ಬಳ್ಳಾರಿ

ಸಚಿವರ ಕ್ಷೇತ್ರದಲ್ಲಿ ಅನ್ನಭಾಗ್ಯಕ್ಕೆ ಕನ್ನ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 8
ಹಸಿವುಮುಕ್ತ ರಾಜ್ಯ ಮಾಡಬೇಕೆಂಬ ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಸಿಗಬೇಕಿದ್ದ ಅಕ್ಕಿ ಮಧ್ಯವರ್ತಿಗಳ ಪಾಲಾಗಿದ್ದು, ಬಡವರ ಅನ್ನಕ್ಕೆ ಕನ್ನ ಹಾಕಿರುವ ಘಟನೆ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ನಡೆದಿದೆ.
ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಹ ಫಲಾನುಭವಿಗಳಿಗೆ ಕೆಜಿಗೆ ರು. 1 ಅಕ್ಕಿ, ಗೋದಿ ಸಮರ್ಪಕ ವಿತರಣೆಯಾಗದೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಮೋಸದ ದಂಧೆ ಕುರಿತು ಸಾಕಷ್ಟು ದೂರುಗಳಿವೆ. ಆದರೆ ಆಹಾರ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ವರೆಗೂ ಯಾವ ಕ್ರಮ ಕೈಗೊಂಡಿಲ್ಲ.
ಪಟ್ಟಣದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿ ಅರ್ಹ ಬಿಪಿಎಲ್ ಮತ್ತು ಅನ್ನ ಅಂತ್ಯೋದಯ ಫಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳ ಆಹಾರ ಧಾನ್ಯ ವಿತರಣೆ ಮಾಡದ ಕಾರಣ ಸುಮಾರು ನೂರಾರು ಫಲಾನುಭವಿಗಳು ಪ್ರತಿಭಟನೆ ಮಾಡಿದ್ದರು. ನ್ಯಾಯಬೆಲೆ ಅಂಗಡಿ ಸಿಬ್ಬಂದಿ ವಿರುದ್ಧ ದೂರುಗಳ ಸುರಿಮಳೆಯಾಗಿದ್ದರಿಂದ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಬಡವರ ಅನ್ನಕ್ಕೆ ಕನ್ನ ಹಾಕಿ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಪಟ್ಟಣದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ಕಾರ್ಡ್‌ದಾರರಿಗೆ ಅಗತ್ಯ ಆಹಾರ ಧಾನ್ಯಗಳನ್ನು ಇಲಾಖೆಯು ಪ್ರಮಾಣದ ಪ್ರಕಾರ ಬಿಡುಗಡೆಗೊಳಿಸಿ ಪುಸ್ತಕದ ಲೆಕ್ಕದ ಪ್ರಕಾರ ಹೊಂದಾಣಿಕೆ ಮಾಡಿಕೊಂಡಿದೆ. ಆದರೆ ವಾಸ್ತವವಾಗಿ ಈ ನ್ಯಾಯಬೆಲೆ ಅಂಗಡಿಗೆ ಬರುವ ಮುನ್ನವೇ 50ಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿಯನ್ನು ಮಧ್ಯವರ್ತಿಗಳು ಮತ್ತು ಪ್ರಭಾವಿಗಳು ಬೇರೆಡೆ ಸಾಗಿಸಿದ್ದಾರೆ ಎಂಬುದು ಫಲಾನುಭವಿಗಳ ಆರೋಪ.
ಕೇಳೋರೆ ಇಲ್ಲ: ಅಲ್ಲದೇ ತಾಲೂಕಿನ ಮೂಲೆಕಟ್ಟಿನ ಹಳ್ಳಿಗಳಲ್ಲಿ ಯಾರು ಕೇಳೋರಿಲ್ಲದೆ ಅವರು ಮಾಡಿದ್ದೆ ಕಾನೂನು ಆಡಿದ್ದೇ ಆಟ ಎನ್ನುವಂತಾಗಿದೆ. ಇವರು ಮಾಡಿದ್ದೆ ಸರಿ ಎಂದು ಒಪ್ಪಿಕೊಳ್ಳುವ ಮುಗ್ಧ ಜನತೆ ಅಲ್ಲಿ ಹೆಚ್ಚು. ನ್ಯಾಯಬೆಲೆ ಅಂಗಡಿ ಸಿಬ್ಬಂದಿ ವಿರುದ್ಧ ಗಲಾಟೆ, ತಂಟೆ ತಕರಾರು ಮಾಡಿದರೆ ಮುಂದಿನ ತಿಂಗಳ ಅಕ್ಕಿ ನೀಡದೆ ಫಲಾನುಭವಿ ಪಟ್ಟಿಯಿಂದ ಹೆಸರು ಕಿತ್ತು ಹಾಕುತ್ತಾರೆಂಬ ಭಯ ಜನರಲ್ಲಿದೆ. ಹೀಗಾಗಿ ತಾಲೂಕಿನ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಸಾಕಷ್ಟು ವಂಚನೆ ನಡೆಸುತ್ತಿದ್ದಾರೆ. ಇನ್ನು ಅನೇಕ ಕಡೆಗಳಲ್ಲಿ ಪಡಿತರ ಧಾನ್ಯ ನ್ಯಾಯಬೆಲೆ ಅಂಗಡಿಗೆ ಬರುವ ಮುನ್ನವೆ ಮಂಗಮಾಯ ಮಾಡಿ ಕೊನೆ ಗಳಿಗೆಯಲ್ಲಿ ಆಹಾರ ಧಾನ್ಯ ಪಡೆಯಲು ಬರುವ ಫಲಾನುಭವಿಗಳಿಗೆ ಪಡಿತರ ಕೊರತೆ ಉಂಟಾಗುತ್ತದೆ. ಪ್ರತಿ ತಿಂಗಳು ನೂರಾರು ಕ್ವಿಂಟಲ್ ಪಡಿತರ ಧಾನ್ಯ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಶಂಕಿಸಲಾಗಿದೆ.
