ಬಳ್ಳಾರಿ

ಗಡಿ ಸಮಸ್ಯೆ ಬಗೆಹರಿಸಲು ಸಭೆ ನಡೆಸಿ: ಟಪಾಲ್

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 9
ಆಂಧ್ರ ಮತ್ತು ಕರ್ನಾಟಕ ರಾಜ್ಯದ ಗಡಿ ಗುರುತಿಸಲು ಎರಡೂ ಸರ್ಕಾರಗಳು ಸೇರಿ, ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಂದ ಸರ್ವೇ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರೂ, ಇಲ್ಲಿ ವರೆಗೆ ಎರಡೂ ರಾಜ್ಯ ಸರ್ಕಾರಗಳು ಸರ್ವೇ ಆಫ್ ಇಂಡಿಯಾದೊಂದಿಗೆ ಪತ್ರ ವ್ಯವಹಾರ ನಡೆಸದಿರುವುದು ನೋವಿನ ಸಂಗತಿ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರದ ಕಂದಾಯ ಸಚಿವ ರಘುವೀರ ರೆಡ್ಡಿ ಮುತುವರ್ಜಿ ವಹಿಸಿ, ರಾಜ್ಯದ ಕಂದಾಯ ಸಚಿವರಿಗೆ ಪತ್ರ ಬರೆದು ಗಡಿ ಸಮಸ್ಯೆ ಬಗೆಹರಿಸಲು ಅ. 20ರಿಂದ 25ರ ಒಳಗಾಗಿ ಸಭೆ ನಡೆಸಿ, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಂಧ್ರ ಸರ್ಕಾರದ ಸಹಕಾರದೊಂದಿಗೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಂದ ರಾಜ್ಯ ಗಡಿ ಗುರುತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಂಧ್ರದ ಓಎಂಸಿ ಕಂಪನಿ ಕರ್ನಾಟಕದ ಗಡಿ ಹಾಳು ಮಾಡುವ ಮೂಲಕ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಅಂದಾಜು ರು. 29 ಲಕ್ಷ ಟನ್ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದರ ಕುರಿತು, ಆಂಧ್ರದ ಮೂವರು ಉನ್ನತಾಧಿಕಾರಿಗಳ ಸಮಿತಿ, ಸಿಬಿಐ ಅಧಿಕಾರಿಗಳ ವರದಿ ಅಲ್ಲದೇ, ಕಾಂಗ್ರೆಸ್ ವತಿಯಿಂದ 2008ರಲ್ಲಿ ಸತ್ಯಶೋಧನಾ ವರದಿಯಲ್ಲಿಯೂ ಉಲ್ಲೇಖಿಸಲಾಗಿದೆ. ಈ ಕಂಪನಿಯೊಂದಿಗೆ ಕರ್ನಾಟಕದ 3 ಗಣಿ ಗುತ್ತಿಗೆದಾರರಾದ ಎಂಬಿಟಿ, ಎನ್.ಆರ್. ಹಿಂದ್ ಟ್ರೇಡರ್ಸ್ ಗಣಿ ಗುತ್ತಿಗೆದಾರರು ಹೊಂದಾಣಿಕೆ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಲು ಸಹಕರಿಸಿರುತ್ತಾರೆ ಎಂಬ ಅಂಶ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಿದೆ. ಅಲ್ಲದೆ, ಈ ವರದಿ ಅನ್ವಯ ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಈ ಮೂರು ಗಣಿ ಕಂಪನಿಗಳ ಗುತ್ತಿಗೆ ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಮುಖಂಡರ ಪ್ರಭಾವ ಸರ್ಕಾರದ ಮೇಲಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದರು.
ಚುನಾವಣೆಯ ಮುಂಚೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಈಗ ತಮ್ಮದೇ ಸರ್ಕಾರವಿದ್ದು, ಈ ಕುರಿತು ಮೌನ ವಹಿಸಿರುವ ಮುಖ್ಯಮಂತ್ರಿಗಳು, ಗಡಿ ಒತ್ತುವರಿ ಸೇರಿದಂತೆ ಅಕ್ರಮ ಗಣಿಗಾರಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಸ್.ಆರ್. ಹಿರೇಮಠ್ ಗಣಿ ಅಕ್ರಮ ಆರೋಪವಿರುವ ಎಲ್ಲ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.