ಕೆರೆಗೆ ಮೀನು ಬಿಟ್ಟು ವಿನೂತನ ಪ್ರತಿಭಟನೆ
ಹೂವಿನಹಡಗಲಿ: ಮೀನುಗಾರಿಕೆ ಮಾಡಲು ಕೆರೆಗೆ ಟೆಂಡರ್ ಕರೆಯುವಂತೆ ಆಗ್ರಹಿಸಿ, ಕೆರೆ ನೀರಿಗೆ ಮೀನು ಬಿಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿರುವ ಘಟನೆ ತಾಲೂಕಿನ ಮುದೇನೂರಿನಲ್ಲಿ ಸೋಮವಾರ ನಡೆದಿದೆ.
ಗ್ರಾಪಂ ಸದಸ್ಯರು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ, ಶೀಘ್ರದಲ್ಲೇ ಕೆರೆ ಟೆಂಡರ್ ಪ್ರಕ್ರಿಯೆ ಆರಂಭಿಸದಿದ್ದರೇ ನಂದಿಹಳ್ಳಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ಕೈಗೊಂಡು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಮುದೇನೂರು ಕೆರೆ 279 ಎಕರೆ ವಿಸ್ತೀರ್ಣ ಹೊಂದಿದೆ. 2012ರಲ್ಲಿ ಮುದೇನೂರು ಕೆರೆಯನ್ನು ವಾರ್ಷಿಕ ರು. 5 ಸಾವಿರಗಳಿಗೆ ಟೆಂಡರ್ ನೀಡಲಾಗಿದೆ ಎಂದು ಠರಾವು ಬರೆದುಕೊಂಡಿದ್ದಾರೆ. ಆದರೆ, ಮಾಹಿತಿ ಹಕ್ಕು ಅಡಿ ಟೆಂಡರ್ ಕುರಿತು ವಿವರ ಕೇಳಿದಾಗ ಎಚ್.ಜಿ. ನಾಗರಾಜ ಎಂಬುವವರಿಗೆ ಆಗಿರುವ ಠರಾವು ಕಿತ್ತು ಹಾಕಿ, ಟೆಂಡರ್ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎನ್ನವುದು ಯುವಕರ ದೂರು.
ಈಗಾಗಲೇ 2-3 ಗ್ರಾಪಂ ಸಭೆಯಲ್ಲಿ ಕೆರೆ ಟೆಂಡರ್ ಕುರಿತು ಕ್ರಮ ಕೈಗೊಂಡು ಆ. 1ರಂದು ಸಭೆ ಕರೆದು ಆ. 19ರಂದು ಟೆಂಡರ್ ಕರೆಯಲು ತೀರ್ಮಾನಿಸಿದ್ದರು. ತದನಂತರ ಸೆ. 20ರಂದು ಬೆಳಗ್ಗೆ 11ಕ್ಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿತ್ತು. ಆದರೆ, ಇಲ್ಲಿ ವರೆಗೂ ಟೆಂಡರ್ ಕರೆಯದಿರುವ ಹಿಂದಿನ ಮರ್ಮವೇನು ಎಂದು ಯುವಕರು ಪ್ರಶ್ನಿಸುತ್ತಾರೆ.
ಟೆಂಡರ್ ಆಗದೆ ಮೀನು ಬಿಟ್ಟರು: ಇಲ್ಲಿ ವರೆಗೆ ಮೀನುಗಾರಿಕೆ ಮಾಡಲು ಕೆರೆ ಟೆಂಡರ್ ಕರೆದಿಲ್ಲ. ಆದರೆ, ತಮಗೆ ಟೆಂಡರ್ ಆಗಿದೆ ಎಂದು ಜನರನ್ನು ಹಾದಿ ತಪ್ಪಿಸುತ್ತಿರುವ ಎಚ್.ಎಂ. ಕೊಟ್ರಯ್ಯ, ಎಚ್.ಜಿ. ನಾಗರಾಜ, ಮಹೇಂದ್ರಪ್ಪ, ಸಣ್ಣವೀರಯ್ಯ ಕೆರೆಯಲ್ಲಿ ಮೀನು ಬಿಟ್ಟಿದ್ದಾರೆ. ಇವರ ವಿರುದ್ಧ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕೆಂದು ನಂದಿಬೇವೂರು ಮಹಾಂತಯ್ಯ ಒತ್ತಾಯಿಸಿದ್ದಾರೆ.
ಈ ಕೆರೆ ಕುರಿತು ಸಾಕಷ್ಟು ಬಾರಿ ಹೋರಾಟ ಮಾಡುತ್ತ ಬಂದಿದ್ದೇವೆ. ಎಲ್ಲ ಅಧಿಕಾರಿಗಳಿಗೂ ಮನವಿ ನೀಡಿದರೂ ಯಾರೂ ಕ್ರಮ ಕೈಗೊಂಡಿಲ್ಲ. ಆದರಿಂದ ಗ್ರಾಮದ ಕೆಲವರು ಕೆರೆಯಲ್ಲಿ ಮೀನಿನ ಮರಿ ಬಿಟ್ಟಿದ್ದಾರೆ. ಅವರಿಗೆ ಮೀನು ಬಿಡಲು ಯಾವುದೇ ಹಕ್ಕಿಲ್ಲ. ಆದರಿಂದ ಗ್ರಾಮಸ್ಥರೆಲ್ಲ ಸೇರಿ ಕೆರೆ ಟೆಂಡರ್ಗೆ ಆಗ್ರಹಿಸಿ ಮೀನಿನ ಮರಿ ಬಿಟ್ಟು ಪ್ರತಿಭಟನೆ ಮಾಡುತ್ತಿದ್ದೇವೆ. ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೇ, ನಂದಿಹಳ್ಳಿ ಗ್ರಾಪಂಗೆ ಬೀಗ ಹಾಕಿ ನ್ಯಾಯಾಲಯದ ಮೊರೆ ಹೋಗಲು ಸಿದ್ದ ಎನ್ನುತ್ತಾರೆ ಶಬ್ಬೀರ್.
3-4 ವರ್ಷಗಳ ಹಿಂದೆ ಕೆರೆಯಲ್ಲಿ ನೀರು ಇಲ್ಲದಿದ್ದರೂ ರು. 76 ಸಾವಿರಗಳ ಕೆರೆ ಟೆಂಡರ್ ಆಗಿತ್ತು. ಈಗ ಕೇವಲ ರು. 5 ಸಾವಿರಗಳಿಗೆ ಗ್ರಾಪಂ ಟೆಂಡರ್ ನೀಡಿದೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಎಲ್ಲ ರೀತಿಯ ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸೊಪ್ಪಿನ ಮಲ್ಲಿಕಾರ್ಜುನ, ಪಕ್ರುದ್ದಿನ್ಸಾಬ್, ನಂದಿಬೇವೂರು ಮಹಾಂತಯ್ಯ, ಶಬ್ಬೀರ್, ಷಣ್ಮುಖಪ್ಪ, ಹುಸೇನ್ಸಾಬ್, ಎಚ್. ವಾಮದೇವಪ್ಪ, ಬಿ. ಗುರುಸ್ವಾಮಿ, ತಳವಾರ ಶ್ರೀನಿವಾಸ ಸೇರಿದಂತೆ 50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