ನಿಯಮ ಪಾಲಿಸದ ಅಂಗಡಿಗಳು: ರಜಾ ದಿನಗಳನ್ನು ಹೊರತುಪಡಿಸಿ ನಿತ್ಯ ನ್ಯಾಯಬೆಲೆ ಅಂಗಡಿ ತೆರೆದಿರಬೇಕೆಂಬ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ. ಕೇವಲ 2-3 ದಿನಗಳಲ್ಲಿ ಪಡಿತರ ವಿತರಣೆ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಉಳಿದ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಫಲಾನುಭವಿ ಹೋದರೆ ಸ್ಟಾಕ್ ಇಲ್ಲ, ಮುಂದಿನ ತಿಂಗಳು ಬನ್ನಿ ಎಂದು ವಾಪಸ್ ಕಳಿಸುವುದೇ ಹೆಚ್ಚು.
ಎಲ್ಲಿದೆ ಪಾರದರ್ಶಕ ಆಡಳಿತ?: ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬಡವರ ಅನ್ನವನ್ನು ಪ್ರಭಾವಿಗಳು ಕಿತ್ತುಕೊಂಡಿದ್ದಾರೆ. ಈ ರೀತಿ ಅವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿವೆ. ನಮಗೊಬ್ಬ ಉತ್ತಮ ಮೇಸ್ಟ್ರು (ಸಿಎಂ ಸಿದ್ದರಾಮಯ್ಯ) ಸಿಕ್ಕಿದ್ದಾರೆ, ಅವರ ಆಶಯದಂತೆ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುತ್ತೇನೆಂದು ಮತದಾರರಿಗೆ ನೀಡಿರುವ ವಾಗ್ದಾನವನ್ನು ಸಚಿವರು ಮರೆತಂತೆ ಕಾಣುತ್ತಿದೆ. ತಮ್ಮ ಸ್ವಕ್ಷೇತ್ರದಲ್ಲೆ ಇಂತಹ ಅಕ್ರಮಗಳು ನಡೆದರೂ ಸಚಿವರಿಗೆ ಗೊತ್ತಿಲ್ಲವೇ ಎಂಬುದು ಕ್ಷೇತ್ರದ ಜನತೆ ಪ್ರಶ್ನೆ.
ಕಾರ್ಡ್‌ಗಳ ಗೊಂದಲ: ಅನ್ನಭಾಗ್ಯ ಯೋಜನೆ ಅನುಷ್ಠಾನ ಮಾಡಿರುವ ಸರ್ಕಾರ ಈ ವರೆಗೂ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಪ್ರತಿ ತಿಂಗಳು ಕಾರ್ಡ್‌ಗಳನ್ನು ಬದಲಾವಣೆ ಮಾಡುತ್ತಿರುವ ಆಹಾರ ಇಲಾಖೆ ಕ್ರಮದಿಂದ ನೂರಾರು ಬಡವರು ಈ ಯೋಜನೆಯಿಂದ ವಂಚಿತವಾಗಿದ್ದಾರೆ.
ಪ್ರತಿ ತಿಂಗಳು ಕಾರ್ಡ್‌ಗಳ ಪರಿಶೀಲನೆ, ಭಾವಚಿತ್ರ, ಹೆಬ್ಬೆಟ್ಟು ನೆಪದಲ್ಲಿ ಗೊಂದಲ ಸೃಷ್ಟಿಸಿದ್ದಾರೆ.
- ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.