ಕುರುಬರ ಸಂಘಕ್ಕೆ ಮರು ಚುನಾವಣೆಗೆ ಆಗ್ರಹ
ಬಳ್ಳಾರಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಸಂಘದ ನೂತನ ನಿರ್ದೇಶಕರ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಮರು ಚುನಾವಣೆ ನಡೆಸಬೇಕು ಎಂದು ನ್ಯಾಯವಾದಿ ಲಕ್ಕವಳ್ಳಿ ಮಂಜುನಾಥ್ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಸಂಘದ ಸುಮಾರು 200 ಕೋಟಿ ರು.ಗಳಷ್ಟು ಆಸ್ತಿಯಿದ್ದು, ಪ್ರತಿ ತಿಂಗಳು ಇದರಿಂದ ದೊರೆಯುವ ಹಣವನ್ನು ಪಡೆಯಲು ಈ ಹಿಂದೆ ಅಧಿಕಾರದಲ್ಲಿದ್ದ ಸಂಘದ ಸದಸ್ಯರೇ ಖೊಟ್ಟಿ ಮತ ಸೃಷ್ಟಿಸಿ ಚುನಾವಣೆ ನಡೆಸಿದ್ದು, ಬಹುತೇಕರು ಆಡಳಿತದಲ್ಲಿರುವವರ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಆಯ್ಕೆಯಾದವರ ಸದಸ್ಯತ್ವವನ್ನು ಅಸಿಂಧುಗೊಳಿಸಿ, ಮರು ಚುನಾವಣೆ ಆಯೋಜಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸ್ಥಾನಕ್ಕೆ ರಾಜ್ಯಾದ್ಯಂತ ಚುನಾವಣೆ ನಡೆದಿದ್ದು, ಬೆಂಗಳೂರಿಗೆ 18 ಹಾಗೂ ಪ್ರತಿ ಜಿಲ್ಲೆಗೆ 5 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಬೆಂಗಳೂರಿನಲ್ಲಿ 22 ಸಾವಿರ ಮತದಾರರಿದ್ದು, ಈ ಪೈಕಿ ಚುನಾವಣೆಯಲ್ಲಿ 6 ಸಾವಿರ ಜನರು ಮತದಾನ ಮಾಡಿದ್ದಾರೆ. ಈ ಪೈಕಿ ಸುಮಾರು 3 ಸಾವಿರ ಮತಗಳು ಖೊಟ್ಟಿಯಾಗಿದ್ದು, ಚುನಾವಣೆಯನ್ನು ಅಕ್ರಮವಾಗಿ ನಡೆಸಲಾಗಿದೆ ಎಂದು ಆರೋಪಿಸಿದರು.
ಕೇವಲ ಮೂರು ವರ್ಷಗಳಿಗೆ ಮಾತ್ರ ಸೀಮಿತವಾಗಿದ್ದ ಸದಸ್ಯರ ಅವಧಿಯನ್ನು ಕಳೆದ ಬಾರಿ ಚುನಾವಣೆ ನಡೆಸದೇ ಕಳೆದ ಎರಡು ಅವಧಿ ಇವರೇ ಮುಂದುವರೆಸಿದ್ದಾರೆ. ಇದರಿಂದ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಯಿತು. ಕೂಡಲೇ ಎಚ್ಚೆತ್ತುಕೊಂಡ ಸಂಘದ ಸದಸ್ಯರು ಚುನಾವಣೆ ಆಯೋಜಿಸುವುದಾಗಿ ತಿಳಿಸಿದ್ದರು. ಚುನಾವಣೆಯ ಅಕ್ರಮವಾಗಿ ನಡೆದು, ಬಳ್ಳಾರಿಯಲ್ಲಿ ಸಂಘಕ್ಕೆ ಈ ಹಿಂದೆ ಉಪಾಧ್ಯಕ್ಷೆ ಹಾಗೂ ನಿರ್ದೇಶಕಿಯಾಗಿದ್ದ ಜೀವೇಶ್ವರಿ ರಾಮಕೃಷ್ಣ ಅವರೇ ಮರು ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಲ್ಲೇಶ್ ಮಾತನಾಡಿ, ಚುನಾವಣೆ ಅಕ್ರಮ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಸಿದ್ದನಗೌಡ, ಅಯ್ಯಾಳಿ ಮೂರ್ತಿ, ಕಟ್ಟೆಪ್ಪ, ಬಂಗ್ಲೆ ಮಲ್ಲಿಕಾರ್ಜುನ, ಸಮಾಜದ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

