರ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ದೇವದಾಸಿಯರಿಗೆ ಇನ್ನೂ ಕೂಡ ಬಿಪಿಎಲ್ ಕಾರ್ಡ್ ವಿತರಣೆಯಾಗಿಲ್ಲ. ಹೀಗಾಗಿ ಈ ಎಲ್ಲ ಮಹಿಳೆಯರಿಗೆ ಪಡಿತರ ಕಾರ್ಡ್ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.
ಸಂಘದ ತಾಲೂಕಾಧ್ಯಕ್ಷೆ ಎಚ್.ಬಿ. ಮೈಲಮ್ಮ, ಕಾರ್ಯದರ್ಶಿ ಪಿ. ಚಾಂದಬಿ, ಮುಖಂಡರಾದ ಮಲ್ಲಮ್ಮ, ಹನುಮಕ್ಕ, ನಾಗರತ್ನಮ್ಮ, ಸಿಪಿಎಂ ಪಕ್ಷದ ಕಾರ್ಯದರ್ಶಿ ರಂಗಪ್ಪದಾಸರ್, ಸಿಐಟಿಯು ಮುಖಂಡ ಎಸ್. ಜಗನ್ನಾಥ, ಪ್ರಾಂತ ರೈತ ಸಂಘದ ಕಾರ್ಯದರ್ಶಿ ಕೊಟಗಿ ಮಲ್ಲಿಕಾರ್ಜುನ, ಗ್ರಾಪಂ ಸದಸ್ಯ ಓ. ತಿಂದಪ್ಪ ಮುಂತಾದವರು ಪ್ರತಿಭಟನೆ ಮುಖಂಡತ್ವ ವಹಿಸಿದ್ದರು.
ಹಲವರ ಅವಿರತ ಹೋರಾಟ, ಧರಣಿ ಸತ್ಯಾಗ್ರಹಗಳ ನಂತರ ರಾಜ್ಯದಲ್ಲಿನ ದೇವದಾಸಿಯರಿಗೆ ತಿಂಗಳಿಗೆ ರು. 400ನಂತೆ ಸಹಾಯಧನ ನೀಡಲು ಸರ್ಕಾರ ಒಪ್ಪಿಕೊಂಡಿತು. ಒಂದು ವರ್ಷ ಮಾತ್ರ ಸರ್ಕಾರ ತಾನು ಒಪ್ಪಿಕೊಂಡಂತೆ ಸಹಾಯಧನ ವಿತರಿಸಿದ್ದು, ಬಿಟ್ಟರೆ ಕಳೆದ ಆರು ತಿಂಗಳಿನಿಂದೀಚಿಗೆ ಸಹಾಯಧನ ವಿತರಣೆ ನಿಲ್ಲಿಸಿದೆ. ಇದರಿಂದಾಗಿ ರಾಜ್ಯದ ದೇವದಾಸಿಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
- ಬಿ. ಮಾಳಮ್ಮ,
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ
ದೇವದಾಸಿಯರ ಬೇಡಿಕೆಗಳು
6 ತಿಂಗಳಿನಿಂದ ಬಾಕಿ ಇರುವ ಸಹಾಯಧನ ಬಿಡುಗಡೆ, 2012-13ನೇ ಸಾಲಿನಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ಗಳಿಗೆ ಸಹಾಯಧನ ಬಿಡುಗಡೆ, ನಿವೇಶನ ಹೊಂದಿರುವ ದೇವದಾಸಿಯರು ವಸತಿ ಸೌಲಭ್ಯಕ್ಕೆ ಅರ್ಜಿ ಹಾಕಿದರೆ ಕೂಡಲೇ ಅವರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಬೇಕು. ಎಲ್ಲ ದೇವದಾಸಿಯರಿಗೆ ಬಿಪಿಎಲ್ ಪಡಿತರ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

