ಸಸಿಹಬ್ಬ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ
ಹೂವಿನಹಡಗಲಿ: ತಾಂಡಾದ ಜನಾಂಗದ ಅಧಿದೇವತೆ ಠಕರಿಭನಕಿ ದೇವಿ ಎಂಬ ಇಬ್ಬರು ಅಕ್ಕ-ತಂಗಿಯರ ಜಾತ್ರೆಯಲ್ಲಿ ಸಸಿ ಹಬ್ಬದ ಸಡಗರ ಸಂಭ್ರಮದಲ್ಲಿದ್ದ ಮನೆಯಲ್ಲಿ ಅಕ್ಕ, ತಂಗಿಯರಿಬ್ಬರು ಒಟ್ಟಿಗೆ ಸಾವಿನಲ್ಲಿ ಒಂದಾಗಿರುವ ಘಟನೆಯಿಂದ ಸೂತಕದ ಛಾಯೆ ಆವರಿಸಿತ್ತು.
ಅ. 8ರಿಂದ 18ರ ವರಗೆ ಜಾತ್ರೆ ನಡೆಯುವ ಠಕರಿಭನಕಿ ದೇವಸ್ಥಾನದ ಆವರಣದಲ್ಲಿ ಅನಾದಿ ಕಾಲದ ಬಾವಿಯೊಂದು ಇತ್ತು. ಬಾವಿಯಲ್ಲಿ ಸಾಕಷ್ಟು ಹಾಳಾಗಿದ್ದು ಹಾಗೂ ಹೂಳು ತುಂಬಿರುವುದನ್ನು ಕಂಡು ದೇವಸ್ಥಾನದ ಕಮಿಟಿಯವರು ಬಾವಿ ಸುತ್ತಲೂ ಕಲ್ಲಿನ ಗೋಡೆ ನಿರ್ಮಾಣ ಮಾಡಿದ್ದಾರೆ. ಈ ಬಾವಿಯಲ್ಲಿ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದರಿಂದ ಅಕ್ಕ ತಂಗಿ ನೀರು ತುಂಬಲು ಹೋಗಿ ನೀರು ಪಾಲಾಗಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಜಾತ್ರೆಯ ಕೊನೆದಿನವಾದ ಶೀಗೆಹುಣ್ಣಿಮೆಯಂದು ಸಸಿ ಹಬ್ಬ ಆಚರಣೆ ಮಾಡಿ ದೇವಿಗೆ ಅರ್ಪಿಸಿ ಗುರು ಹಿರಿಯರಿಗೆ ಕಾಲಿಗೆ ನಮಸ್ಕಾರ ಮಾಡಿದ್ದೇ ಕೊನೆಯಾಯಿತೇ? ಆ ದೇವರಿಗೂ ಅಕ್ಕ-ತಂಗಿಯ ಪ್ರೀತಿ ಸಹಿಸಿಕೊಳ್ಳಲು ಆಗಲಿಲ್ಲವೇ? ಈ ಸಾವು ನ್ಯಾಯವೇ ಎಂದು ತಾಯಿ ರೋದಿಸುತ್ತಿರುವುದನ್ನು ಕಂಡು ನೆರೆದಿದ್ದ ಜನತೆಯ ಕಣ್ಣಂಚಲ್ಲಿ ನೀರು ತಂದಿತು.
ಇಡೀ ತಾಂಡಾದ ಜನತೆಯೇ ಹಬ್ಬದ ಸಂಭ್ರಮದಲ್ಲಿತ್ತು. ಜಾತ್ರೆಯ ಕೊನೆಯ ದಿನ ಎಂತಹ ದುರ್ಘಟನೆ ಸಂಭವಿಸಿತ್ತಲ್ಲ. ಅನಾದಿ ಕಾಲದ ಬಾವಿಯಲ್ಲಿ ಈ ವರೆಗೂ ಯಾರು ಸಾವನ್ನಪ್ಪಿಲ್ಲ. ಠಕರಿಭನಕಿ ಇಬ್ಬರು ಅಕ್ಕತಂಗಿಯರು, ಈಗ ಸಾವನ್ನಪ್ಪಿರುವ ಅಕ್ಕತಂಗಿಯರು ದೇವಸ್ಥಾನದ ಆವರಣದಲ್ಲೇ ಸಾವನ್ನಪ್ಪಿರುವುದನ್ನು ತಾಂಡಾದ ಜನತೆ ವಿವಿಧ ರೀತಿಯಲ್ಲಿ ಚರ್ಚೆ ಮಾಡುತ್ತಿದ್ದುದು ಕಂಡುಬಂದಿತು.
ಬಾವಿಯು ಸಾಕಷ್ಟು ಆಳವಾಗಿದ್ದು, ಬಹಳಷ್ಟು ಅಪಾಯಕಾರಿಯಾಗಿದೆ. ಆದರಿಂದ ಬಾವಿಯ ಸುತ್ತಲೂ ದೇವಸ್ಥಾನದ ಕಮಿಟಿಯರು ಕಾಪೌಂಡ್ ಹಾಗೂ ಕಬ್ಬಿಣದ ಗೇಟ್ ಅಳವಡಿಸಬೇಕಿತ್ತು. ಇದನ್ನು ಮಾಡಿದ್ದರೆ ಈ ದುರ್ಘಟನೆಯನ್ನು ತಪ್ಪಿಸಬಹುದಿತ್ತು ಎಂಬುದು ಜನತೆಯ ಮಾತು.
ಆದರೆ ಏನೂ ಅರಿಯದ ಆ ಬಾಲಕಿಯರ ಸಾವು ಮಾತ್ರ ತಾಂಡಾದ ಜನತೆಯಲ್ಲಿ ತೀವ್ರ ದುಃಖ ತರಿಸಿದೆ. ಹಬ್ಬದ ಸಂಭ್ರಮದಲ್ಲಿದ್ದ ತಾಂಡಾದ ಜನತೆ, ಕುಟುಂಬದವರಿಗೆ ಆ ಮುಗ್ಧ ಬಾಲಕಿಯರ ಸಾವು ಬರಸಿಡಿಲು ಬಡಿದಂತಾಗಿದೆ.
ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

